(www.vknews.in) ; ಸರ್ಕಾರಿ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (SDMC) ಸದಸ್ಯರು ಕೆಲವು ಮೂಲಭೂತ ಪ್ರಶ್ನೆಗಳನ್ನು ತಮ್ಮನ್ನು ತಾವು ಕೇಳಿಕೊಳ್ಳುವ ಸಮಯ ಬಂದಿದೆ. ನಿಮ್ಮ ಶಾಲೆಯ ಶಿಕ್ಷಕರು ವಿವಿಧ ಸಂಘ–ಸಂಸ್ಥೆಗಳು, ಎನ್ಜಿಒಗಳು, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳ ಸದಸ್ಯರಾಗಿದ್ದಾರೆಯೇ? ಅವರು ಆ ಸಂಸ್ಥೆಗಳ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ನಡೆಸಲು ಶಾಲಾ ಸಮಯವನ್ನು ಬಳಸುತ್ತಾರೆಯೇ? ದೇಣಿಗೆ ಅಥವಾ ವಸ್ತುಗಳ ಹೆಸರಿನಲ್ಲಿ ಮಕ್ಕಳನ್ನು, ಶಾಲೆಯನ್ನು ಮತ್ತು ಎಸ್ಡಿಎಂಸಿಯನ್ನು ಪ್ರಚಾರದ ಸಾಧನವಾಗಿ ಬಳಸಲಾಗುತ್ತಿದೆಯೇ?
ಹೌದು ಎಂದಾದರೆ, ಇದು ಕೇವಲ ಒಂದು ಸಹಕಾರದ ವಿಷಯವಲ್ಲ. ಇದು ಮಕ್ಕಳ ಶಿಕ್ಷಣದ ಹಕ್ಕು, ಗೌಪ್ಯತೆ ಮತ್ತು ಘನತೆಯ ಹಕ್ಕಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಯಾಗಿದೆ. ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿರುವುದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು. ದಾನ ಸಂಗ್ರಹಿಸಲು, ಸಂಘ–ಸಂಸ್ಥೆಗಳ ಕಾರ್ಯಕ್ರಮಗಳನ್ನು ನಡೆಸಲು ಅಥವಾ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಲ್ಲ. ಶಿಕ್ಷಕರು ಶಾಲಾ ಸಮಯವನ್ನು ಇಂತಹ ಚಟುವಟಿಕೆಗಳಿಗೆ ಬಳಸಿದರೆ, ಅದರ ನಷ್ಟವನ್ನು ಅನುಭವಿಸುವವರು ಮಕ್ಕಳು. ಕಳೆದುಹೋದ ಕಲಿಕಾ ಸಮಯವನ್ನು ಯಾರೂ ಮರಳಿ ನೀಡಲು ಸಾಧ್ಯವಿಲ್ಲ.
ಮಕ್ಕಳ ಶಿಕ್ಷಣಕ್ಕಿಂತ ದೊಡ್ಡ ದೇಣಿಗೆ ಯಾವುದೂ ಇಲ್ಲ. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಬೋಧನೆ ನೀಡುವುದೇ ಶಿಕ್ಷಕರಿಂದ ಸಿಗುವ ಅತ್ಯಂತ ದೊಡ್ಡ ಕೊಡುಗೆ.
