(www.vknews.in) ; ಇಬ್ಲೀಸನ* ಮಾತಿನಲ್ಲಿ ಪೂರ್ಣ ವಿಶ್ವಾಸ ಬಾರದಾಗ ನವಿಲು ಕೇಳಿತು. *”ನೀನು ಹೇಳುವುದು ನಿಜವಾ?* ಆಗ ಇಬ್ಲೀಸನು ಹೇಳಿದನು. *”ನೀನು ಏನು ಮಾತನಾಡುವುದು? ನಾನು ಸುಳ್ಳು ಹೇಳುವುದಾ? ಅಲ್ಲಾಹನಾಣೆ ಸತ್ಯ”* ಅಲ್ಲಾಹನ ಹೆಸರು ಹೇಳಿ ಆಣೆ ಹಾಕಿ ಹೇಳಿದಾಗ ನವಿಲಿಗೆ ದೃಢವಾಯಿತು. ಆಗ ನವಿಲು ಹೇಳಿತು. *”ನೋಡೋಣ.. ಆದರೆ ಆ ಕೆಲಸ ಮಾಡಲು ನನಗೆ ಕೆಲವು ತಡೆಗಳು ಇವೆ. ನಾನು ನಿನ್ನನ್ನು ಕರಕೊಂಡು ಹೋಗುವಾಗ ಸ್ವರ್ಗದ ಕಾವಲುಗಾರ ರಿಝ್ವಾನ್ (ಅ) ರವರ ತಪಾಸಣೆಗೆ ಸ್ಪಂದಿಸಲು ನನಗೆ ಕಷ್ಟವಿದೆ. ನಾನೊಂದು ಕೆಲಸ ಮಾಡುತ್ತೇನೆ. ಸ್ವರ್ಗದಲ್ಲಿ ನಮ್ಮ ಪ್ರಾಣಿ ಪಕ್ಷಿಗಳ ನೇತಾರ ಹಾವು ಇದೆ. ಅವನಲ್ಲಿ ಹೇಳುತ್ತೇನೆ. ಅವನು ಹೇಗಾದರೂ ಮಾಡಿ ನಿನ್ನನ್ನು ಸ್ವರ್ಗದ ಒಳಗೆ ಮಾಡಿಯಾನು”*
*ಅಂತೆಯೇ* ನವಿಲು ಹಾವಿನತ್ತ ಹೋಗಿ ನಡೆದ ಘಟನೆಯನ್ನು ಹೇಳಿತು. ಆ ವೇಳೆ ಈ ಹಾವು ಆದಮ್ ಹವ್ವಾರ ಸೇವಕನಂತೆ ಸ್ವರ್ಗದಲ್ಲಿ ಕೆಲಸ ಮಾಡುತ್ತಿತ್ತು. ಕೂಡಲೇ ಹಾವು ಇಬ್ಲೀಸನು ಕುಳಿತಲ್ಲಿಗೆ ಬಂತು. ಇಬ್ಲೀಸನು ಸಂಗತಿಯನ್ನು ಹಾವಿನಲ್ಲಿಯೂ ನವಿಲಿನಲ್ಲಿ ಹೇಳಿದಂತೆ ಆಣೆಹಾಕಿ ಹೇಳಿದನು. ಆಗ ಹಾವು ಕೇಳಿತು *”ನೀನು ಹೇಳುವುದು ಸರಿ. ಆದರೆ ನಾನು ನಿನ್ನನ್ನು ಕೊಂಡು ಹೋಗುವುದು ಹೇಗೆ?”* ಆಗ ಇಬ್ಲೀಸನು ಹೇಳಿದನು. *”ನಾನೊಂದು ಉಪಾಯ ಹೇಳುತ್ತೇನೆ. ನೀನು ನಿನ್ನ ಬಾಯಿ ತೆರೆ. ಅಲ್ಲಿ ಹಲ್ಲಿನ ದವಡೆಯ ಎಡೆಯಲ್ಲಿ ಸ್ವಲ್ಪ ಗ್ಯಾಪ್ ಇದೆ. ನನಗೆ ಆ ಜಾಗ ಸಾಕು. ನನಗೆ ಯಾವ ರೂಪ ಬದಲಾವಣೆ ಮತ್ತು ದೊಡ್ಡದು ಚಿಕ್ಕದು ಆಗುವ ಮಹಾ ಶಕ್ತಿಯನ್ನು ಅಲ್ಲಾಹನು ಕೊಟ್ಟಿದ್ದಾನೆ. ಆದ್ದರಿಂದ ಅದು ನನಗೆ ಬಹಳ ಸುಲಭ.”*
