(www.vknews. in) ; ವೈದ್ಯಕೀಯ ಪರೀಕ್ಷಾ ಫಲಿತಾಂಶಗಳು ರೋಗಿಯ ಹಕ್ಕು ಎಂಬ ಈ ಸಾಲು ನಿಮಗೆ ವಿಚಿತ್ರವಾಗಿ ಕಾಣಬಹುದು.ಇಂತಹದ್ದೊಂದು ಸಾಲು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸಂಬಂಧಿಸಿ ಬರೆದಿರುವುದು. ವಿಷಯಕ್ಕೆ ಬರೋಣ.. ಈ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಎರಡು ಸೆಕ್ಷನ್ಗಳಿರುತ್ತವೆ. ೧.ಜನರಲ್ ವಾರ್ಡ್ ೨. ಸ್ಪೆಷಲ್ ವಾರ್ಡ್. ಇವು ಒಳರೋಗಿಗಳಿಗೆ ಸಂಬಂಧಿಸಿದ್ದಾದರೆ, ಇನ್ನು ಹೊರರೋಗಿ ವಿಭಾಗದಲ್ಲೂ ಇಂತಹದ್ದೇ ಎರಡು ಸೆಕ್ಷನ್ಗಳಿವೆ. ೧.ಜನರಲ್ ಕ್ಲಿನಿಕ್ಸ್ ೨.ಸ್ಪೆಷಾಲಿಟಿ ಕ್ಲಿನಿಕ್ಸ್.
ಇವೆರಡೂ ವಿಭಾಗದ ಜನರಲ್ ವಿಭಾಗಗಳಲ್ಲಿ ಸಾಮಾನ್ಯ ಚಿಕಿತ್ಸೆ. ಇದರಲ್ಲಿ ವೈದ್ಯರ ಕನ್ಸಲ್ಟೇಶನ್ ಫೀಸು ಇಲ್ಲ.ಉಳಿದಂತೆ ಎಲ್ಲಾ ಪರೀಕ್ಷೆಗಳಿಗೂ ಚಾರ್ಜ್ ಇರುತ್ತವೆ. ಸ್ಪೆಷಾಲಿಟಿ ವಿಭಾಗಗಳಲ್ಲಿ ವೈದ್ಯರ ಕನ್ಸಲ್ಟೇಶನ್ ಫೀಸು ಇರುತ್ತೆ, ಇನ್ನು ಉಳಿದಂತೆ ಎಲ್ಲಾ ಪರೀಕ್ಷೆಗಳಿಗೂ ಚಾರ್ಜ್ ಇರುತ್ತೆ.
ಈ ಮೆಡಿಕಲ್ ಕಾಲೇಜುಗಳಲ್ಲಿ ಜನರಲ್ ವಿಭಾಗದ ರೋಗಿಗಳನ್ನು ಎರಡನೇ ದರ್ಜೆಯವರಂತೆ ನೋಡಲಾಗುತ್ತದೆ.ಅಲ್ಲಿ ರೋಗಿಯ ಹಕ್ಕುಗಳನ್ನು ಕಸಿಯಲಾಗುತ್ತದೆ. ಅಲ್ಲಿ ರೋಗಿ ಏನೇ ಲ್ಯಾಬ್ ಟೆಸ್ಟ್, ಸ್ಕ್ಯಾನಿಂಗ್, ಎಕ್ಸ್ ರೇ ಇತ್ಯಾದಿ ಮಾಡಿಸಿದರೆ ದುಡ್ಡು ತಗೋತಾರೆ. ಆದರೆ ರಿಪೋರ್ಟ್ಗಳನ್ನು ಮಾತ್ರ ರೋಗಿಗಳಿಗೆ ಕೊಡುವುದಿಲ್ಲ.ಆಸ್ಪತ್ರೆಯ ಫೈಲುಗಳಲ್ಲಿ ಭದ್ರವಾಗಿ ಇಡಲಾಗುತ್ತದೆ. ಈ ಕುರಿತು ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ ಅದನ್ನು ನೋಡಿ ವೈದ್ಯರು ಚಿಕಿತ್ಸೆ ಮಾಡುತ್ರಾರಲ್ವಾ..? ಅದನ್ನು ಹಿಡ್ಕೊಂಡು ರೋಗಿಗಳಿಗೇನು ಮಾಡಲಾಗುತ್ತೆ..?