ಶಿಕ್ಷಣದ ಹಕ್ಕು ಕಾಯ್ದೆ, 2009 (Right of Children to Free and Compulsory Education Act, 2009): ಸೆಕ್ಷನ್ 24ರ ಪ್ರಕಾರ ಶಿಕ್ಷಕರು ನಿಯಮಿತವಾಗಿ ಶಾಲೆಗೆ ಹಾಜರಾಗುವುದು, ಸಮಯಕ್ಕೆ ಸರಿಯಾಗಿ ಪಠ್ಯಕ್ರಮ ಪೂರ್ಣಗೊಳಿಸುವುದು ಮತ್ತು ಮಕ್ಕಳ ಕಲಿಕೆಗೆ ಆದ್ಯತೆ ನೀಡುವುದು ಕಡ್ಡಾಯ ಕರ್ತವ್ಯವಾಗಿದೆ, ಸೆಕ್ಷನ್ 29ರ ಪ್ರಕಾರ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು, ಸೆಕ್ಷನ್ 21 ಮತ್ತು 22ರ ಪ್ರಕಾರ ಎಸ್ಡಿಎಂಸಿಯ ಪ್ರಮುಖ ಕರ್ತವ್ಯ ಶಾಲೆಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ, ಶಾಲಾ ಅಭಿವೃದ್ಧಿ ಯೋಜನೆ ರೂಪಿಸುವುದು ಹಾಗೂ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಖಚಿತಪಡಿಸುವುದಾಗಿದೆ.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ನಿಯಮಗಳು (ಕರ್ನಾಟಕ): ಎಸ್ಡಿಎಂಸಿಯು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಮಕ್ಕಳ ಕಲಿಕೆಯ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಕಾಯ್ದೆ, 2005ರ ಆಶಯದ ಪ್ರಕಾರ ಮಕ್ಕಳ ಘನತೆ, ಗೌಪ್ಯತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಯನ್ನು ತಪ್ಪಿಸಬೇಕು. ಭಾರತೀಯ ಸಂವಿಧಾನದ ಅನುಚ್ಛೇದ 21A ಪ್ರತಿ ಮಗುವಿಗೂ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಖಾತರಿಪಡಿಸುತ್ತದೆ.
ದಾನದ ಹೆಸರಿನಲ್ಲಿ ಯಾವುದೇ ವ್ಯಕ್ತಿ, ಸಂಘ–ಸಂಸ್ಥೆ ಅಥವಾ ಎನ್ಜಿಒ ಶಾಲೆಗೆ ದೇಣಿಗೆ ನೀಡಿದರೆ ಅದನ್ನು ಸ್ವಾಗತಿಸಬಹುದು. ಆದರೆ, ಮಕ್ಕಳನ್ನು ವೇದಿಕೆಗೆ ಕರೆದು ಪ್ರಚಾರ ಮಾಡುವುದು, ಮಕ್ಕಳ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು, ಶಾಲಾ ಸಮಯದಲ್ಲಿ ದೀರ್ಘ ಕಾರ್ಯಕ್ರಮಗಳನ್ನು ಆಯೋಜಿಸುವುದು, ಮಕ್ಕಳನ್ನು ದಾನ ಪಡೆದ ಫಲಾನುಭವಿಗಳಂತೆ ಪ್ರದರ್ಶಿಸುವುದು, ಇವೆಲ್ಲವೂ ಮಕ್ಕಳ ಘನತೆ ಮತ್ತು ಶಿಕ್ಷಣದ ಹಕ್ಕಿನ ವಿರುದ್ಧದ ನಡೆಗಳಾಗಿವೆ. ದೇಣಿಗೆ ನೀಡುವವರು ಮಕ್ಕಳ ಪ್ರಚಾರಕ್ಕಾಗಿ ಅಲ್ಲ, ಮಕ್ಕಳ ಅಭಿವೃದ್ಧಿಗಾಗಿ ಸಹಕರಿಸಬೇಕು.ಇದರ ಬಗ್ಗೆ ಎಸ್ಡಿಎಂಸಿಯವರು ಶಾಲಾ ಹಂತದಲ್ಲಿ ದಾನಿಗಳೊಂದಿಗೆ, ಹಾಗೂ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಮನವರಿಕೆ ಮಾಡಲೇ ಬೇಕು
