(www.vknews.in) : ಡಾ.ಚುಳ್ಳಿಕ್ಕೋಡ್ ಹುಸೈನ್ ಸಖಾಫಿ ಉಸ್ತಾದ್ ಇಂದು ಏರಿದ ಎತ್ತರ ಮತ್ತು ಈ ಎತ್ತರಕ್ಕೇರಲು ಅವರು ಸವೆಸಿದ ಹಾದಿ ಏನೂ ಸುಲಭದ್ದಾಗಿರಲಿಲ್ಲ. ಓರ್ವ ಧಾರ್ಮಿಕ ವಿದ್ವಾಂಸನೂ ಪಿ.ಎಚ್.ಡಿ.ಮಾಡಲು ಸಾಧ್ಯವಿದೆ ಎಂದು ನಾನು ಅರಿತದ್ದೇ ಚುಳ್ಳಿಕ್ಕೋಡ್ ಉಸ್ತಾದರ ಹೆಸರಿನ ಮುಂದೆ ಡಾಕ್ಟರ್ ಎಂಬ ಪದವಿ ಸೂಚಕ ಪದ ಕಂಡ ಬಳಿಕ. ಆ ವರೆಗೂ ಧಾರ್ಮಿಕ ವಿದ್ವಾಂಸನೆಂದರೆ ಮಸೀದಿಯಲ್ಲಿ ನಮಾಝಿಗೆ ನೇತೃತ್ವ ನೀಡುವುದು, ಮಕ್ಕಳಿಗೆ ಧಾರ್ಮಿಕ ಪಾಠ ಹೇಳಿ ಕೊಡುವುದು ಮತ್ತು ಧಾರ್ಮಿಕ ಪ್ರವಚನ ಕೊಡುವುದು ಇವಿಷ್ಟೇ ಧಾರ್ಮಿಕ ವಿದ್ವಾಂಸರಿಗೆ ಗೊತ್ತಿರುವುದು ಎಂದಷ್ಟೇ ಭಾವಿಸಿದ್ದೆ. ಅದು ನನ್ನ ಯೋಚನೆಯ ಮಿತಿಯೆಂದೂ ನಾನು ಹೇಳಲಾರೆ.
ನಾನು ಆ ವರೆಗೆ ಕಂಡದ್ದೂ ಅಷ್ಟೇ.ನನಗೆ ತಿಳಿದಂತೆ ನಮ್ಮ ಮಂಗಳೂರು ಮತ್ತು ಕೇರಳದಲ್ಲಿ ಪಿ.ಎಚ್.ಡಿ.ಪಡೆದ ಮೊದಲ ಧಾರ್ಮಿಕ ವಿದ್ವಾಂಸ ಚುಳ್ಳಿಕ್ಕೋಡ್ ಉಸ್ತಾದ್.ಒಂದೊಮ್ಮೆ ಅವರು ನಮ್ಮ ಉಳ್ಳಾಲದ ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.ಬಹುಶಃ ಆ ಕಾಲದಲ್ಲಿ ಅವರಿನ್ನೂ ಡಾ.ಚುಳ್ಳಿಕ್ಕೋಡ್ ಆಗಿರಲಿಲ್ಲ.ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಚುಳ್ಳಿಕ್ಕೋಡ್ ಉಸ್ತಾದರ ಪ್ರವಚನ ಕೇಳಿ ನನಗೆ ಸಖೇದಾಶ್ಚರ್ಯ. ಇವರೆಂತ ವಅಳ್ ಹೇಳುವುದೋ ಅಥವಾ ಬೇರೆಂತದೋ ಮಾತನಾಡುವುದೋ..?
ಯಾಕೆಂದರೆ ಆ ವರೆಗೆ ವಅಳ್ನಲ್ಲಿ ಆಧುನಿಕ ವಿಜ್ಞಾನ,ಇತಿಹಾಸ, ಹಿಂದೂ ಪುರಾಣಗಳ ಶ್ಲೋಕಗಳನ್ನು ಕೇಳಿ ನನಗೆ ಗೊತ್ತೇ ಇರಲಿಲ್ಲ.ಆಗಿಂದಲೇ ನಾನು ಉಸ್ತಾದರ ಅಭಿಮಾನಿ ಆಗಿ ಬಿಟ್ಟಿದ್ದೆ. ಉಸ್ತಾದರ ಕಲಿಕೆಯ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ.ಅವರು ನಮ್ಮಂತೆ ಎಲ್ಲವನ್ನೂ ಸ್ಟೆಪ್ ಬೈ ಸ್ಟೆಪ್ ಶಾಲೆ ಕಾಲೇಜಿಗೆ ಹೋಗಿ ಕಲಿತದ್ದಲ್ಲ. ಅವರು ಸಖಾಫಿ ಪದವಿ ಪಡೆಯುವ ಹೊತ್ತಿಗೆ ಅವರಿಗಿದ್ದ ಲೌಕಿಕ ಶಿಕ್ಷಣ ಬಹುಷಃ ಎಸ್ಸೆಸ್ಸೆಲ್ಸಿ ಮಾತ್ರ.ಆ ಬಳಿಕ ಬಿ.ಎ. ಎಂ.ಎ.ಪಿ.ಎಚ್.ಡಿ., ಎಲ್.ಎಲ್.ಬಿ., ಎಲ್.ಎಲ್.ಎಂ. ಹೀಗೆ ಪದವಿಗಳ ಮೇಲೆ ಪದವಿಗಳನ್ನು ಪಡೆದುಕೊಂಡರು.
