(www.vknews.in) ; ಮೊನ್ನೆ ಬೆಳಿಗ್ಗೆ ಸುಮಾರು ಎಂಟು ಗಂಟೆಯ ಹೊತ್ತಿಗೆ ನನ್ನ ದೊಡ್ಡಪ್ಪನ ದಿನಸಿ ಅಂಗಡಿಯಲ್ಲಿ ನಿಂತು ದೊಡ್ಡಪ್ಪನವರೊಂದಿಗೆ ಮಾತನಾಡುತ್ತಿದ್ದೆ. ಅವರ ಮನೆ ಅವರ ಹಿಂಭಾಗದಲ್ಲೇ ಇರುವುದು.ದೊಡ್ಡಪ್ಪನ ಮೊಮ್ಮಗ ನಾಲ್ಕು ವರ್ಷದ ಅಹ್ನಾಫ್ ಅಂಗಡಿಯತ್ತ ಓಡೋಡಿ ಬರುತ್ತಾ ದೊಡ್ಡಪ್ಪನ ನ್ನುದ್ದೇಶಿಸಿ ” ಬಾಪಾ ನಾ ಸ್ಕೂಲ್ಗ್ ಪೊಯ್ತಿಲ್ಲೆ” ಎಂದು ಖುಷಿಯಿಂದ ಹೇಳುತ್ತಾ ಬಂದ. ಯಾಕೋ ಸ್ಕೂಲ್ಗೆ ಹೋಗಲಿಲ್ಲ ಎಂದು ಪ್ರಶ್ನಿಸಿದೆ ” ನಕ್ಕ್ ಪನಿ (ನನಗೆ ಜ್ವರ)” ಎಂದು ನಗುತ್ತಾ ಹೇಳಿದ.ನಿಜಕ್ಕೂ ಆತನಿಗೆ ಜ್ವರವಿದ್ದಂತೆ ನನಗನಿಸಿಲ್ಲ.
ಶಾಲೆಯ ವ್ಯಾನ್ ಏಳೂವರೆಯ ಹೊತ್ತಿಗೆ ಅವರ ಮನೆಯ ಮುಂದಿನ ರಸ್ತೆಯಿಂದ ಪಾಸ್ ಆಗುತ್ತದೆ. ಆ ಸಮಯ ಮೀರುವವರೆಗೂ ಮಲಗಿ, ವ್ಯಾನ್ ಪಾಸ್ ಆದ ಬಳಿಕ ಕುಣಿಯುತ್ತಾ, ಕುಪ್ಪಳಿಸುತ್ತಾ ಬಂದ.ಸ್ಕೂಲ್ಗೆ ರಜೆಯೆಂದರೆ ಎಲ್ಲಾ ಮಕ್ಕಳಿಗೂ ಸಹಜವಾಗಿಯೇ ಖುಷಿ.ತಪ್ಪಿಸಲು ನೆಪ ಹುಡುಕುತ್ತಿರುತ್ತಾರಷ್ಟೆ.
ನನ್ನ ದೊಡ್ಡಪ್ಪನ ಮೊಮ್ಮಗ ಶಾಲೆಗೆ ಹೋಗದ ಆತನ ಭಾವನೆಯನ್ನು ಖುಷಿಯಿಂದ ವ್ಯಕ್ತಪಡಿಸಲು ಕಾರಣವೇನು.? ಆತ ಒಂದು ಉದಾಹರಣೆ ಮಾತ್ರ. ಆತನ ಹರೆಯದ ಎಲ್ಲಾ ಮಕ್ಕಳದ್ದೂ ಇದೇ ಸ್ಥಿತಿ. ಮಕ್ಕಳಿಗೆ ಸ್ಕೂಲ್ ಜೈಲಾಗುತ್ತಿದೆ. ಸೃಜನಾತ್ಮಕವಾಗಿ ಕಳೆಯಬೇಕಾದ ಅವರ ಬಾಲ್ಯ ಸದಾ ಒತ್ತಡದಲ್ಲೇ ಕಳೆದು ಹೋಗುತ್ತದೆ.