*ಹಾವು* ಬಾಯಿ ತೆರೆಯಿತು. ಇಬ್ಲೀಸನು ಬಾಯಿಗೆ ಹಾರಿ ಅಲ್ಲಿ ಕುಳಿತ. ಹಾವು ಬಾಯಿ ಮುಚ್ಚಿತು. (ಗಮನಾರ್ಹ ಸಂಗತಿಯೆಂದರೆ, ಇದರ ನಂತರ ಹಾವಿನ ದವಡೆ ವಿಷಪೂರಿತವಾಯಿತು) ಬಳಿಕ ಸ್ವರ್ಗ ಪ್ರವೇಶ ಮಾಡಿ ಹೇಳಿತು. *”ಇನ್ನು ಬೇಗನೆ ಹೊರ ಬಾ”* ಆಗ ಇಬ್ಲೀಸನು ಹೇಳಿದನು. *”ನನ್ನ ಉದ್ದೇಶ ಜಾಗ ಇದಲ್ಲ. ಇಲ್ಲಿ ಆದಮ್ ಹವ್ವಾ ಎಂಬ ನವ ದಂಪತಿಗಳು ಎಲ್ಲೋ ವಾಸವಾಗಿದ್ದರೆ. ಅವರು ಇರುವ ಜಾಗಕ್ಕೆ ಮಾಡಿ ಕೊಡು. ನಾನು ಹೊರ ಬಾರದೆ ನಿನ್ನ ಬಾಯಿಯ ಒಳಗೆ ಕುಳಿತೇ ಮಾತನಾಡುತ್ತೇನೆ.”*
*ಹಾವು* ನಿಗದಿತ ಜಾಗ ತಲುಪಿತು. ಇಬ್ಲೀಸನು ಅದರ ಬಾಯಿಯಿಂದಲೇ *”ನಾನು ಈ ತನಕ ಎಷ್ಟೋ ವರ್ಷಗಳಿಂದ ಈ ಸ್ವರ್ಗದಲ್ಲಿ ನಿಮ್ಮ ಸೇವಕನಂತೆ ಇದ್ದೇನೆ. ನಾನು ನಿಮಗೆ ಈ ಸ್ವರ್ಗದ ಎಲ್ಲಾ ರಹಸ್ಯವನ್ನು ಹೇಳಿ ಕೊಡುತ್ತೇನೆ. ಆದರೆ ನನಗೆ ಅಲ್ಲಾಹನು ನಿಮಗೆ ತಿನ್ನಲು ನಿಷೇಧ ಮಾಡಿದ ಮರ ಯಾವುದೆಂದು ಹೇಳಬೇಕು”* ಆಗ ಆ ಮುಗ್ದ ಮಹಾತಾಯಿ ಹೇಳಿಕೊಟ್ಟರು. ಇಬ್ಲೀಸನು ಹಾವಿನ ಬಾಯಿಯಿಂದ ಹಾವು ಮಾತಾಡುವಂತೆಯೇ ಮಾತನಾಡಿ ಕೇಳಿದನು. *”ನಿಮಗೆ ಇದರ ರಹಸ್ಯ ಗೊತ್ತಿದೆಯಾ? ಈ ಮೊದಲು ಈ ಸ್ವರ್ಗದಲ್ಲಿ ವಾಸವಿದ್ದ ಒಬ್ಬರಲ್ಲಿ ಅಲ್ಲಾಹನು ಹೀಗೆ ಹೇಳಿದ್ದ. ಅವರು ಅದನ್ನು ಪರಿಗಣಿಸದೆ ತಿಂದು ಬಿಟ್ಟರು. ಆ ಕಾರಣದಿಂದ ಅವರು ಸುಮಾರು ಎರಡು ಸಾವಿರ ವರ್ಷಗಳಿಂದ ಈ ಸ್ವರ್ಗದಲ್ಲಿಯೇ ಇದ್ದಾರೆ. ಬೇಕಾದರೆ ಆ ಮರದ ಬುಡಕ್ಕೆ ಹೋಗಿ ನೋಡಿ. ಬಹುತೇಕ ಎಲ್ಲಾ ಸಮಯದಲ್ಲಿ ಅವರು ಅಲ್ಲೇ ಇರುತ್ತಾರೆ. “*