ಇವೆಲ್ಲಾ ಪದವಿಗಳನ್ನು ಅತ್ಯಂತ ಕಠಿಣ ಪರಿಶ್ರಮದಿಂದಲೇ ಪಡೆದುಕೊಂಡರು.ಒಂದೆಡೆ ಶರೀಅತ್ ಕಾಲೇಜಿನಲ್ಲಿ ಅಧ್ಯಾಪನ, ಇನ್ನೊಂದೆಡೆ ಪ್ರವಚನಗಳ ಬಿಡುವಿಲ್ಲದ ಶೆಡ್ಯೂಲ್ ಅದರ ಮಧ್ಯೆ ಉನ್ನತ ಪದವಿಗಳಿಗಾಗಿ ಕಠಿಣ ಅಭ್ಯಾಸ,ಲೈಬ್ರೆರಿಗಳಲ್ಲೇ ಬಿಡುವಿನ ಹೊತ್ತು ಕಳೆಯುವುದು.ಜೊತೆ ಜೊತೆಗೆ ಹತ್ತಾರು ಸಾಮಾಜಿಕ, ಧಾರ್ಮಿಕ ಜವಾಬ್ದಾರಿಗಳು.. ಜಾಮಿಯಾ ಮರ್ಕಝ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಾಗಿ ಕರ್ತವ್ಯಕ್ಕೆ ಸೇರ್ಪಡೆಯಾದ ಬಳಿಕವೇ ಈ ಮೇಲೆ ಉಲ್ಲೇಖಿಸಿದ ಸಾಲು ಸಾಲು ಉನ್ನತ ಶೈಕ್ಷಣಿಕ ಪದವಿಗಳನ್ನು ಉಸ್ತಾದ್ ಪಡೆದಿದ್ದು.
ಇಂದು ಉಸ್ತಾದ್ ಜಾಮಿಯಾ ಮರ್ಕಝ್ನ ಉಪಕುಲಪತಿ, ಜೊತೆ ಜೊತೆಗೆ ಕೇರಳ ಹೈ ಕೋರ್ಟ್ನ ನ್ಯಾಯವಾದಿ. ಮಂಜೇರಿಯಲ್ಲಿ ತನ್ನದೇ ಸ್ವಂತ ಕಚೇರಿಯಿಟ್ಟುಕೊಂಡಿದ್ದಾರೆ. ಮರ್ಕಝ್ನ ಅಧ್ಯಾಪನ ವೃತ್ತಿ, ಉಪ ಕುಲಪತಿ ಹುದ್ದೆ, ಲಾ ಪ್ರ್ಯಾಕ್ಟೀಸ್,ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಲ್ಲಲ್ಲಿ ಧಾರ್ಮಿಕ ಪ್ರವಚನ, ಅವರ ಗುರುವರ್ಯರಾದ ಸುಲ್ತಾನುಲ್ ಉಲಮಾ ಎ.ಪಿಉಸ್ತಾದರಿಗೆ ವಯೋ ಸಹಜ ಕಾರಣಗಳಿಗೆ ಕೆಲವೆಡೆಗೆ ತಲುಪಲು ಸಾಧ್ಯವಾಗದಾಗ ಉಸ್ತಾದರ ನಿರ್ದೇಶನದಂತೆ ವಿವಿಧ ಕೆಲಸ ಕಾರ್ಯಗಳಿಗೆ ಉಸ್ತಾದರ ಬದಲಿಗೆ ತಲುಪುವುದು, ಸಮಾಜದೊಳಗಿನ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಲು ಏಕ ಕಾಲಕ್ಕೆ ಉಲಮಾ ಮತ್ತು ನ್ಯಾಯವಾದಿ ಎರಡೂ ಆಗಿ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದು ಇಂತಹದ್ದನ್ನೆಲ್ಲಾ ಚುಳ್ಳಿಕ್ಕೋಡ್ ಉಸ್ತಾದ್ ಮಾಡುತ್ತಲೇ ಇರಬೇಕಾಗುತ್ತದೆ. ಅವರಿಗೆ ರಿಲ್ಯಾಕ್ಸೇಶನ್, ವಿಶ್ರಾಂತಿಗೆ ರಾತ್ರಿಯ ನಿದ್ರೆಯ ಹೊರತಾಗಿ ಸಮಯವಿಲ್ಲ.ಆದರೂ ಉಸ್ತಾದ್ ಸದಾ ಕೂಲ್ ಆಗಿರುತ್ತಾರೆ.ಅವರು ಯಾರೊಂದಿಗೂ ಜಗಳ ಕಾದದ್ದನ್ನು ಕಂಡವರಿಲ್ಲ.