ಬೆಳಿಗ್ಗೆ ಏಳೂವರೆಯ ಹೊತ್ತಿಗೆ ಸ್ಕೂಲ್ ವ್ಯಾನ್ ಬರುತ್ತದೆ. ವ್ಯಾನ್ ಡ್ರೈವರ್ ಎಲ್ಲಾ ಮಕ್ಕಳನ್ನು ಪಿಕ್ ಮಾಡಿ ಶಾಲೆಗೆ ತಲುಪುವಾಗ ಏನಿಲ್ಲವೆಂದರೂ ಎಂಟೂ ಮುಕ್ಕಾಲಾಗುತ್ತದೆ. ಬೆಳ್ಳಂಬೆಳಗ್ಗೆಯೇ ಒಂದು ಕಾಲು ಗಂಟೆಯ ವ್ಯಾನ್ ಪ್ರಯಾಣ, ಇನ್ನು ಕೆಲವೆಡೆ ಒಂದೂವರೆ ಗಂಟೆಯ ವ್ಯಾನ್ ಪ್ರಯಾಣ ಅವರ ಉತ್ಸಾಹವನ್ನೇ ಕುಗ್ಗಿಸುತ್ತದೆ. ಆ ವ್ಯಾನ್ನಲ್ಲಿರುವ ಎಲ್ಲಾ ಮಕ್ಕಳು ಸಪ್ಪೆ ಮೋರೆ ಹಾಕಿಕೊಂಡೇ ವ್ಯಾನ್ಗೆ ಏರುವವರು. ಮಕ್ಕಳಿಗೆ ಬೆಳಿಗ್ಗೆ ಸರಿಯಾಗಿ ತಿನ್ನಲೂ ಆಗುವುದಿಲ್ಲ. ಶಾಲೆಯಲ್ಲಿ ಎಷ್ಟು ತಿಂದರೂ ಇಷ್ಟೆಂದಿರುತ್ತದೆ.
ಮತ್ತೆ ಕಲಿಕೆಯನ್ನು ಬಲವಂತವಾಗಿ ಮಕ್ಕಳ ಮೇಲೆ ಹೇರಲಾಗುತ್ತದೆ.ಮತ್ತೆ ಮೂರು ಗಂಟೆಗೆ ಶಾಲೆ ಬಿಟ್ಟರೂ ವ್ಯಾನ್ ಒಂದೂವರೆ ಗಂಟೆ ತಿರುಗಿ ಮಕ್ಕಳನ್ನು ಡ್ರಾಪ್ ಮಾಡುವಾಗ ನಾಲ್ಕೂವರೆಯಾಗುತ್ತದೆ.ಅಷ್ಟು ಪುಟ್ಟ ಮಕ್ಕಳಿಗೆ ಪ್ರತಿದಿನವೂ ಮೂರು ಗಂಟೆಯ ಪ್ರಯಾಣವಾದರೆ ಮಕ್ಕಳಿಗೆ ಹೇಗಾಗಬೇಡ. ಮಂಗಳೂರಿನಲ್ಲಿದು ಸರ್ವೇ ಸಾಮಾನ್ಯ. ಸ್ಕೂಲಿಗೆ ಹತ್ತು ಕಿಲೋ ಮೀಟರಷ್ಟೇ ದೂರವಿದ್ದರೂ ಬೇರೆ ಬೇರೆ ಊರುಗಳಿಂದ ಮಕ್ಕಳನ್ನು ಪಿಕ್ ಮಾಡಿ ಕರೆದುಕೊಂಡು ಹೋಗಲು ಒಂದರಿಂದ ಒಂದೂವರೆ ತಾಸು ತಗಲುತ್ತದೆ.
