ಬೆಂಗಳೂರು (www.vknews.in): ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪರಂಪರಾಗತ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನ ಬೇಡ ಎಂದು ಹೇಳಿದ್ದಾರೆ.
“ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ, ನಂಬಿಕೆ ಹಾಗೂ ಪರಂಪರೆಯ ಪ್ರತೀಕ. ಭೌಗೋಳಿಕವಾಗಿ ಕರಾವಳಿ ಭಾಗಕ್ಕೆ ಮಾತ್ರ ಹೊಂದಿಕೊಳ್ಳುವ ಈ ಆಚರಣೆಯನ್ನು ಮೈಸೂರಿಗೆ ತರುವುದರಿಂದ ಅದರ ಪಾವಿತ್ರ್ಯ ಮತ್ತು ದೈವಿಕ ಹಿನ್ನೆಲೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅದನ್ನು ಒಪ್ಪಲಾಗದು” ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಪ್ರದೇಶದ ಪ್ರಕೃತಿ, ಹಸಿರು ಮತ್ತು ನೀರಿನ ವಾತಾವರಣದಲ್ಲೇ ಕಂಬಳದ ಸೊಬಗು ಅನಾವರಣಗೊಳ್ಳುತ್ತದೆ. ಆದ್ದರಿಂದ ಮೈಸೂರು ಹಾಗೂ ಕರಾವಳಿ ಭಾಗದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಕುರಿತು ಪ್ರಸ್ತಾವನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಮೈಸೂರು ಸಂಸದ ಯದುವೀರ್ ಒಡೆಯರ್ ಸೇರಿದಂತೆ ಹಲವು ಮುಖಂಡರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯದುವೀರ್ ಒಡೆಯರ್ ಕೂಡ ಎಕ್ಸ್ ಪೋಸ್ಟ್ನಲ್ಲಿ, “ನಾನು ಕಂಬಳವನ್ನು ವಿರೋಧಿಸುತ್ತಿಲ್ಲ. ಅದು ನಮ್ಮ ರಾಜ್ಯದ ಹೆಮ್ಮೆ. ಆದರೆ, ಕಂಬಳಕ್ಕೆ ಅದರ ಮೂಲ ನೆಲದಲ್ಲೇ ಹೆಚ್ಚಿನ ಉತ್ತೇಜನ ಮತ್ತು ಗೌರವ ಸಿಗಬೇಕು. ಈಗಾಗಲೇ ಆಡಳಿತಾತ್ಮಕ ಸವಾಲುಗಳನ್ನು ಎದುರಿಸುತ್ತಿರುವ ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸುವುದು ಸೂಕ್ತವಲ್ಲ” ಎಂದು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.