ಬೆಂಗಳೂರು (www.vknews.in): ಬಿಎಂಟಿಸಿ ಬಸ್ಗಳಲ್ಲಿನ ಸೇವಾ ಗುಣಮಟ್ಟ ಮತ್ತು ಪ್ರಯಾಣಿಕರ ಸಮಸ್ಯೆಗಳನ್ನು ಖುದ್ದಾಗಿ ತಿಳಿದುಕೊಳ್ಳಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಅಧಿಕಾರಿಗಳಿಗೆ ಮಾಹಿತಿ ನೀಡದೆ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕರಂತೆ ಬಸ್ನಲ್ಲಿ ಪ್ರಯಾಣಿಸಿದ ವೇಳೆ ಹಲವು ಲೋಪಗಳು ಬೆಳಕಿಗೆ ಬಂದಿವೆ.
ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 9.10ರವರೆಗೆ ಜಯಮಹಲ್ ಹಾಗೂ ಹೆಣ್ಣೂರು ಡಿಪೋ ವ್ಯಾಪ್ತಿಯ ಹಲವು ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಿದ ಸಚಿವರು, ಜನಸಂದಣಿಯಲ್ಲೇ ನಿಂತುಕೊಂಡು ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿದರು.
ಭೂಪಸಂದ್ರದಿಂದ ಹೆಬ್ಬಾಳಕ್ಕೆ ತೆರಳುವ ವೇಳೆ ಸಚಿವರು ಎರಡು ಟಿಕೆಟ್ಗಾಗಿ ₹100 ನೀಡಿದ್ದು, ನಿರ್ವಾಹಕರು ₹12 ಚಿಲ್ಲರೆ ಕೇಳಿದ್ದಾರೆ. ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಸಚಿವರು ತಿಳಿಸಿದಾಗ, ಅವರ ಗುರುತು ಗೊತ್ತಾಗದ ನಿರ್ವಾಹಕರು “ಹಾಗಿದ್ದರೆ ಬಸ್ನಿಂದ ಕೆಳಗಿಳಿಯಿರಿ” ಎಂದು ಹೇಳಿದ್ದು, ಸಚಿವರು ಬಸ್ನಿಂದ ಇಳಿದಿದ್ದಾರೆ.
ಈ ಘಟನೆಯಿಂದ ಸಾಮಾನ್ಯ ಪ್ರಯಾಣಿಕರಿಗೂ ಇದೇ ರೀತಿಯ ತೊಂದರೆ ಆಗುತ್ತಿರುವುದು ಸಚಿವರ ಗಮನಕ್ಕೆ ಬಂದಿದೆ. ಬಳಿಕ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ನಿಗದಿತ ಬಸ್ ನಿಲ್ದಾಣಗಳ ಬದಲು ಬೇರೆಡೆ ಬಸ್ ನಿಲ್ಲಿಸುವುದು, ಅತಿವೇಗದ ಚಾಲನೆ, ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದ ವರ್ತನೆ, ಚಿಲ್ಲರೆ ಹಣ ನೀಡದಿರುವುದು ಸೇರಿದಂತೆ ಹಲವು ಲೋಪಗಳನ್ನು ಸಚಿವರು ಖುದ್ದಾಗಿ ಪರಿಶೀಲಿಸಿ, ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.