ನನ್ನ ಮಗಳು ಶಹೀಮ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳ ಸ್ಕೂಲ್ ನಮ್ಮ ಮೆನೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಷ್ಟೇ ಇದೆ. ಬೆಳಿಗ್ಗೆ ಎಂಟು ಗಂಟೆಗೆ ಸ್ಕೂಲ್ ವ್ಯಾನ್ ಬರುತ್ತದೆ. ಸಂಜೆ ನಾಲ್ಕೂವರೆಗೆ ಮರಳಿ ಮನೆ ತಲುಪುತ್ತಾಳೆ.ಬರೀ ಹದಿನೈದು ನಿಮಿಷ ಮಾತ್ರ ಮನೆಯಲ್ಲಿರುತ್ತಾಳೆ.ಐದು ಗಂಟೆಗೆ ಮದ್ರಸಾ ತರಗತಿ ಆರಂಭವಾಗುತ್ತೆ. ನಾಲ್ಕು ಮುಕ್ಕಾಲರೊಳಗೆ ಗಬಗಬನೇ ಏನಾದ್ರೂ ತಿಂದು ವಾಶ್ರೂಮ್ಗೆ ಹೋಗಿ ಫ್ರೆಶ್ ಆಗಿ, ಡ್ರೆಸ್ ಚೇಂಜ್ ಮಾಡಿ,ಪುಸ್ತಕಗಳನ್ನೆಲ್ಲಾ ಬ್ಯಾಗಿಗೆ ತುಂಬಿಸಿ ಹೊರಡಲೇಬೇಕು.
ಮದ್ರಸಾದಿಂದ ಮರಳಿ ಮನೆ ತಲುಪುವಾಗ ಏಳು ಗಂಟೆ. ನಾವು ಮುಸ್ಲಿಮರಾದುದರಿಂದ ಮದ್ರಸಾ, ಮುಸ್ಲಿಮೇತರ ಮಕ್ಕಳಿಗೆ ಶಾಲೆಯಿಂದ ಬಂದ ಕೂಡಲೇ ಟ್ಯೂಶನ್ಗೆ ಹೊರಡಬೇಕು. ಅವರೂ ಮರಳಿ ಮನೆ ತಲುಪುವಾಗ ಏಳು ಗಂಟೆಯಾಗುತ್ತದೆ.ಏಳು ಗಂಟೆಗೆ ಮನೆ ತಲುಪಿದ ಮಕ್ಕಳು ಸ್ನಾನ ಮುಗಿಸಿ ಹೋಂ ವರ್ಕ್ಗೆ ಮಾಡಲು ಕೂರಬೇಕು. ಅದೆಲ್ಲಾ ಮುಗಿಯುವಾಗ ಒಂಬತ್ತು- ಒಂಬತ್ತೂವರೆಯಾಗುತ್ತೆ.
ಈಗಿನ ಶಿಕ್ಷಣ ವ್ಯವಸ್ಥೆಯನ್ನು ಇಂಟರ್ನೆಟ್ ಇಲ್ಲದೇ ಊಹಿಸಲೂ ಸಾಧ್ಯವಿಲ್ಲ. ಮಕ್ಕಳು ಅಥವಾ ಹೆತ್ತವರು ಪ್ರತಿಯೊಂದನ್ನೂ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡೇ ಹೋಂ ವರ್ಕ್ಸ್, ಪ್ರಾಜೆಕ್ಟ್ ವರ್ಕ್ಸ್, ಸುಡುಗಾಡು ಎಲ್ಲವನ್ನೂ ಮಾಡಲೇಬೇಕಬ ಒತ್ತಡ ಮಕ್ಕಳ ಮೇಲಿರುತ್ತದೆ.ಮಕ್ಕಳು ಶಾಲೆಯಲ್ಲಿ ಬರೆಯುವುದರ ಎರಡು ಪಟ್ಟು ಮನೆಯಲ್ಲಿ ಬರೆಯಬೇಕಾಗುತ್ತದೆ.ಹೋಮ್ ವರ್ಕ್ಸ್ , ಮಾಡೆಲ್ ಕ್ವಶ್ಚನ್ ಪೇಪರ್ಸ್, ಪ್ರಾಜೆಕ್ಟ್ ವರ್ಕ್ಸ್ ಇತ್ಯಾದಿಗಳ ಕಾರಣಕ್ಕೆ ಆಂಡ್ರಾಯ್ಡ್ ಫೋನ್ ಮಕ್ಕಳ ಕೈಯಲ್ಲಿ ಕೊಡಲೇಬೇಕಾದ ಅನಿವಾರ್ಯತೆ.ಅದು ಸ್ಕ್ರೀನ್ ಅಡಿಕ್ಷನ್ಗೂ ಕಾರಣವಾಗುತ್ತೆ. ಕಲಿಕೆಯ ಒತ್ತಡದ ಜೊತೆಗೆ ಸ್ಕ್ರೀನ್ ಅಡಿಕ್ಷನ್ ಬೇರೆ.ಇನ್ನು ಮಕ್ಕಳಿಗಿಂತ ಮಕ್ಕಳ ಬ್ಯಾಗಿನ ಭಾರವೇ ಹೆಚ್ಚು.
