ವಾಷಿಂಗ್ಟನ್ (www.vknews.in): ಇರಾನ್ನಲ್ಲಿ ಅಮೆರಿಕ ಭಾರೀ ವೈಮಾನಿಕ ದಾಳಿ ನಡೆಸಿದ್ದು, ದೇಶದ ವಿವಿಧ ಭಾಗಗಳಲ್ಲಿನ ಸುಮಾರು 140ಕ್ಕೂ ಹೆಚ್ಚು ಗುರಿಗಳನ್ನು ಕ್ಷಿಪಣಿಗಳ ಮೂಲಕ ಹೊಡೆದಿರುವುದಾಗಿ ವರದಿಯಾಗಿದೆ. ಬಂದರ್ ಅಬ್ಬಾಸ್, ಖಾಶಮ್ ಹಾಗೂ ಹಾಜಿಯಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿವೆ.
ಇರಾನ್ನ ಹಾರ್ಮೊಜ್ಗಾನ್ ಪ್ರಾಂತ್ಯದಲ್ಲಿ ಟೆಲಿಕಾಂ ಇಲಾಖೆಯ ಉದ್ಯೋಗಿಯೊಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿನ ಕ್ಷಿಪಣಿ ವ್ಯವಸ್ಥೆಗಳು, ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ವೇಗದ ದೋಣಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಹಾರ್ಮುಜ್ ಜಲಸಂಧಿ ಅಂತರರಾಷ್ಟ್ರೀಯ ಜಲಮಾರ್ಗವಾಗಿದ್ದು, ಅದನ್ನು ಮುಚ್ಚುವ ಯಾವುದೇ ಪ್ರಯತ್ನವನ್ನು ಒಪ್ಪಲಾಗುವುದಿಲ್ಲ ಎಂದು CENTCOM ಸ್ಪಷ್ಟಪಡಿಸಿದೆ.
ಇದೇ ವೇಳೆ, ಕುವೈತ್ನಲ್ಲಿ ನಡೆದ ದಾಳಿಯಲ್ಲಿ ಮೂವರು ಅಮೆರಿಕ ಸೈನಿಕರು ಮೃತಪಟ್ಟಿದ್ದಾರೆ ಎಂಬ ವರದಿಯನ್ನು CENTCOM ತಳ್ಳಿಹಾಕಿದ್ದು, ಯಾವುದೇ ಅಮೆರಿಕ ಸೈನಿಕರ ಸಾವಿನ ಮಾಹಿತಿ ಇಲ್ಲ ಎಂದು ತಿಳಿಸಿದೆ. ಇತ್ತ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಘೋಷಿಸಿದ್ದು, ಇರಾನ್ ಅನುಮತಿ ಇಲ್ಲದೆ ಯಾವುದೇ ಹಡಗು ಸಂಚರಿಸದಂತೆ ಎಚ್ಚರಿಕೆ ನೀಡಿದೆ.
ಅದೇ ವೇಳೆ, ಇರಾನ್ನ ಹೊಸ ಸರ್ವೋಚ್ಚ ನಾಯಕ ಮುಜ್ತಬಾ ಖಮೇನಿ, ಹತ್ಯೆಗೀಡಾದ ಇರಾನ್ ನಾಯಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದು, ಜಾಗತಿಕ ಮಟ್ಟದಲ್ಲಿ ಇರಾನ್ ಬೆಂಬಲಿತ ಸಂಘಟನೆಗಳು ಪ್ರತೀಕಾರದ ಕಾರ್ಯಾಚರಣೆ ನಡೆಸಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.