(www.vknews. in) ; ಉಳ್ಳಾಲ,ಸೋಮೇಶ್ವರ ಉಚ್ಚಿಲ ಬಟ್ಟಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಗುರುವಾರ ಮನೆಯೊಂದು ಸಮುದ್ರಪಾಲಾಗಿದೆ.
ಅಪಾಯದಂಚಿನಲ್ಲಿದ್ದ ಈ ಮನೆಯಲ್ಲಿ ನೆಲೆಸಿದ್ದ ಬೀಫಾತುಮ್ಮಾ ಅವರ ಕುಟುಂಬವನ್ನು ಬುಧವಾರವೇ ಸ್ಥಳಾಂತರ ಮಾಡಿದ್ದರಿಂದ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿದೆ. ಈ ಪ್ರದೇಶದಲ್ಲಿ ಅಪಾಯದ ಅಂಚಿನಲ್ಲಿರುವ ಮೂರು ಮನೆಗಳ ಕುಟುಂಬಗಳ ಸದಸ್ಯರನ್ನು ಗುರುವಾರ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.
ಬಟ್ಟಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದರಿಂದ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸಹಿತ ಹಲವು ಅಧಿಕಾರಿಗಳು ತೆರಳಿ ಬೀಫಾತುಮ್ಮ ಅವರಲ್ಲಿ ಮನೆ ಸ್ಥಳಾಂತರಕ್ಕೆ ಸೂಚನೆ ನೀಡಿದ್ದರು. ಅದರಂತೆ ಬೀಫಾತುಮ್ಮ ಕುಟುಂಬವು ಸಂಬಂಧಿಕರ ಮನೆಗೆ ತೆರಳಿತ್ತು. ಅವರು ತೆರಳಿದ ಮರುದಿನವೇ ಅವರ ಮನೆ ಕಡಲಿನ ಹೊಡೆತಕ್ಕೆ ಧರಾಶಾಯಿಯಾಗಿದೆ ಅಪಾಯದಂಚಿನಲ್ಲಿ ಮತ್ತೆ ಮೂರು ಮನೆಗಳು
ಬಟ್ಟಪಾಡಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಬೀಫಾತುಮ್ಮ ಅವರ ಮನೆಯ ಹಿಂಬದಿಯಲ್ಲೇ ಇರುವ ಹಲೀಮಮ್ಮ, ನಫೀಸ ಹಾಗೂ ಸೌದಾ ಎಂಬವರ ಮೂರು ಮನೆಗಳು ಅಪಾಯಕ್ಕೆ ಸಿಲುಕಿವೆ. ಈ ಮನೆಗಳಿಗೂ ಕಡಲ ಅಲೆಗಳು ರಭಸವಾಗಿ ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಮನೆಗಳ ನಿವಾಸಿಗಳನ್ನು ಗುರುವಾರ ಸ್ಥಳಾಂತರಿಸಲಾಗಿದೆ.
ಬೀಫಾತುಮ್ಮ ಸೇರಿ ಸ್ಥಳಾಂತರಗೊಂಡ ನಾಲ್ಕು ಕುಟುಂಬಗಳು ಸದ್ಯ ಸಂಬಂಧಿಕರ ಮನೆಗಳಲ್ಲಿ ನೆಲೆಸಿದ್ದು, ಶೀಘ್ರವೇ ಅವರುಗಳಿಗೆ ಪರ್ಯಾಯ ಬಾಡಿಗೆ ಮನೆಗಳ ವ್ಯವಸ್ಥೆ ಮಾಡುವುದಾಗಿ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದ್ದಾರೆ. ಮನೆ ಕಳಕೊಂಡವರಿಗೆ ಸೂಕ್ತವಾದ ಮನೆಯ ವ್ಯವಸ್ಥೆ ಮಾಡುವುದಾಗಿ ಪುರಸಬಾ ಮುಖ್ಯಾಧಿಕಾರಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.