ಇಡೀ ದಿನದಲ್ಲಿ ಮಕ್ಕಳಿಗೆ ಅರ್ಧ ಗಂಟೆ ಆಡಲು ಸಮಯ ಸಿಗುವುದಿಲ್ಲ. ಸ್ಕೂಲ್ಗಳಲ್ಲಿ ಪಿ.ಟಿ.ಪೀರಿಯೆಡ್ಗಳನ್ನೂ ಅಧ್ಯಾಪಕರು ಕಸಿಯುತ್ತಾರೆ. ಕೆಲವು ಶಾಲೆಗಳಲ್ಲಿ ಆಡಲು ಬಿಡುತ್ತಾರಾದರೂ ಬಿಸಿಲಿರುವ ಹೊತ್ತು ಆಡಲು ಬಿಟ್ಟರೂ ಮಕ್ಕಳು ಮೈದಾನಕ್ಕಿಳಿಯಲು ಹಿಂಜರಿಯುತ್ತಾರೆ. ಇನ್ನು ಮಳೆಯಾದರೆ ಪಿ.ಟಿ.ಪೀರಿಯೆಡ್ನಲ್ಲಿ ಆಡಲು ಸಾಧ್ಯವಾಗುವುದೂ ಇಲ್ಲ. ಆ ಹೊತ್ತನ್ನು ಅಧ್ಯಾಪಕರು ಪೋರ್ಶನ್ ಕಂಪ್ಲೀಟ್ ಆಗಲಿಲ್ಲ ಎಂದು ಕಸಿಯುತ್ತಾರೆ. ಮಕ್ಕಳಿಗೆ ದೈಹಿಕ ವ್ಯಾಯಾಮ ತೀರಾ ಸಿಗುವುದಿಲ್ಲ. ರಜಾಕಾಲದ ಹೊರತುಪಡಿಸಿ ವರ್ಷಪೂರ್ತಿ ಕಲಿಕೆಯ ಒತ್ತಡ. ಶಾಲೆಗಳು ರಿಸಲ್ಟ್ ಒರಿಯೆಂಟೆಡ್, ಹೆತ್ತವರು ಮಕ್ಕಳನ್ನು ಮಾರ್ಕ್ಸ್ ತೆಗೆಯುವ ಯಂತ್ರಗಳಂತೆ ಮಾಡುತ್ತಾರೆ.
