(www.vknews. in) ; ಮುತ್ತಿನಂತೆ ಪಳಪಳ ಹೊಳೆಯುವ ಬಿಳುಪಾದ ಹಲ್ಲುಗಳು ಇರಬೇಕೆಂದು ಪ್ರತಿಯೊಬ್ಬರೂ ಆಶಿಸುತ್ತಾರೆ. ಆದರೆ ಎಲ್ಲರ ಹಲ್ಲುಗಳ ಬಣ್ಣ ಬೇರೆ ಬೇರೆ ಇರುತ್ತದೆ. 90 ಶೇಕಡಾ ಮಂದಿಗೆ ಬಿಳಿಯಾದ ಹಲ್ಲುಗಳು ಇರುತ್ತವೆ. ಇನ್ನುಳಿದ 10 ಶೇಕಡಾ ಮಂದಿಗೆ ತೆಳು ಹಳದಿ, ಹಳದಿ, ಗುಲಾಬಿ ಬಣ್ಣ, ಕಪ್ಪಾಗಿರುವ ಹಲ್ಲು ಹೀಗೆ ಬೇರೆ ಬೇರೆ ಬಣ್ಣದ ಹಲ್ಲುಗಳು ಇರುವ ಸಾಧ್ಯತೆ ಇರುತ್ತದೆ. ಹಲ್ಲಿನ ಬಣ್ಣ ಬದಲಾಗಲು ಹಲವಾರು ಕಾರಣಗಳು ಇರುತ್ತದೆ. ಸಾಮಾನ್ಯವಾಗಿ ಇದನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತದೆ.
1. ಆಂತರಿಕ ಕಾರಣಗಳು 2. ಬಾಹ್ಯ ಕಾರಣಗಳು ಆಂತರಿಕ ಕಾರಣಗಳು : ಸಾಮಾನ್ಯವಾಗಿ ಹಲ್ಲಿಗೆ ಏಟು ಬಿದ್ದು ಹಲ್ಲಿನ ನರಕ್ಕೆ ಗಾಯವಾಗಿ ಹಲ್ಲು ನಿಧಾನವಾಗಿ ಸಾಯುತ್ತದೆ. ಹೀಗೆ ಸಾಯುವಾಗ ಹಲ್ಲಿನ ಬಣ್ಣ ಬಿಳಿಯಿಂದ ನಿಧಾನವಾಗಿ ಕಂದು, ಪಿಂಕ್ ಅಥವಾ ತೆಳು ಗುಲಾಬಿ ಬಣ್ಣಕ್ಕೆ ತಿರುಗಿ ಕೊನೆಗೆ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಇನ್ನು ಹಲ್ಲು ಬೆಳೆಯುವ ಸಂದರ್ಭದಲ್ಲಿ ಹಲ್ಲಿಗೆ ಪ್ಲೋರೈಡ್ ಅಂಶ ಜಾಸ್ತಿ ಸೇರಿಕೊಂಡಲ್ಲಿ, ಶುಭ್ರ ಬಿಳಿಬಣ್ಣದ ಬದಲಾಗಿ ಕಂದು ಅಥವಾ ನಸು ಹಳದಿ ಬಣ್ಣದ ಹಲ್ಲುಗಳು ಉಂಟಾಗುತ್ತದೆ.