ಅತ್ಯಂತ ಸರಳ ವ್ಯಕ್ತಿತ್ವದ ಉಸ್ತಾದರ ಬಳಿ ಮಾತನಾಡಲು ಯಾರಿಗೂ ವಿಶೇಷ ಅನುಮತಿ ಬೇಕಾಗಿಲ್ಲ.ಅವರು ಎಲ್ಲರ ಜೊತೆಗೂ ಪ್ರೀತಿ ಪೂರ್ವಕವಾಗಿ ಬೆರೆಯುತ್ತಾರೆ. ಅವರಲ್ಲಿರುವ ಇನ್ನೊಂದು ದೊಡ್ಡ ಗುಣ ಎದುರಿನವನ ಮಾತನ್ನು ಆಲಿಸುವುದು. ಅತ್ಯಂತ ಕ್ಲಿಷ್ಟ ವಿಷಯಗಳನ್ನೂ ಕೂಲ್ ಆಗಿ ಡೀಲ್ ಮಾಡಬಲ್ಲ ಚಾಕಚಕ್ಯತೆ ಅಲ್ಲಾಹನು ಅವರಿಗೆ ನೀಡಿದ ವಿಶೇಷ ಶಕ್ತಿ ಎಂದರೂ ತಪ್ಪಾಗದು.
ಅವರಲ್ಲಿ ನನಗೆ ಬಹಳ ಇಷ್ಟವಾದ ಇನ್ನೊಂದು ಗುಣ ತನ್ನಿಂದ ಪ್ರಮಾದವಾದರೆ ಅದನ್ನು ಯಾವ ಹಿಂಜರಿಕೆಯಿಲ್ಲದೇ ಒಪ್ಪಿಕೊಂಡು ಕ್ಷಮೆ ಕೇಳುವುದು.ತಾನು ಮಹಾ ವಿದ್ವಾಂಸ , ತಾನು ಉನ್ನತ ಹುದ್ದೆಯಲ್ಲಿರುವವ ಎಂಬ ಯಾವ ಹಮ್ಮು ಬಿಮ್ಮು ತೋರಿಸದಿರುವುದು. ಇತ್ತೀಚೆಗೆ ನನ್ನ ಪಕ್ಕದೂರು ಮುಡಿಪು ಎಂಬಲ್ಲಿ ಜುಮಾ ನಮಾಝ್ ಸ್ಥಾಪನೆಗೆ ಬಂದಿದ್ದರು. ಅವರಿಂದ ಏನೋ ಅಷ್ಟೇನೂ ಗುರುತರವಲ್ಲದ ಪ್ರಮಾದ ಘಟಿಸಿತು.ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಅವರ ವಿದ್ವತ್ತು, ಅವರ ಅರ್ಹತೆಯ ಮುಂದೆ ಏನೇನೂ ಅಲ್ಲದ ಕೆಲವರು ಅವರ ಮೇಲೆ ಮುಗಿ ಬಿದ್ದರು.ಆಸಕ್ತಿದಾಯಕ ವಿಚಾರವೇನೆಂದರೆ ಅಷ್ಟು ದೊಡ್ಡ ವಿದ್ವಾಂಸನಾದರೂ ಇವರೆಲ್ಲಾ ಮುಗಿಬೀಳುವ ಮುನ್ನವೇ “ಓರ್ವ ಸಾಮಾನ್ಯ ಮನುಷ್ಯನೆಂಬ ನೆಲೆಯಲ್ಲಿ ನನ್ನಿಂದ ಪ್ರಮಾದ ಘಟಿಸಿದೆ “ಎಂದು ಒಪ್ಪಿಕೊಂಡು ಸಮಾಜದ ಕ್ಷಮೆಯಾಚಿಸಿದ್ದರು.ಟೀಕಿಸುವವರು, ಬಯ್ಯುವವರು ತಂತಮ್ಮ ಸ್ವಭಾವವನ್ನು ಮುಂದುವರಿಸಿಯೇ ಇದ್ದರು.
ಕಾಲೆಳೆಯುವವರು ಸದಾ ತಮ್ಮ ಕಾಲಬುಡದಲ್ಲಿಯೇ ಇರುತ್ತಾರೆ ಎನ್ನುವ ವಾಸ್ತವ ಅರಿತು ಉಸ್ತಾದ್ ಮುಂದುವರಿದರು.ಈ ನಿಟ್ಟಿನಲ್ಲಿ ಉಸ್ತಾದ್ ಸಾಗಿ ಬಂದ ಹಾದಿ ಸುಲಭದ್ದಾಗಿರಲಿಲ್ಲ.ಓರ್ವ ಆಲಿಮ್ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಉಸ್ತಾದ್ ನಮ್ಮ ಮುಂದಿರುವ ಜೀವಂತ ನಿದರ್ಶನ. ಉಸ್ತಾದರನ್ನು ಅಲ್ಲಾಹನು ಇನ್ನಷ್ಟು ಉನ್ನತಿಗೇರಿಸಲಿ.
-ಇಸ್ಮತ್ ಪಜೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.