ವೈದ್ಯರು ಚಿಕಿತ್ಸೆ ಕೊಡುತ್ತಾರೆನ್ನುವುದೇನೋ ಸರಿ. ಆದರೆ ಅವರಿಗೆ ನಿಮ್ಮ ಚಿಕಿತ್ಸೆ ತೃಪ್ತಿಕವಾಗದಿದ್ದರೆ ಬೇರೆ ಕಡೆ ಚಿಕಿತ್ಸೆ ಪಡೆಯಬಹುದಲ್ವಾ..? ಬೇರೆ ಕಡೆ ಮಾಡುವುದಾದರೆ ಬೇರೆ ಕಡೆಯೇ ಪರೀಕ್ಷೆ ಮಾಡಿಸಲಿ ಎನ್ನುತ್ತಾರೆ. ಅವರಿಗೆ ನೀವೇನು ಉಚಿತವಾಗಿ ಪರೀಕ್ಷೆ ಮಾಡಿರುವುದಿಲ್ಲ.ದುಡ್ಡು ತಗೊಂಡೇ ಪರೀಕ್ಷೆಗಳನ್ನು ಮಾಡಿರುತ್ತೀರಿ.ಅವರಿಗೆ ಇಷ್ಟವಾದ್ರೆ ನಿಮ್ಮದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.ನಿಮ್ಮ ಚಿಕಿತ್ಸೆ ಇಷ್ಟವಾಗಿಲ್ಲ, ತೃಪ್ತಿಕರವಾಗಿಲ್ಲಾಂದ್ರೆ ಅವರು ಹೊರಗಡೆ ಬೇರೆ ವೈದ್ಯರಿಗೆ ತೋರಿಸಬಾರದೇಕೆ.?
ಇಲ್ಲಿ ಉದ್ದೇಶ ಸ್ಪಷ್ಟ. ರೋಗಿ ಬೇರೆಲ್ಲಿಗೂ ಹೋಗಬಾರದು, ತಮ್ಮಿಂದಲೇ ಚಿಕಿತ್ಸೆ ಪಡೆಯಬೇಕು.ನಾವು ರಿಪೋರ್ಟ್ಸ್ ಅವರ ಕೈಯಲ್ಲಿ ಕೊಟ್ಟರೆ ತಾನೆ ಬೇರೆಡೆಗೆ ಹೋಗುವುದು..? ನಾವು ಕೊಡದಿದ್ದರೆ ಎಲ್ಲಿಗೆ ಹೋಗ್ತಾರೆ.? ಮೆಡಿಕಲ್ ಕಾಲೇಜುಗಳಿಗೆ ಬಡ ರೋಗಿಗಳೆಂದರೆ ಪ್ರಯೋಗ ಪಶುಗಳು.ಅವರನ್ನು ತಮ್ಮ ಬೋನಿನೊಳಗೆ ಕಟ್ಟಿ ಹಾಕುವ ಸಲುವಾಗಿ ಅವರ ರಿಪೋರ್ಟ್ಸ್ಗಳನ್ನು ಹಿಡಿದಿಟ್ಟು ಅವರು ಹೊರ ಹೋಗದಂತೆ ತಡೆಯುವುದು.
ಇದರಿಂದಾಗಿ ಖಾಯಿಲೆ ವಾಸಿಯಾಗದಿದ್ದರೂ ಹೊರ ಹೋಗುವ ಅವಕಾಶವಿಲ್ಲ.ಅವರೆಷ್ಟರ ವರೆಗೆ ಇಲ್ಲೇ ಇರುತ್ತಾರೋ ಅಷ್ಟರವರೆಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಸಲು ಅವರನ್ನು ಪ್ರಯೋಗಪಶುಗಳಂತೆ ಬಳಸಲಾಗುತ್ತದೆ.ಬಡಪಾಯಿ ರೋಗಿಗಳು ಇನ್ನು ಬೇರೆಡೆಗೆ ಹೋದರೆ ಇನ್ನೂ ಮೂರ್ನಾಲ್ಕು ಸಾವಿರ ಹೊಸದಾಗಿ ಪರೀಕ್ಷೆ ಮಾಡಿಸಲು ಖರ್ಚು ಮಾಡಬೇಕಾಗುತ್ತೆ ಎಂದು ಮತ್ತೆ ಅಲ್ಲಿಗೇ ಹೋಗುತ್ತಾರೆ.ಖಾಯಿಲೆ ವಾಸಿಯಾಗಲಿಲ್ಲ ಎಂದು ಬೇರೆ ವೈದ್ಯರ ಬಳಿಗೆ ಹೋಗಲೂ ಆಗುವುದಿಲ್ಲ.