ಅದೇ ರೀತಿ ತಾಯಿ ಗರ್ಬಿಣಿಯಾಗಿದ್ದಾಗ, ಹಲ್ಲುಗಳು ಬೆಳೆಯುವ ಸಂದರ್ಭದಲ್ಲಿ ಹಲ್ಲಿಗೆ ಕ್ಯಾಲ್ಸಿಯಂ ಕೊರತೆ ಉಂಟಾದಲ್ಲಿ ಹಲ್ಲಿನ ಬಣ್ಣ ಹಳದಿಯಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಗರ್ಬಿಣಿಯಾಗಿದ್ದಾಗ ಕೆಲವೊಂದು ಆಂಟಿಬಯೋಟಿಕ್ ಸೇವಿಸಿದಲ್ಲಿ ಹಲ್ಲಿನ ಬಣ್ಣ ಹಳದಿಯಾಗುವ ಸಾಧ್ಯತೆ ಇರುತ್ತದೆ. ಉದಾಹರಣೆ ಟೆಟ್ರಾಸೈಕ್ಸಿನ್ ಎಂಬ ಔಷಧಿ ಗರ್ಭಿಣಿಯರಲ್ಲಿ ಮೊದಲ ಆರು ತಿಂಗಳ ಕಾಲ ಸೇವಿಸಲೇಬಾರದು. ಇದನ್ನು ಸೇವಿಸಿದರೆ ಹಲ್ಲಿನ ಬಣ್ಣ ಹಳದಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಅನುವಂಶಿಕ ಕಾರಣದಿಂದಲೂ ಹಲ್ಲಿನ ಬಣ್ಣ ತಂದೆ ತಾಯಿಯಿಂದ ಮಕ್ಕಳಿಗೆ ಬಳುವಳಿಯಾಗಿ ದೊರೆಯುವ ಸಾಧ್ಯತೆ ಇರುತ್ತದೆ. ತಂದೆ ತಾಯಿಯಿಂದ ಮಕ್ಕಳಿಗೆ ತಿಳಿ ಹಳದಿ, ಕಂದು, ಬೂದು ಬಣ್ಣದ ಹಲ್ಲು ವಂಶ ಪಾರಂಪರ್ಯವಾಗಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬಾಹ್ಯ ಕಾರಣಗಳು : 1. ಆಹಾರ : ನಾವು ತಿನ್ನುವ ಆಹಾರ ಮತ್ತು ಕೃತಕ ಪೇಯಗಳು ದೇಹದ ಹಲ್ಲಿನ ಆರೋಗ್ಯವನ್ನು ಹದೆಗೆಡಿಸುವುದರ ಜೊತೆಗೆ ಹಲ್ಲಿನ ಬಣ್ಣವನ್ನು ಬದಲಾಯಿಸುವ ಸಾಮಥ್ರ್ಯ ಹೊಂದಿರುತ್ತದೆ. ಕಾಫಿ, ಟಿ ಮತ್ತು ಇತರ ಬಣ್ಣದ ಪೇಯಗಳನ್ನು ಅತಿಯಾಗಿ ಸೇವಿಸಿದಲ್ಲಿ ಹಲ್ಲಿನ ಬಣ್ಣ ಕಂದು, ಬೂದು ಅಥವಾ ಹಳದಿ ಬಣ್ಣಕ್ಕೆ ಬದಲಾಗುವ ಸಾಧ್ಯತೆ ಇರುತ್ತದೆ. ನಾವು ಕುಡಿಯುವ ಕೋಕ್ ಪೆಪ್ಸಿ, ಮಿರಿಂಡ ಮುಂತಾದ ಆಮ್ಲಯುಕ್ತ ಪೇಯಗಳು, ಹಲ್ಲಿನ ಹೊರಪದರವನ್ನು ಕರಗಿಸಿ ಹಲ್ಲು ತಿಳಿ ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡಬಹುದು. ಅತಿಯಾದ ವೈನ್ ಸೇವನೆ, ಸೋಡಾಸೇವನೆ ಮತ್ತು ಆಸಿಡ್ಯುಕ್ತ ಪಾನೀಯಗಳು ಹಾಗೂ ಆಲ್ಕೋಹಾಲ್ ಇರುವ ಪೇಯಗಳಿಂದ ಹಲ್ಲಿನ ಬಿಳಿ ಬಣ್ಣ ಮಾಸಿ ಹೋಗಿ, ಹಳದಿ ಬಣ್ಣ ಬರುವ ಸಾಧ್ಯತೆ ಇರುತ್ತದೆ. ಆಹಾರದಲ್ಲಿ ಬಳಸುವ ಕೃತಕ ಬಣ್ಣಗಳು ಕೂಡ ಹಲ್ಲಿನ ಬಣ್ಣಕ್ಕೆ ಮಾರಕವಾಗುವ ಸಾಧ್ಯತೆ ಇರುತ್ತದೆ. ನೈಸರ್ಗಿಕ ಬಣ್ಣದ ಆಹಾರದಿಂದ ತೊಂದರೆ ಉಂಟಾಗದು.
