ಬೆಂಗಳೂರು (www.vknews.in) : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಬದಲಿಸುವ ಕುರಿತು ಮಾತನಾಡಲಾಗಿದೆ ಎನ್ನಲಾದ ವೈರಲ್ ಆಡಿಯೋ ರಾಜ್ಯ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಧ್ವನಿಯನ್ನು ಹೋಲುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪಕ್ಷದೊಳಗೆ ಕುತೂಹಲ ಮತ್ತು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಆಡಿಯೋದಲ್ಲಿರುವಂತೆ, ವಿಜಯೇಂದ್ರ ಅವರ ಮೂರು ವರ್ಷದ ಅವಧಿ ನವೆಂಬರ್ನಲ್ಲಿ ಪೂರ್ಣಗೊಳ್ಳಲಿದ್ದು, ಅದಕ್ಕೂ ಮೊದಲು ಯಾವುದೇ ಬದಲಾವಣೆ ಮಾಡಿದರೆ ಅನಗತ್ಯ ಗೊಂದಲ ಉಂಟಾಗಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಅವಧಿ ಪೂರ್ಣಗೊಂಡ ಬಳಿಕವೇ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸುವುದು ಸೂಕ್ತ ಎಂದು ಸಂಭಾಷಣೆಯಲ್ಲಿ ಹೇಳಲಾಗಿದೆ ಎನ್ನಲಾಗಿದೆ.
ಸಂಭಾಷಣೆಯಲ್ಲಿ, “ಈಗಲೇ ಬದಲಾವಣೆ ಮಾಡಿದರೆ ಅವರ ಬೆಂಬಲಿಗರು ಎಚ್ಚೆತ್ತುಕೊಳ್ಳುವ ಸಾಧ್ಯತೆ ಇದೆ. ಅವಧಿ ಮುಗಿದ ನಂತರ ಕ್ರಮ ಕೈಗೊಂಡರೆ ಯಾವುದೇ ವಿವಾದ ಉಂಟಾಗುವುದಿಲ್ಲ. ಬಳಿಕ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬಹುದು,” ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ಶೀಘ್ರದಲ್ಲೇ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದು, ಇದೇ ಸಂದರ್ಭದಲ್ಲಿ ಈ ಆಡಿಯೋ ವೈರಲ್ ಆಗಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಸದಾನಂದ ಗೌಡರ ಪ್ರತಿಕ್ರಿಯೆ..
ವೈರಲ್ ಆಡಿಯೋ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಡಿ.ವಿ. ಸದಾನಂದ ಗೌಡ ಅವರು, “ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದು ನನ್ನ ಆಡಿಯೋ ಅಲ್ಲ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಸತ್ಯಾಸತ್ಯತೆಯನ್ನು ನೀವೇ ಪರಿಶೀಲಿಸಿ,” ಎಂದು ಪ್ರತಿಕ್ರಿಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.