ಇನ್ನು ಕೆಲವು ಪ್ರಕರಣಗಳಲ್ಲಿ ಎಂಟು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿಸಿ ಪರೀಕ್ಷೆ ಮಾಡಿಸುತ್ತಾರೆ. ಪರೀಕ್ಷಾ ವರದಿ ನೋಡಿ “ರೋಗಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ” ಎಂದು ವೈದ್ಯರು ಹೇಳುತ್ತಾರೆ. ಶಸ್ತ್ರ ಚಿಕಿತ್ಸೆಯೆಂದು ವೈದ್ಯರು ಹೇಳಿದರೆ ರೋಗಿ ಕೂಡಲೇ ಅದಕ್ಕೊಪ್ಪುವುದಿಲ್ಲ, ಒಪ್ಪಲೂ ಬಾರದು. ಅಂತಹ ಸಂದರ್ಭಗಳಲ್ಲಿ ಸೆಕೆಂಡ್ ಒಪಿನಿಯನ್ ಪಡೆಯುವುದು ಬಹಳ ಅನಿವಾರ್ಯ.ಆದರೆ ಖಾಸಗಿ ಮೆಡಿಕಲ್ ಕಾಲೇಜುಗಳು ಅಂತಹ ಸಂದರ್ಭಗಳಲ್ಲಿ ರೋಗಿಯ ರಿಪೋರ್ಟ್ಸನ್ನು ಹಿಡಿದಿಟ್ಟುಕೊಳ್ಳುತ್ತವೆ. ರೋಗಿ ಅನಿವಾರ್ಯವಾಗಿ ಸೆಕೆಂಡ್ ಒಪಿನಿಯನ್ಗೆ ಹೋದಾಗ ವೈದ್ಯರು ಪುನಃ ಎಲ್ಲಾ ಪರೀಕ್ಷೆಗಳನ್ನು ಮಾಡಿಸದ ಹೊರತು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದಿಲ್ಲ.ಅನ್ಯ ದಾರಿ ಕಾಣದೇ ಮತ್ತೆ ಎರಡನೇ ಬಾರಿ ಎಲ್ಲಾ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಇದರಿಂದ ರೋಗಿ ಪುನಃ ಅಷ್ಟೇ ದುಡ್ಡನ್ನು ಮಾಡಿದ್ದೇ ಪರೀಕ್ಷೆಗಾಗಿ ಮತ್ತೆ ವ್ಯಯಿಸಬೇಕಾಗುತ್ತದೆ.
ಜನಸಾಮಾನ್ಯರ ರಿಪೋರ್ಟ್ಸ್ಗಳನ್ನು ಹಿಡಿದಿಟ್ಟು ಅವರನ್ನು ಶೋಷಿಸುವ ಖಾಸಗಿ ಮೆಡಿಕಲ್ ಕಾಲೇಜುಗಳ ಇಂತಹ ನೀಚ ಷಡ್ಯಂತ್ರ ಯಾವ ಸರಕಾರಕ್ಕೂ ಅರ್ಥವಾಗುವುದಿಲ್ಲ.ಇಂತಹ ಶೋಷಣೆಯಿಂದ ಬೇಸತ್ತ ಜನ ತುಸು ಗಲಾಟೆ ಮಾಡಿದ್ರೆ ಅವರನ್ನು ಶಿಕ್ಷಸಲೆಂದೇ ನಮ್ಮ ಸರಕಾರಗಳು ಪ್ರತ್ಯೇಕ ಕಾನೂನು ಖಾಯಿದೆಗಳನ್ನು ರಚಿಸುತ್ತೆ. ಆದರೆ ಖಾಸಗಿ ಆಸ್ಪತ್ರೆಗಳು ರೋಗಿಗಳ ಹಕ್ಕುಗಳನ್ನು ಕಸಿಯುವ ನೀರ್ಚ ಹರ್ಕತ್ತು ಯಾವ ಸರಕಾರಕ್ಕೂ ತಿಳಿಯುವುದಿಲ್ಲ.ತಿಳಿದರೂ ಉಳ್ಳವರ ವಿರೋಧ ಕಟ್ಟಿಕೊಳ್ಳಲು ಯಾವ ಸರ್ಕಾರವೂ ಮುಂದೆ ಬರಲ್ಲ.
-ಇಸ್ಮತ್ ಪಜೀರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.