(www.vknews.in) : ನಿಜವಾಗಿಯೂ ಅದು ತಪ್ಪು. ಇಸ್ಲಾಮಿಕ್ ಹದೀಸುಗಳಲ್ಲಿ ಇಂತಹ ಪ್ರಾರ್ಥನೆಯನ್ನು ನಿರ್ಬಂಧಿಸಿದ ಉಲ್ಲೇಖ ತಿರ್ಮಿತಿ ನಂ.346 ಮತ್ತು ಇಬ್ನ್ ಮಾಝಾ ನಂ.747 ನಲ್ಲಿ “ಇಸ್ಲಾಂ ಧರ್ಮದಲ್ಲಿ ಏಳು ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿಸಲಾಗುವುದಿಲ್ಲ: ಅಲ್ಲಾಹನ ಗೃಹದ ಮೇಲೆ, ಅಂದರೆ ಪವಿತ್ರ ಕಾಬಾದ ಮಾಳಿಗೆಯ ಮೇಲೆ, ಸ್ಮಶಾನಗಳಲ್ಲಿ, ತ್ಯಾಜ್ಯ ಪ್ರದೇಶಗಳಲ್ಲಿ, ಕಸಾಯಿಖಾನೆಗಳಲ್ಲಿ, ಶೌಚಾಲಯಗಳಲ್ಲಿ, ಒಂಟೆಗಳು ವಿಶ್ರಾಂತಿ ಪಡೆಯುವ ಹಟ್ಟಿಗಳಲ್ಲಿ ಮತ್ತು ರಸ್ತೆಯ ಮಧ್ಯದಲ್ಲಿ” ಎಂದಿದೆ.
ಸಾರ್ವಜನಿಕರಿಗೆ, ರೋಗಿಗಳಿಗೆ, ವಯೋವೃದ್ಧರಿಗೆ, ಅಂಗವಿಕಲರಿಗೆ ತೊಂದರೆಯಾಗುವ ಯಾವುದೇ ಸ್ವರೂಪದ ಪ್ರಾರ್ಥನೆಗೆ ಇಸ್ಲಾಮಿನಲ್ಲಿ ಅವಕಾಶ ಇಲ್ಲ. ಆದರೆ ಭಾರತದಲ್ಲಿ ರಸ್ತೆಯ ಮೇಲೆ ಧಾರ್ಮಿಕ ಮೆರವಣಿಗೆಗಳು, ಆಚರಣೆಗಳು ಸರ್ವೇಸಾಮಾನ್ಯ. ಇದು ಬರೀ ಮುಸ್ಲಿಮರಲ್ಲಿ ಮಾತ್ರವಲ್ಲ ಹಿಂದೂಗಳು ಸೇರಿದಂತೆ ಭಾರತದ ಎಲ್ಲ ಸಮುದಾಯಗಳ ಆಚರಣೆಗಳಲ್ಲಿ ಕಾಣಬಹುದು. ದಶಕಗಳಿಂದಲೂ ಎಲ್ಲ ಸಮುದಾಯಗಳು ಇದನ್ನು ಹೊಂದಿಕೊಂಡೇ ಬದುಕುತ್ತಿವೆ.
ಆದರೆ ಈಗೀಗ ಧರ್ಮದಲ್ಲಿ ರಾಜಕಾರಣ ಆರಂಭವಾದ ಮೇಲೆ ಬರೀ ಮುಸ್ಲಿಮರ ನಮಾಜ್ ಮಾತ್ರ ಸಮಸ್ಯೆ ಆಗತೊಡಗಿದೆ. ಸಾಮಾನ್ಯವಾಗಿ ಮುಸ್ಲಿಮರು ರಸ್ತೆಯ ಮೇಲೆ ನಮಾಜ್ ಮಾಡುವುದು ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮತ್ತು ವರ್ಷಕ್ಕೆ ಎರಡು ಬಾರಿ ಇರುವ ಈದ್ ಪ್ರಾರ್ಥನೆಗಳಲ್ಲಿ ಮಾತ್ರ..