*ಇಬ್ಲೀಸನ* ಮಾತಿನಿಂದ ವಂಚಿತರಾದ ಹವ್ವಾರವರು ಕೂಡಲೇ ಆ ನಿಷೇಧಿತ ಮರದತ್ತ ನಡೆದರು. ಅಷ್ಟರಲ್ಲಿ ಇಬ್ಲೀಸನು ಹಾವಿನ ಬಾಯಿಂದ ಮಿಂಚಿನಂತೆ ಹಾರಿ ಆ ಮರದ ಬುಡದಲ್ಲಿ ಕುಳುತಿದ್ದನು. ಮರದ ಹತ್ತಿರ ತಲುಪಿದ ಹವ್ವಾರವರು ಈ ಅಪರಿಚಿತ ವ್ಯಕ್ತಿಯಲ್ಲಿ ಕೇಳಿದರು. *” ನೀವು ಯಾರು?”* ಆಗ ಆತ ಹೇಳಿದ. *”ನಾನು ನಿಮ್ಮಂತೆಯೇ ಅಲ್ಲಾಹನ ಒಬ್ಬ ದಾಸ. ನನ್ನನ್ನು ಬೆಂಕಿಯಿಂದ ಸೃಷ್ಟಿಸಿ ಬಳಿಕ ಅವನ ಮಲಕುಗಳಿಂದ ಸುಜೂದು ಮಾಡಿಸಿ ಈ ಸ್ವರ್ಗಕ್ಕೆ ಕಳುಹಿಸಿದ್ದಾನೆ. ನಾನಿಲ್ಲಿ ವಾಸಹೂಡಿ ಸುಮಾರು ಎರಡು ಸಾವಿರ ವರ್ಷಗಳು ಕಳೆಯಿತು. ನಿಮ್ಮಲ್ಲಿ ಹೇಳಿದಂತೆಯೇ ನನ್ನಲ್ಲೂ ಈ ಮರದ ಹಣ್ಣು ತಿನ್ನಬಾರದೆಂದು ತಾಕೀತು ಮಾಡಿದ್ದನು. ಆದರೆ ಕೆಲವು ಮಲಕುಗಳು ನನ್ನಲ್ಲಿ ತಿನ್ನಲು ಉಪದೇಶ ಮಾಡಿದರು. ಅವರ ನಿರ್ದೇಶದಂತೆ ತಿಂದೆನು. ಅಲ್ ಹಮ್ದುಲಿಲ್ಲಾಹ್.. ಈಗ ತೊಂದರೆಯಿಲ್ಲ. ನನಗೆ ಈಗ ರೋಗ ಇಲ್ಲ. ವಯಸ್ಸು ಆಗೋದಿಲ್ಲ. ಮುಂದಕ್ಕೆ ಇಲ್ಲಿಂದ ಹೊರ ಹೋಗುತ್ತೇನೆ ಎಂಬ ಹೆದರಿಕೆಯೂ ಇಲ್ಲ. ಆದ್ದರಿಂದ ಬೇಗ ತೆಗೆದು ತಿನ್ನಿರಿ. ಗಂಡನಿಗೂ ತೆಗೆದುಕೊಂಡು ಹೋಗಿರಿ. ಮೊದಲು ತಿಂದವರಿಗೆ ಸ್ಥಾನಮಾನ ಜಾಸ್ತಿ. ಅದಕ್ಕೋಸ್ಕರ ನೀವು ಮೊದಲು ತಿಂದು ಬಳಿಕ ಅವರಿಗೆ ಕೊಡಿರಿ”*
*ಬೀವಿ* ಹವ್ವಾರವರು ಬಹಳ ಸಂತೋಷದಿಂದ ಕೂಡಲೇ ಪತಿಯತ್ತ ಹೋಗಿ ನಡೆದ ಘಟನೆಯನ್ನು ಹೇಳಿದರು. ಅವರಿಂದ ಹಣ್ಣು ಕಿತ್ತುವ ಅನುಮತಿ ಪಡೆದು ಮರದತ್ತ ಬಂದು ಏಳು ಗೊಂಚಲಿನಿಂದ ಏಳು ಹಣ್ಣುಗಳನ್ನು ಕಿತ್ತರು. ಅದರಲ್ಲಿ ಒಂದನ್ನು ಆಗಲೇ ತಿಂದರು. ಒಂದನ್ನು ಪತಿಯಲ್ಲಿ ಹೇಳದೆ ಅವರು ತಿಳಿಯದ ಹಾಗೆ ಜೋಪಾನವಾಗಿ (STOCK) ಇಟ್ಟರು. (ಈ ಮಹಾ ತಾಯಿಯ ಆ ಪತಿ ತಿಳಿಯದೆ ಶೇಖರಿಸಿಟ್ಟ ಈ ಸ್ವಭಾವ ನಮ್ಮ ಮಹಳೆಯರಿಗೆ ಅಂತ್ಯ ದಿನದ ವರೆಗೂ ಇರಬಹುದೆಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ) ಬಾಕಿ ಉಳಿದ ಐದನ್ನು ಪತಿಗೆ ತಂದರು.
