ಮಳೆ, ಯಾವ ರಭಸಕ್ಕೆ ಬಿದ್ದರೇನು ಹಳೇ ಹುಲ್ಲಿನ ಸೂರಿಗೆ ಪುರಾತತ್ವದ ಸ್ಥಿರತೆ… ಥೇಟು ಗಂಡೆದೆಯ ಅಜ್ಜಿಯ ಹಾಗೆ
ಕವಿ ಕಣ್ಣಿಗೆ ಸೆರೆಯಾದ ಸೂರು ಕವಿಗೆ ಬಂದ ಕಾವ್ಯ ಸಾವಿರಾರು ನಿತ್ಯ ಸೋರುವ ಹನಿ ಬಗೆ ಸವೆಯುತ್ತಿದ್ದ ತೆಂಗಿನ ಗರಿ ಬಗೆ ಅದರೊಳಗಿನ ಕತ್ತಲ ಬದುಕ ಬಗೆ ಅಜ್ಜಿ ಬರೆದರೆ, ಕವಿತ್ವ!
ಅಜ್ಜಿಗೆ ಬದುಕಿನ ಮೇಲೆ ತುಸು ಕಾಳಜಿ ಕವಿಗೆ ಕಾವ್ಯದ ಮೇಲೂ… ಕಾವ್ಯ ಹುಟ್ಟಬಹುದು,ಬದುಕು ಕಟ್ಟಬೇಕು! ಹರಿದ ಚಪ್ಪಲಿ ಧರಿಸಿ, ಸುಣ್ಣ ಅಡಿಕೆ ಬೆತ್ತಲೆ ಜಿಗಿದು ಭತ್ತಕುಟ್ಟಲು ಹೊರಟಾಗ ಕೊಟ್ಟ ಹೇಳಿಕೆ ಇಂದು ಮತ್ತೆ ಮತ್ತೆ ಕಾಡುತ್ತಿದೆ…
ಸೂರಿಗೆ ಹುಟ್ಟಿದ ಕವಿತೆಗೆ ಕಣ್ಣಾಯಿಸಿದ ಅಮ್ಮ ಅದೇ ಸೂರಲಿ,ನನ್ನ ಹೆರಿಗೆ! ಹುಟ್ಟು ನೈಸರ್ಗಿಕವಾದರೆ ಮನುಷ್ಯನಿಗೆ ಆರೋಗ್ಯ! ಕಾವ್ಯಕ್ಕೂ ಕೂಡ…
ಸುರಿದ ಮಳೆಗೆ ಸೂರು ತಣ್ಣಗಾದರೂ ಕವಿದ ಮೋಡಕ್ಕೆ ಊರು ಕತ್ತಲಾದರೂ ಅಮ್ಮನ ಅಪ್ಪುಗೆಯ ಬಿಸಿ, ಅಪ್ಪನ ಮುಖದ ಬೆಳಕಿಗೆ ಬೆಳಗಿ ಬೆಳೆದು ಬಂದೆವು ಅಮ್ಮನ ಮಾತಲ್ಲಿ ಅಭಿಮಾನವಿತ್ತು..!
— ಆಮಿರ್ ಅಶ್ಅರೀ ಬನ್ನೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.