ಟುಟಿಕೋರಿನ್ (www.vknews.in): ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ಪುದುಕೊಟ್ಟೈ ಸಮೀಪದ ಸವೇರಿಯಾರ್ಪುರಂನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪತ್ನಿ ಮತ್ತೊಬ್ಬ ಪುರುಷನೊಂದಿಗೆ ಮನೆ ತೊರೆದಿದ್ದರಿಂದ ಮನನೊಂದಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಮಕ್ಕಳನ್ನು ವಿದ್ಯುತ್ ಸ್ಪರ್ಶಿಸಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು ಟ್ರಕ್ ಚಾಲಕ ಮೇರಿ ಮೈಕೆಲ್ (40), ಪುತ್ರಿ ಮೇರಿ ನಿರೋಷಾ (14) ಹಾಗೂ ಪುತ್ರ ಮೇರಿ ಕೆನಿಸ್ಟನ್ (12) ಎಂದು ಗುರುತಿಸಲಾಗಿದೆ. ಇಬ್ಬರೂ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಮೈಕೆಲ್ ಅವರ ಪತ್ನಿ ಮತ್ತೊಬ್ಬ ಪುರುಷನೊಂದಿಗೆ ತೆರಳಿದ್ದು, ಈ ಘಟನೆಯ ಬಳಿಕ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಟ್ರಕ್ ಚಾಲಕನಾಗಿದ್ದ ಅವರು ಕೆಲಸವನ್ನೂ ಬಿಟ್ಟು, ಸಾಂದರ್ಭಿಕವಾಗಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಕ್ಕಳಿಗೆ ಊಟ ನೀಡಿ ಮಲಗಲು ಹೇಳಿದ ಬಳಿಕ, ಅವರಿಗೆ ವಿದ್ಯುತ್ ತಂತಿ ಕಟ್ಟಿ ವಿದ್ಯುತ್ ಸಂಪರ್ಕ ನೀಡಿ ಹತ್ಯೆ ಮಾಡಿದ್ದಾನೆ. ಬಳಿಕ ಅದೇ ತಂತಿಯ ಮೂಲಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಕೆಲ್ ಅವರ 75 ವರ್ಷದ ತಂದೆ ಆಂಥೋನಿ ಮುತ್ತು ಮನೆಯ ಹೊರಭಾಗದಲ್ಲಿ ಮಲಗಿದ್ದರು. ಶನಿವಾರ ಮಧ್ಯಾಹ್ನದವರೆಗೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅವರು ನೆರೆಹೊರೆಯವರ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಮೂವರೂ ಹಾಸಿಗೆಯ ಮೇಲೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಟುಟಿಕೋರಿನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಪುದುಕೊಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.