ಎಸ್ಡಿಎಂಸಿಯ ಸದಸ್ಯರು ಶಿಕ್ಷಕರನ್ನು “ಮ್ಯಾನೇಜರ್” ಅಥವಾ “ದೇಣಿಗೆ ಸಂಗ್ರಾಹಕ”ರನ್ನಾಗಿ ಮಾಡುವ ಬದಲು, ಅವರು ತರಗತಿಯಲ್ಲಿ ಗುಣಮಟ್ಟದ ಬೋಧನೆ ನಡೆಸುವಂತೆ ನೋಡಿಕೊಳ್ಳಬೇಕು. ಶಾಲೆಗೆ ಬರುವ ಯಾವುದೇ ದೇಣಿಗೆಯನ್ನು ಎಸ್ಡಿಎಂಸಿ ದಾಖಲಾತಿಯಲ್ಲಿ ದಾಖಲಿಸಿ, ಪಾರದರ್ಶಕವಾಗಿ ಸ್ವೀಕರಿಸಿ, ಅಗತ್ಯವಿರುವ ಮಕ್ಕಳಿಗೆ ಯಾವುದೇ ಪ್ರಚಾರವಿಲ್ಲದೆ, ಶಾಲೆಯೊಳಗೇ ಗೌರವಯುತವಾಗಿ ವಿತರಿಸಬೇಕು. ಶಾಲಾ ಸಮಯದಲ್ಲಿ ಸಂಘ–ಸಂಸ್ಥೆಗಳ ಅನಗತ್ಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕು. ಮಕ್ಕಳ ಫೋಟೋಗಳನ್ನು ದಾನದ ಪ್ರಚಾರಕ್ಕೆ ಬಳಸುವುದನ್ನು ನಿಲ್ಲಿಸಬೇಕು. ಶಿಕ್ಷಕರ ಕಲಿಕಾ ಸಮಯವನ್ನು ಶಿಕ್ಷಣಕ್ಕಷ್ಟೇ ಮೀಸಲಿಡಬೇಕು. ಎಸ್ಡಿಎಂಸಿಗಳು ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ ಮತ್ತು ಮಕ್ಕಳ ಹಕ್ಕುಗಳ ಮೇಲ್ವಿಚಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಮಕ್ಕಳ ಶಿಕ್ಷಣವೇ ಮೊದಲ ಆದ್ಯತೆ. ದಾನ, ಪ್ರಚಾರ ಮತ್ತು NGO ಸಂಘ–ಸಂಸ್ಥೆಗಳ ಚಟುವಟಿಕೆಗಳು ಎಂದಿಗೂ ಶಿಕ್ಷಣಕ್ಕಿಂತ ಮೇಲಲ್ಲ.ಖಾಸಗಿ ಶಾಲೆಗಳಲ್ಲಿ ಮಾಡದ ಚಟುವಟಿಕೆಗಳು ಸರಕಾರಿ ಶಾಲೆಗಳ ಮಕ್ಕಳ ಕಲಿಕಾ ಸಮಯವನ್ನು ಬಳಸಿ NGO ಗಳು ಮಾಡುತ್ತಾ ಇರುವುದನ್ನು ಶಿಕ್ಷಣ ಇಲಾಖೆ, ಶಿಕ್ಷಕರು,ಎಸ್ಡಿಎಂಸಿ ಮತ್ತು ಪೋಷಕರು ವಿರೋಧಿಸಲೇ ಬೇಕು. ಅವರೆಂದೂ ಸರಕಾರಿ ಶಾಲೆಗಳಲ್ಲಿರುವ ಒಳ್ಳೆಯ ಕಾರ್ಯಗಳನ್ನು ತಿಳಿಸುವ ಗೋಜಿಗೆ ಹೋಗದೆ,ಅಲ್ಲಿಯ ಮೂಲಭೂತ ಅಗತ್ಯದ ಕೊರತೆಯ ಬಗ್ಗೆ ಸಮಾಜದಲ್ಲಿ ಪ್ರಚಾರ ಮಾಡಿ ಸರಕಾರಿ ಶಾಲೆಗಳ ದಾಖಲಾತಿ ಕೊರತೆಗೆ ಕಾರಣರಾಗಿದ್ದಾರೆ. ಇಂತಹ ವಿಷಯಗಳ ಬಗ್ಗೆ ಎಸ್ಡಿಎಂಸಿ ಮತ್ತು ಪೋಷಕರು ಗಮನ ಹರಿಸಬೇಕಿದೆ
ಮೊಯ್ದಿನ್ ಕುಟ್ಟಿ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ (ರಿ.)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.