*ಪತಿ* ಆದಮರೂ ಬಹಳ ಖುಷಿಯಿಂದ ಹಣ್ಣನ್ನು ತಿಂದರು. ಅಲ್ಲಾಹನ ವಿಧಿಯಂತೆ ಆ ವೇಳೆ ಮೊದಲು ಅವನಾಗಿ ಮಾಡಿದ ಕರಾರು ಮರೆತು ಹೋಯಿತು. ಸುಬ್ಹಾನಲ್ಲಾಹ್..! ತಿಂದದ್ದೇ ತಡ. ಅವರಿಬ್ಬರೂ ಧರಿಸಿದ್ದ ಸ್ವರ್ಗದ ಉಡುಪುಗಳು, ಕಿರೀಟ, ಉಂಗುರ ಮತ್ತು ಇತರ ಆಭರಣಗಳು ಎಲ್ಲವೂ ತಾನಾಗಿಯೇ ಒಂದೊಂದಾಗಿ ಕಳಚಿ ಕೆಳಗೆ ಬಿತ್ತು. ಒಟ್ಟಿನಲ್ಲಿ ಇಬ್ಬರೂ ನಗ್ನರಾದರು. ಅಷ್ಟರಲ್ಲಿ ಸ್ವರ್ಗದಲ್ಲಿ ಹಾರಾಡುವ ಮಲಕುಗಳು ಹೇಳಿದರು. *”ಓ ದಂಪತಿಗಳೇ.., ನಿಮ್ಮ ಕತೆ ಮುಗಿಯಿತು. ನಿಮ್ಮನ್ನು ನೋಡುವಾಗ ನಾಚಿಕೆಯಾಗುತ್ತದೆ. ನಿಮಗಿನ್ನು ಬೇಸರದ ದಿನಗಳು. ಸಂತೋಷದ ದಿನಗಳಿಗೆ ವಿರಾಮ. ನಿಮಗೆ ಗುಡ್ ಬೈ.”* *ಒಟ್ಟಿನಲ್ಲಿ* ಸ್ವರ್ಗದಲ್ಲಿ ಒಂದು ಮಹಾ ದುರಂತ ನಡೆದ ಹಾಗೆ. ಸ್ವರ್ಗದಲ್ಲಿ ನಗ್ನರಾದ ಇಬ್ಬರನ್ನೂ ಕಂಡ ಕಂಡವರು ದೂಶಿಸುವ ಅವಸ್ಥೆ. ಸ್ವರ್ಗದ ಬೀದಿ ಬೀದಿಗಳಲ್ಲಿ ವಿರೋಧಾಭಾಸ ಮತ್ತು ಬಹಿಷ್ಕಾರದ ಅಲೆ. ಎಲ್ಲೆಲ್ಲೂ ಟೀಕೆಯ ಸುರಿಮಳೆ. ಆದಮರಂತೂ ದುಃಖ ಸಹಿಸಲಾರದೆ ಬೊಬ್ಬೆ ಹಾಕಿ ಅತ್ತಿತ್ತ ಓಡಾಡ ತೊಡಗಿದರು. ಅಷ್ಟರಲ್ಲಿ ಎಲ್ಲಾ ಕಡೆಯಿಂದ *”ಎಲ್ಲಿಗೆ ಓಡುವುದು? ಎಲ್ಲಿಗೆ ತಪ್ಪಿಸಿ ಓಡುತ್ತಿ?”* ಎಂಬ ಘೋಷಣೆ ಮೊಳಗುತ್ತಲೇ ಇತ್ತು.