2. ಹಲ್ಲಿನ ಸ್ವಚ್ಚತೆ ಇಲ್ಲದಿದ್ದಲಿ,್ಲ ಹಲ್ಲಿನ ಸುತ್ತ ದಂತಗಾರೆ ಅಥವಾ ದಂತ ಕಿಟ್ಟ ಸೇರಿಕೊಂಡು ಹಲ್ಲು ಹಳದಿ ಬಣ್ಣಕ್ಕೆ ಬದಲಾಗುತ್ತದೆ. ಅದೇ ರೀತಿ ಹಲ್ಲಿನ ಸುತ್ತ ಪ್ಲಾಖ್ ಎನ್ನುವ ಪಾಚಿ ಪದರ ಸೇರಿಕೊಂಡು ಹಲ್ಲಿನ ಬಣ್ಣ ಮಾಸಿ ಹೋಗಬಹುದು. ಹಲ್ಲಿನ ಬಣ್ಣ ಬದಲಾಗುವುದರ ಜೊತೆಗೆ ಹಲ್ಲಿನ ಸುತ್ತ ಬ್ಯಾಕ್ಟೀರಿಯ ಸೇರಿಕೊಂಡು ಹಲ್ಲಿನ ಸುತ್ತ ವಸಡಿನಲ್ಲಿ ಕೀವು ಉಂಟಾಗಬಹುದು ಮತ್ತು ಹಲ್ಲಿನ ಆಧಾರವಾದ ದಂತಾ ಧಾರ ಎಲುಬು ಕರಗಿ, ಹಲ್ಲು ಅಲುಗಾಡುವ ಸಾಧ್ಯತೆ ಇರುತ್ತದೆ.
3. ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಹುಳಿ ತೇಗು ಬಂದು, ಗ್ಯಾಸ್ಟ್ರಿಕ್ ಜ್ಯೂಸ್ ಬಾಯಿಗೆ ಸೇರಿ ಹಲ್ಲು ಸವೆದು, ಹಲ್ಲಿನ ಎನಮಲ್ ಕರಗಿ, ಹಲ್ಲಿನ ಒಳ ಪದರ ಡೆಂಟಿನ್ ಹೊರಗೆ ಕಾಣಿಸಿಕೊಂಡು ಹಲ್ಲಿನ ಬಣ್ಣ ತೆಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. 4. ಅತಿಯಾದ ಹಲ್ಲುಜ್ಜುವ ಪ್ರಕ್ರಿಯೆ ಮತ್ತು ತಪ್ಪು ಕ್ರಮದಿಂದ ಹಲ್ಲುಜ್ಜಿದರೂ ಹಲ್ಲಿನ ಎನಮಲ್ ಕರಗಿ ಹಲ್ಲಿನ ಬಿಳಿ ಮಾಸಿ ಹೋಗಿ ತೆಳು ಹಳದಿ ಉಂಟಾಗುವ ಸಾಧ್ಯತೆ ಇರುತ್ತದೆ. 5. ಧೂಮಪಾನ ಮಾಡುವುದರಿಂದ ಹಲ್ಲಿನ ಮೇಲೆ ಕಪ್ಪು ಬಣ್ಣದ ಕಲೆಗಳು ಉಂಟಾಗಿ ಹಲ್ಲಿನ ಬಣ್ಣ ಕಪ್ಪಾಗುವ ಸಾಧ್ಯತೆ ಇರುತ್ತದೆ. ತಂಬಾಕು ಸೇವನೆಯಿಂದಾಗಿ ಬಾಯಿಯ ಒಳ ಪದರ ಮತ್ತು ಹಲ್ಲಿನ ಬಣ್ಣ ಕಪ್ಪಾಗುವ ಸಾಧ್ಯತೆ ಇರುತ್ತದೆ.
