ಮುಂಬೈ (www.vknews.in) : ಮೊಹರಂ ಮೆರವಣಿಗೆಯಲ್ಲಿ ವಿಷಕಾರಿ ಕ್ಯಾಪ್ಸುಲ್ಗಳನ್ನು ವಿತರಿಸಿ ಸಾವಿರಾರು ಜನರನ್ನು ಗುರಿಯಾಗಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಫಯಾಜ್ ಪ್ರೇಮ್ಜಿ ಕುರಿತು ತನಿಖೆಯಲ್ಲಿ ಹೊಸ ಮಾಹಿತಿ ಬಹಿರಂಗವಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಫಯಾಜ್ ಹಲವು ವರ್ಷಗಳ ಹಿಂದೆ ಇಸ್ಲಾಂ ಧರ್ಮವನ್ನು ತ್ಯಜಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ‘ಮಾಜಿ ಮುಸ್ಲಿಂ’ ಎಂದು ಗುರುತಿಸಿಕೊಂಡಿದ್ದ. ಆತ ಇಸ್ಲಾಂ ವಿರೋಧಿ ಹಾಗೂ ದ್ವೇಷಪೂರಿತ ವಿಷಯಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.
ಪುಣೆಯ ಖೋಜಾ ಶಿಯಾ ಸಮುದಾಯದ ವ್ಯಾಪಾರ ಕುಟುಂಬಕ್ಕೆ ಸೇರಿದ ಫಯಾಜ್, ಆರಂಭದಲ್ಲಿ ಸಮುದಾಯದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ್ದ. ಆದರೆ ಬಳಿಕ ಕುಟುಂಬ ಹಾಗೂ ಸಮಾಜದಿಂದ ದೂರವಾದ ನಂತರ ತೀವ್ರ ದ್ವೇಷದ ಮನೋಭಾವ ಬೆಳೆಸಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
2019ರಿಂದ ಆತ ವಿವಿಧ ಪಾಡ್ಕಾಸ್ಟ್ಗಳು ಹಾಗೂ ಯೂಟ್ಯೂಬ್ ಚಾನೆಲ್ಗಳಲ್ಲಿ ಇಸ್ಲಾಂ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ದ್ವೇಷದ ಮನೋಭಾವದಿಂದ ಮೊಹರಂ ಮೆರವಣಿಗೆಯನ್ನು ಗುರಿಯಾಗಿಸಿ, ಸತು ಫಾಸ್ಫೈಡ್ (Zinc Phosphide) ವಿಷವನ್ನು ಕ್ಯಾಪ್ಸುಲ್ಗಳಲ್ಲಿ ತುಂಬಿ ವಿತರಿಸುವ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಹೋಟೆಲ್ ಕೊಠಡಿಯಿಂದ ಸುಮಾರು 14,900 ವಿಷಕಾರಿ ಕ್ಯಾಪ್ಸುಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕೃತ್ಯಕ್ಕೆ ಬೇರೆ ಯಾರಾದರೂ ಹಣಕಾಸು ಅಥವಾ ಇತರೆ ರೀತಿಯ ಬೆಂಬಲ ನೀಡಿದ್ದಾರೆಯೇ ಎಂಬ ಬಗ್ಗೆ ಮುಂಬೈ ಪೊಲೀಸ್ ಸೈಬರ್ ಸೆಲ್ ತನಿಖೆ ಮುಂದುವರಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.