*ಅಲ್ಲಾಹನ* ಆಜ್ಞೆಯಂತೆ ಹಝ್ರತ್ ಜಿಬ್ರೀಲ್ (ಅ) ರವರು ಆದಮ್ (ಅ) ಮತ್ತು ಪತ್ನಿ ಬೀವಿ ಹವ್ವಾರನ್ನು ಸ್ವರ್ಗದಿಂದ ಹೊರ ತಂದರು. ನಗ್ನವಾಗಿದ್ದ ಇಬ್ಬರ ಅವುರತನ್ನು ಸ್ವರ್ಗದ ಒಂದು ಮರದ ಎಲೆಯಿಂದ ಮುಚ್ಚಲಾಯಿತು. ಬಳಿಕ ಅಲ್ಲಾಹನು ಹೇಳಿದನು. *ಓ ಆದಮರೇ.., ನಾನು ನಿಮ್ಮನ್ನು ಸೃಷ್ಟಿ ಮಾಡಿ ರೂಹ್ ಹಾಕಿದ ಕೂಡಲೇ ನಿಮ್ಮಲ್ಲಿ ಹೇಳಿದ್ದೆ. “ನೀನು ಅಲ್ಲಾಹನನ್ನು ಭಯಪಡುವ ಭಯ ಭಕ್ತಿ ಇರುವ ದಾಸನಾಗಬೇಕು ಎಂದು. ನೀವದನ್ನು ಧಿಕ್ಕರಿಸಿದಿರಿ”* ಆಗ ಆದಮರು ಹೇಳಿದರು. *”ಆಗುವುದು ಆಗಿ ಹೋಯಿತು. ನನಗಿನ್ನು ಯಾವ ಬದುಕೂ ಬೇಡ. ನನ್ನನ್ನು ಸೃಷ್ಟಿಸುವ ಮೊದಲಿದ್ದ ಮಣ್ಣಿನಂತೆಯೇ ಮಾಡಿರಿ”* ಅಲ್ಲಾಹನು ಹೇಳಿದನು. *”ಅದು ಸಾಧ್ಯವಿಲ್ಲ. ಯಾಕೆಂದರೆ, ನಾನು ಈ ಮೊದಲೇ ತೀರುಮಾನಿಸಿದಂತೆ ನಾನು ಸೃಷ್ಟಿಸಿದ ಸ್ವರ್ಗ ನರಕ ತುಂಬಲು ನಿನಗೆ ಸಂತಾನ ಹುಟ್ಟ ಬೇಕಾಗಿದೆ. ಆ ಪ್ರಕ್ರಿಯೆ ಇನ್ನು ನಡೆಯಬೇಕಾಗಿದೆ.”*
*ಅದರೊಂದಿಗೆ* ಆ ತನಕ ಸಾಮಾನ್ಯ ಪ್ರಾಣಿಗಳಂತೆ ಕಾಲುಗಳಿದ್ದ ಹಾವನ್ನೂ ಕರೆ ತರಲಾಯಿತು. ಮಲಕುಗಳು ಅದನ್ನು ಬಹಳ ರಭಸದಿಂದ ಎಳೆದುಕೊಂಡು ಬಂದರು. ಅದರೊಂದಿಗೆ ಕಾಲುಗಳಿಲ್ಲದೆ ಹೊಟ್ಟೆ ಎಳೆದುಕೊಂಡು ಹೋಗುವ ಎಲ್ಲರೂ ಅಸಹ್ಯವಾಗಿ ಕಾಣುವ ನಾಲಗೆ ಎರಡು ಸೀಳಾಗಿ ತುಂಡಾಗಿರುವ ಕುರೂಪಿ ಜೀವಿಯಾಯಿತು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ಶಿಹಾಬುದ್ದೀನ್ ಅಹ್ಮದ್ ರವರ ನಿಹಾಯತುಲ್ ಅರಬ್ ಫೀ ಫುನೂನಿಲ್ ಅದಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.