(www.vknews.in) : ಜಮ್ಮು ಕಾಶ್ಮೀರದ ನೆಲದಲ್ಲಿ ಮತ್ತೆ ಒಂದು ಸಾಹಸಗಾಥೆ ಬರೆಯಲ್ಪಟ್ಟಿದೆ. ಅದು ಕೇವಲ ಮನುಷ್ಯ ಸೈನಿಕರ ಕಥೆಯಲ್ಲ. ನಾಲ್ಕು ಕಾಲುಗಳ ಮೇಲೆ ನಿಂತಿದ್ದರೂ ಹೃದಯದಲ್ಲಿ ತ್ರಿವರ್ಣದ ನಿಷ್ಠೆ ಹೊತ್ತಿದ್ದ ಮೌನ ಯೋಧನ ಕಥೆ. ಭಾರತೀಯ ಸೇನೆಗೆ ಸೇರಿದ ಆರ್ಮಿ ಡಾಗ್ ಟೈಸಾನ್, ಕಾಲಿಗೆ ಗುಂಡು ತಗುಲಿದರೂ ಕಾರ್ಯಾಚರಣೆಯಿಂದ ಹಿಂದೆ ಸರಿಯದೆ ಮೂವರು ಜೈಷ್ ಉಗ್ರರನ್ನು ಹೊಡೆದುರುಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಗುಂಡಿನ ಸದ್ದು ಮತ್ತು ಅಪಾಯದ ನೆರಳಿನ ನಡುವೆ ಟೈಸಾನ್ ತನ್ನ ಹ್ಯಾಂಡ್ಲರ್ಗಳ ಜೊತೆ ಮುಂಚೂಣಿಯಲ್ಲಿ ಸಾಗಿತ್ತು. ಗಾಯಗೊಂಡಿದ್ದರೂ ದಿಕ್ಕು ತಪ್ಪಲಿಲ್ಲ. ತನ್ನ ತರಬೇತಿ ಮತ್ತು ನಿಷ್ಠೆಯ ಮೇಲೆ ನಂಬಿಕೆ ಇಟ್ಟು ಕಾರ್ಯ ಮುಂದುವರಿಸಿತು. ಅದರ ಧೈರ್ಯದಿಂದ ಕಾರ್ಯಾಚರಣೆ ಯಶಸ್ವಿಯಾಗಿ ಮತ್ತೊಮ್ಮೆ ಭಾರತೀಯ ಸೇನೆಯ ಶೌರ್ಯವನ್ನು ನೆನಪಿಸಿದೆ. ಸತ್ತವರಲ್ಲಿ ಓರ್ವ 2 ವರ್ಷಗಳಿಂದ ಸುಮಾರು 20 ಬಾರಿ ಸಾವಿನ ದವಡೆಯಿಂದ ಪಾರಾಗಿದ್ದ. ಭದ್ರತಾ ಪಡೆಗಳು ಸುತ್ತಿವರಿದಿದ್ದರೂ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಭಾನುವಾರ ನಡೆದ ಎನ್ಕೌಂಟರ್ನಲ್ಲಿ ಆತ ಹತನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸುಮಾರು ಮೂರು ವರ್ಷಗಳ ಹಿಂದೆ ಅನಂತನಾಗ್ ಜಿಲ್ಲೆಯ ಕಾರ್ಯಾಚರಣೆಯಲ್ಲಿ ಝೂಮ್ ಎಂಬ ಸೇನಾ ಶ್ವಾನವೂ ಇದೇ ರೀತಿಯ ಸಾಹಸ ತೋರಿಸಿತ್ತು. ಉಗ್ರರ ಅಡಗು ತಾಣದತ್ತ ಮುಂಚೂಣಿಯಲ್ಲಿ ನುಗ್ಗಿದ ಝೂಮ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಎರಡು ಗುಂಡುಗಳು ತಗುಲಿದ್ದರೂ ಅದು ಹಿಂದೆ ಸರಿಯಲಿಲ್ಲ. ಗಾಯಗೊಂಡಿದ್ದರೂ ತಂಡಕ್ಕೆ ದಾರಿ ತೋರಿಸಿ ಕಾರ್ಯಾಚರಣೆಗೆ ನೆರವಾದ ಆ ಮೌನ ಯೋಧ ಕೊನೆಯಲ್ಲಿ ಪ್ರಾಣ ತ್ಯಾಗ ಮಾಡಿತು.