6. ಗಡುಸಾದ ಎಸಳುಗಳು ಇರುವ ಗಟ್ಟಿಯಾದ ಬ್ರಷ್ನಿಂದ ಅಡ್ಡಡ್ಡಾಗಿ ಹಲ್ಲುಜ್ಜಿದಲ್ಲಿ ಹಲ್ಲಿನ ಎನಾಮಲ್ ಕರಗಿ ಹಲ್ಲಿನ ಬಣ್ಣ ತೆಳು ಹಳದಿ ಉಂಟಾಗುವ ಸಾಧ್ಯತೆ ಇರುತ್ತದೆ. ಆಂತರಿಕ ಕಾರಣಗಳಿಂದ ಹಲ್ಲಿನ ಬಣ್ಣ ಬದಲಾದಲ್ಲಿ ಹಲ್ಲಿಗೆ ವಿನೀರ್ ಅಥವಾ ಹಲ್ಲಿನ ಬಣ್ಣದ ಕ್ರೌನ್ ಹಾಕಬಹುದು, ಬ್ಲೀಚಿಂಗ್ ಮಾಡುವ ಅವಕಾಶ ಇರುತ್ತದೆ. ಇನ್ನೂ ಬಾಹ್ಯ ಕಾರಣಗಳಿಂದ ಹಲ್ಲಿನ ಬಣ್ಣ ಬದಲಾಗಿದ್ದಲ್ಲಿ ಹಲ್ಲನ್ನು ಶುಚಿಗೊಳಿಸಿ ಹಲ್ಲಿನ ಮೊದಲಿನ ಬಣ್ಣವನ್ನು ಮರಳಿ ಪಡೆಯಬಹುದಾಗಿದೆ.
ಪರಿಹಾರ ಏನು? 1. ನಾವು ಸೇವಿಸುವ ಆಹಾರದ ಮೇಲೆ ನಿಯಂತ್ರಣವಿರಲಿ. ಅತಿಯಾದ ಆಮ್ಲೀಯ ದ್ರಾವಣ ವರ್ಜಿಸಬೇಕು, ಕೃತಕ ಪೇಯಗಳನ್ನು ದೂರವಿಡಬೇಕು, ನೈಸರ್ಗಿಕ ಪೇಯಗಳಿಗೆ ಆಧ್ಯತೆ ನೀಡಿ. 2. ಪ್ರತೀ 6 ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಹಲ್ಲನ್ನು ಶುಚಿಗೊಳಿಸತಕ್ಕದ್ದು. ಹೀಗೆ ಮಾಡಿದ್ದಲ್ಲಿ ಹಲ್ಲಿನ ಸುತ್ತ ಇರುವ ಪ್ಲಾಖ್, ಪಾಚಿ, ದಂತಗಾರೆ ಎಲ್ಲವನ್ನು ನಿವಾಳಿಸಿ ಬಿಳಿ ಬಣ್ಣದ ಹಲ್ಲು ಪಡೆಯಬಹುದಾಗಿದೆ. 3. ಧೂಮಪಾನ ತಂಬಾಕು ಉತ್ಪಾನ ಸೇವನೆ ಬೇಡವೇ ಬೇಡ. ಮಧ್ಯಪಾನ ಕೂಡ ಮಾಡುವುದು ಬರೀ ಹಲ್ಲಿನ ಮಾತ್ರವಲ್ಲ ದೇಹದ ಆರೋಗ್ಯ ಹಿತ ದೃಷ್ಟಿಯಿಂದ ಒಳ್ಳೆದಲ್ಲ. 4. ಆಂತರಿಕ ಕಾರಣದಿಂದ ಹಲ್ಲಿನ ಬಣ್ಣ ಮಾಸಿದಲ್ಲಿ ಬ್ಲೀಚಿಂಗ್ ಮಾಡಿಸಿ ಹಲ್ಲಿನ ಬಣ್ಣವನ್ನು ಮರಳಿ ಪಡೆಯಬಹುದು.