ಪಟ್ಟಣ ಪ್ರದೇಶಗಳಲ್ಲಿ ಶುಕ್ರವಾರದ ನಮಾಜ್ ಸಂದರ್ಭದಲ್ಲಿ ಮಸೀದಿಗೆ ತಡವಾಗಿ ತಲುಪುವವರಿಗೆ ಪ್ರಾರ್ಥನೆಗೆ ಸ್ಥಳಾವಕಾಶದ ಸಮಸ್ಯೆ ಕೆಲವು ಮಸೀದಿಗಳಲ್ಲಿ ಆಗುತ್ತದೆ. ಹೀಗೆ ಸ್ಥಳಾವಕಾಶ ಕೊರತೆಯಾದಾಗ ಕೆಲವರು 3 ರಿಂದ ರಿಂದ 5 ನಿಮಿಷದವರೆಗಿನ ನಮಾಜಿಗೆ ರಸ್ತೆಯನ್ನು ಅವಲಂಬಿಸುತ್ತಾರೆ. ಇದು ಸ್ಥಳಾವಕಾಶದ ಕೊರತೆಯಿಂದಲೇ ಹೊರತು ಬೇಕಂತಲೇ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ ಎಂಬ ಆರೋಪ ತಪ್ಪು. ನಿಜವಾಗಿ ರಸ್ತೆಯಲ್ಲಿ ನಮಾಜ್ ಮಾಡಲು ಯಾರೂ ಕೂಡ ಇಚ್ಚಿಸುವುದಿಲ್ಲ. ಸಾರ್ವಜನಿಕ ರಸ್ತೆ ಎಂದ ಮೇಲೆ ಗಲೀಜು, ಕಸಕಡ್ಡಿಗಳು ಎಲ್ಲ ಇರುತ್ತವೆ. ಹೀಗಿರುವುದರಿಂದ ಪ್ರಮುಖ ಪ್ರಾರ್ಥನೆಗೆ ರಸ್ತೆಯಲ್ಲಿ ನಮಾಜ್ ಮಾಡಲು ಯಾರಿಗೂ ಇಷ್ಟವಿರುವುದಿಲ್ಲ. ಆದರೆ ಮಸೀದಿಗಳು ತುಂಬಿದಾಗ ಕೆಲವೊಮ್ಮೆ ಅನಿವಾರ್ಯವಾಗಿ ಇಷ್ಟವಿಲ್ಲದಿದ್ದರೂ ಮಾಡಲೇ ಬೇಕಾಗುತ್ತದೆ..
ವಿಷಯ ಹೀಗಿದ್ದರೂ, ನಿರಂತರವಾಗಿ ನಮಾಜಿನ ಕಾರಣದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದರೆ ಅಂತಹ ಪ್ರಾರ್ಥನೆ ತಪ್ಪು ಮತ್ತು ಅದು ಧಾರ್ಮಿಕತೆಯಲ್ಲಿ ಸ್ವೀಕಾರಾರ್ಹವಲ್ಲ. ಆದರೆ ವರ್ಷಂಪ್ರತಿ ಗಣೇಶೋತ್ಸವ, ಶಾರದೋತ್ಸವ, ರಥೋತ್ಸವಗಳು ಹೆಚ್ಚು ಕಡಿಮೆ ರಸ್ತೆಯ ಮೇಲೆ ಮೆರವಣಿಗೆ ರೂಪದಲ್ಲಿ ಹೋಗುವುದರಿಂದ ಮತ್ತು ಆ ಆಚರಣೆಗಳು ಕೆಲವೊಮ್ಮೆ ಅರ್ಧ ದಿನ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಶುಕ್ರವಾರದ ನಮಾಜಿನ ಕೇವಲ 5-10 ನಿಮಿಷಗಳ ಪ್ರಾರ್ಥನೆ ತಪ್ಪು ಎನ್ನುವುದು ತಪ್ಪಾಗುತ್ತದೆ. ಭಾರತದಲ್ಲಿ ಬಹಳಷ್ಟು ಮಂದಿರಗಳು ಮತ್ತು ಕೆಲವಷ್ಟು ಮಸೀದಿಗಳು ಹೆಚ್ಚು ಕಡಿಮೆ ರಸ್ತೆಯ ಮೇಲೆಯೇ ಇವೆ. ಆದರೆ ಇಲ್ಲಿಯವರೆಗೆ ಅದು ಸಮಸ್ಯೆಯಾಗಿರಲಿಲ್ಲ. ಧರ್ಮರಾಜಕಾರಣ ಮುನ್ನಲೆಗೆ ಬಂದ ನಂತರ ಈಗ ಇಲ್ಲದ ಸಮಸ್ಯೆಯು ಸಮಸ್ಯೆಯಾಗಿದೆ.