ಸೈನಿಕ ನಾಯಿಗಳು ಕೇವಲ ತರಬೇತುಗೊಂಡ ಪ್ರಾಣಿಗಳಲ್ಲ. ಅವು ಸೇನೆಯ ಅವಿಭಾಜ್ಯ ಅಂಗ. ಸ್ಫೋಟಕ ವಸ್ತುಗಳ ಪತ್ತೆ ಮತ್ತು ಅಡಗಿದ್ದ ಉಗ್ರರ ಗುರುತು ಹಿಡಿಯುವಲ್ಲಿ ಅವುಗಳ ಪಾತ್ರ ಅಮೂಲ್ಯ. ಟೈಸಾನ್ ಮತ್ತು ಝೂಮ್ ತೋರಿಸಿದ ಶೌರ್ಯ ಈ ಸತ್ಯವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.
ದೇಶಭಕ್ತಿ ಎಂದರೆ ದ್ವೇಷವಲ್ಲ. ಅದು ಯಾವುದೇ ಸಮುದಾಯದ ವಿರುದ್ಧ ಕೋಪ ಅಥವಾ ಅಶಾಂತಿ ಹುಟ್ಟುಹಾಕುವ ಘೋಷಣೆಗಳಲ್ಲ. ನಿಜವಾದ ದೇಶಪ್ರೇಮ ಎಂದರೆ ಗಡಿಯಲ್ಲಿ ನಿಂತು ನಮ್ಮ ನಿದ್ರೆಯನ್ನು ಕಾಯುವ ಸೈನಿಕರದ್ದು. ಅವರ ಮೇಲಿನ ಗೌರವ ನಮ್ಮ ಪಾಲಿನ ದೇಶಪ್ರೇಮ. ಅವರಿಗೆ ಸದಾ ಸ್ಮರಣೆ, ಸದಾ ಕೃತಜ್ಞತೆ. ಅವರ ಜೊತೆಗಿರುವ ನಾಲ್ಕುಕಾಲಿನ ಮೌನ ಯೋಧರ ಮೇಲಿನ ಗೌರವವೂ ಅಷ್ಟೇ ಮಹತ್ವದ್ದು. ದೇಶಪ್ರೇಮ ಅಂದರೆ ಸೈನಿಕರನ್ನು ಗೌರವಿಸುವುದಷ್ಟೇ ಅಲ್ಲ. ಅವರು ಹೊರಗಿನಿಂದ ಬರುವ ಶತ್ರುಗಳಿಂದ ದೇಶವನ್ನು ಕಾಪಾಡುತ್ತಾರೆ. ನಾವು ಒಳಗಿನಿಂದ ದೇಶವನ್ನು ಕಾಪಾಡಬೇಕು. ಅಶಾಂತಿ ಹುಟ್ಟುಹಾಕದೇ ಇರುವುದು, ದ್ವೇಷವನ್ನು ಹರಡದೇ ಇರುವುದು, ಸಮಾಜದಲ್ಲಿ ವಿಭಜನೆ ಸೃಷ್ಟಿಸದೇ ಏಕತೆಯನ್ನು ಬಲಪಡಿಸುವುದು. ದೇಶದ ಅಭಿವೃದ್ಧಿ, ಶಾಂತಿ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವುದು ಅದೇ ನಿಜವಾದ ದೇಶಪ್ರೇಮ.
ಎನಿ ಹೌ.. ಟೈಸಾನ್ ಬದುಕಿ ಹೋರಾಡಿತು. ಝೂಮ್ ತ್ಯಾಗದ ಮೂಲಕ ಅಮರವಾಯಿತು. ಜಮ್ಮು ಕಾಶ್ಮೀರದ ಕಣಿವೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಾಚರಣೆಯ ಹಿಂದೆ ಇಂತಹ ಅನೇಕ ಮೌನ ಕಥೆಗಳು ಇವೆ. ಮಾನವ ಯೋಧರು ಮತ್ತು ಅವರ ಜೊತೆಗಿರುವ ನಾಲ್ಕುಕಾಲಿನ ರಕ್ಷಕರು. ಇವರ ನಿಷ್ಠೆಯೇ ದೇಶದ ಭದ್ರತೆಯ ಅಡಿಪಾಯ. ಇಂತಹ ಯೋಧರಿಗೆ ನಮ್ಮ ಕೃತಜ್ಞತೆ ಶಾಶ್ವತವಾಗಿರಲಿ. ಜೈ ಹಿಂದ್
— ಪಿಎಂ ಇಕ್ಬಾಲ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.