5. ಹಲ್ಲಿನ ನರಕ್ಕೆ ಏಟು ತಗುಲಿ ಹಲ್ಲಿನ ಬಣ್ಣ ಬದಲಾಗಿದಲ್ಲಿ ಹಲ್ಲಿಗೆ ಬೇರು ನಾಳ ಚಿಕಿತ್ಸೆಮಾಡಿದ ಬಳಿಕ ಕವರ್ ಅಥವಾ ಕ್ರೌನ್ ಹಾಕಬೇಕಾಗುತ್ತದೆ. 6. ದಿನಕ್ಕೆರಡು ಬಾರಿ ಹಿತಮಿತವಾಗಿ ಸರಿಯಾದ ಬ್ರಷ್ನಿಂದ ಸೂಕ್ತ ಕ್ರಮದಿಂದ ಹಲ್ಲುಜ್ಜಬೇಕು. ಮೂರು ನಿಮಿಷಕ್ಕಿಂತ ಜಾಸ್ತಿ ಹಲ್ಲುಜ್ಜುವ ಅಗತ್ಯವಿಲ್ಲ. ದಿನಕ್ಕೆರಡು ಬಾರಿ ಹಲ್ಲುಜ್ಜಿದರೆ ಸಾಕಾಗುತ್ತದೆ. 7. ಪ್ಲೋರೋಸಿಸ್ ಕಾಯಿಲೆಯಿಂದ ಹಲ್ಲಿನ ಬಣ್ಣ ಬದಲಾಗಿದ್ದಲ್ಲಿ ಎಲ್ಲಾ ಹಲ್ಲುಗಳಿಗೆ ‘ಜಿಲ್ಕೋನಿಯಾ’ ಎಂಬ ಕವರ್ ಹಾಕಿ ಸುಂದರವಾದ ಬಿಳಿ ಬಣ್ಣದ ದಂತ ಪಂಕ್ತಿಗಳನ್ನು ಪಡೆಯಬಹುದಾಗಿದೆ.
ಕೊನೆಮಾತು ಹಲ್ಲಿನ ಬಣ್ಣ ಬದಲಾಗಲು ನೂರಾರು ಕಾರಣಗಳಿವೆ. ಯಾವ ಕಾರಣದಿಂದ ಹಲ್ಲಿನ ಬಣ್ಣ ಬದಲಾಗಿದೆ ಎಂಬುದು ದಂತ ವೈದ್ಯರು ಪತ್ತೆ ಹಚ್ಚಿ ಸರಿಯಾದ ಪರಹಾರ ನೀಡುತ್ತಾರೆ. ಹಲ್ಲು ಬೆಳ್ಳಗಾಗಲಿ ಎಂದು, ಉಪ್ಪು ಮರುಳು ಇದ್ದಿಲ್ಲು ಪುಡಿ ಅಥವಾ ಇನ್ನಾವುದೇ ಕೃತಕ ರಸಾಯನಿಕ ಬಳಸುವುದು ಅತಿ ಅಪಾಯಕಾರಿ. ದಂತ ವೈದ್ಯರ ಸಲಹೆ ಇಲ್ಲದೆ, ಗೂಗಲ್ ಸಹಾಯದಿಂದ ಹಲ್ಲನ್ನು ಬ್ಲೀಚಿಂಗ್ ಮಾಡಿಸಿದಲ್ಲಿ ಹತ್ತು ಹಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಹಲ್ಲು ಅತ್ಯಂತ ಸಂವೇದನಾಶೀಲವಾದ ಅಮೂಲ್ಯ ಆಸ್ತಿಯಾಗಿರುವುದರಿಂದ ನಿರ್ಲಕ್ಷ ವಹಿಸದೇ ದಂತ ವೈದ್ಯರ ಆದೇಶದಂತೆ ನಡೆದುಕೊಳ್ಳವುದಲ್ಲಿ ಜಾಣತನ ಅಡಗಿದೆ.
ಡಾ|| ಮುರಳಿ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶತ್ರಚಿಕಿತ್ಸಕರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.