ತುಲಾನಾತ್ಮಕವಾಗಿ ಹೇಗೆಯೇ ನೋಡಿದರೂ, ಮುಸ್ಲಿಮರು ರಸ್ತೆಯ ಮೇಲೆ ಪ್ರಾರ್ಥನೆಗೆ ತೆಗೆದುಕೊಳ್ಳುವ ಸಮಯ ಮತ್ತು ಇತರ ಸಮುದಾಯಗಳವರು ಮೆರವಣಿಗೆ-ಉತ್ಸವಗಳಿಗೆ ರಸ್ತೆಯನ್ನು ಬಳಸುವ ಸಮಯವನ್ನು ನೋಡಿದರೆ ಮುಸ್ಲಿಮರು ತೆಗೆದುಕೊಳ್ಳುವ ಸಮಯ ಬಹಳವೇ ಕಡಿಮೆಯಾಗಿದೆ. ಹೀಗಿದ್ದರೂ ಕೂಡ ಇತರ ಸಮುದಾಯಗಳನ್ನು ಮುಸ್ಲಿಮರು ಅನುಸರಿಸಬೇಕೆಂದೇನಿಲ್ಲ. ನಿರಂತರವಾಗಿ ನಮಾಜಿಗೆ ಸ್ಥಳಾವಕಾಶ ಕಡಿಮೆಯಾದ ಮಸೀದಿಗಳಲ್ಲಿ ಸ್ಥಳಾವಕಾಶ ಸೃಷ್ಟಿಸುವುದು ಅಥವಾ ತಡವಾಗಿ ಮಸೀದಿಗೆ ಬರುವವರಿಗೆ ಎರಡನೆಯ ಹಂತದಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡುವುದು ಸೂಕ್ತ ಮಾರ್ಗವಾಗಿದೆ..
ಇದರ ಜೊತೆಗೆ ಸರ್ಕಾರಗಳು ಕೂಡ ರಸ್ತೆಯ ಮೇಲೆ ಧಾರ್ಮಿಕ ಆಚರಣೆಗಳನ್ನು ಮಾಡುವ ಯಾವುದೇ ಸಮುದಾಯದವರಿಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಅಥವಾ ಕಾನೂನಿನ ಕಕ್ಷೆಯೊಳಗೆ ತರುವ ಕ್ರಮಗಳನ್ನು ಕೈಗೊಳ್ಳಬೇಕು. ಹೀಗೆ ಸರ್ಕಾರವು ಈ ನಿಟ್ಟಿನಲ್ಲಿ ಧರ್ಮ ತಾರತಮ್ಯವಿಲ್ಲದೆ ಕಾರ್ಯನ್ಮುಖವಾದರೆ ಈ ಸಮಸ್ಯೆ ಶಾಶ್ವತವಾಗಿ ಇರುವುದಿಲ್ಲ. ಆದರೆ ಸರ್ಕಾರ ಈ ವಿಷಯದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸದೇ ಇರುವುದರಿಂದ ರಸ್ತೆಯ ಮೇಲಿನ ಧಾರ್ಮಿಕ ಆಚರಣೆಗಳು ಎಲ್ಲ ಸಮಯದಲ್ಲೂ ಎಲ್ಲ ಧರ್ಮದವರಿಂದಲೂ ನಡೆಯುತ್ತದೆ…
✍ ಮುಷ್ತಾಕ್ ಹೆನ್ನಾಬೈಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.