ಮಕ್ಕಳಿಗೆ ಬಿಡಿ, ನಮಗೇ ಆದರೂ ಇನಿತೂ ವಿಶ್ರಾಂತಿ ಸಿಗದೇ ಇದ್ದಾಗ ಬದುಕು ಯಾಂತ್ರಿಕವಾಗುವುದಿಲ್ಲವೇ..? ಹೃದಯಾಘಾತಕ್ಕೆ ಅತೀ ಮುಖ್ಯ ಕಾರಣಗಳಲ್ಲಿ ಒತ್ತಡದ, ವಿಶ್ರಾಂತಿ ರಹಿತ ದಿನಚರಿ ಕೂಡಾ ಒಂದು ಎಂಬುವುದನ್ನು ವೈದ್ಯಲೋಕ ವಿವಾದಕ್ಕೆಡೆಯಿಲ್ಲದಂತೆ ಒಪ್ಪುತ್ತದೆ. ಹಾಗಿರುವಾಗ ನಾವ್ಯಾಕೆ ಮಕ್ಕಳನ್ನು ಇಂತಹ ಒತ್ತಡದ ಶಿಕ್ಷಣ ವ್ಯವಸ್ಥೆಯಿಂದ ಹೊರತರಲು ಪ್ರಯತ್ನಿಸುವುದಿಲ್ಲ ಎಂದು ಯಾರೇ ಹೆತ್ತವರಲ್ಲಿ ಕೇಳಿದರೂ ” ಹೇಗೆ ಸಾಧ್ಯ ಸಾರ್..?” ಎಂದು ಅಸಹಾಯಕರಾಗಿ ಪ್ರಶ್ನಿಸುತ್ತಾರೆ.
ಹೌದಲ್ವಾ.. ನಮ್ಮ ಶಿಕ್ಷಣ ವ್ಯವಸ್ಥೆಯೇ ಹಾಗಿದ್ದರೆ ಯಾರಾದರೂ ಏನು ಮಾಡಲು ಸಾಧ್ಯ.? ಸರಕಾರಗಳು ಕಠಿಣ ಶಿಕ್ಷಣ ನೀತಿಯನ್ನು ಕೈ ಬಿಡಲೇಬೇಕು. ಪಠ್ಯಗಳು ಸರಳವಾಗಿರಬೇಕು. ಪ್ರತೀ ಶಾಲೆಗೂ ಒಂದು ಚೈಲ್ಡ್ ಸೈಕಾಲಜಿಸ್ಟ್ ನೇಮಕ ಕಡ್ಡಾಯವಾಗಿ ಆಗಲೇ ಬೇಕು. ಇಡೀ ಶಿಕ್ಷಣ ವ್ಯವಸ್ಥೆಯನ್ನು ಫಲಿತಾಂಶಾಧಾರಿತ ಪದ್ಧತಿಯಿಂದ ಹೊರ ತರಲೇಬೇಕು. ಪರೀಕ್ಷೆಗಳನ್ನು ಸರಳಗೊಳಿಸಬೇಕು. Rank ಘೋಷಣೆ,Rank ಕುರಿತ ಸುದ್ಧಿ ಪ್ರಸಾರ, Rank ವಿಚಾರವನ್ನು ಮುಂದಿಟ್ಟು ಮಾಡುವ ಜಾಹೀರಾತು ಇವೆಲ್ಲವನ್ನೂ ಕನಿಷ್ಟ ಎಸ್ಸೆಸ್ಸೆಲ್ಸಿವರೆಗಾದ್ರೂ ನಿಲ್ಲಿಸಲೇಬೇಕು.
ತರಗತಿಗಳ ಸಮಯವನ್ನು ಒಂಬತ್ತರಿಂದ ಎರಡು ಗಂಟೆಯವರೆಗೆ ಮಾತ್ರ ಎಂದು ಕಡ್ಡಾಯವಾಗಿ ನಿಗದಿಪಡಿಸಬೇಕು. ಇಂತಹ ಅಮೂಲಾಗ್ರ ಬದಲಾವಣೆಗಳು ಆಗದಿದ್ದರೆ ಮಕ್ಕಳು ಹೃದಾಯಾಘಾತದಿಂದ ಸಾಯುವುದನ್ನು ತಡೆಯಲು ಸಾಧ್ಯವೇ ಇಲ್ಲ.
✍️ ಇಸ್ಮತ್ ಪಜೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.