ನವದೆಹಲಿ (www.vknews.in): ಒಡಿಶಾದ ವೈದ್ಯಕೀಯ ಸ್ನಾತಕೋತ್ತರ (ಪಿಜಿ) ಪರೀಕ್ಷೆಯ ಪ್ರಶ್ನೆಪತ್ರಿಕೆ ಪರೀಕ್ಷೆ ನಡೆಯುತ್ತಿದ್ದ ವೇಳೆ ವಾಟ್ಸಾಪ್ನಲ್ಲಿ ಹರಿದಾಡಿದ ಆರೋಪದ ಬೆನ್ನಲ್ಲೇ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿ ನರೇಂದ್ರ ಮೋದಿ ರೀಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತವರು ರಾಜ್ಯ ಒಡಿಶಾದಲ್ಲಿ ಮತ್ತೊಂದು ಪ್ರಶ್ನೆಪತ್ರಿಕೆ ವಿವಾದ ಬೆಳಕಿಗೆ ಬಂದಿದೆ” ಎಂದು ಎಕ್ಸ್ನಲ್ಲಿ ಟೀಕಿಸಿದ್ದಾರೆ.
ಕೇವಲ ಕಠಿಣ ಶಿಕ್ಷೆ ಅಥವಾ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿನ ವಾಣಿಜ್ಯೀಕರಣ ಮತ್ತು ಭ್ರಷ್ಟಾಚಾರದ ಕುರಿತು ಪ್ರಾಮಾಣಿಕ ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಜುಲೈ 27ರಂದು ನಡೆದ ಒಡಿಶಾ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (OUHS) ಪಿಜಿ ವೈದ್ಯಕೀಯ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆಯ ಫೋಟೊಗಳು ವಾಟ್ಸಾಪ್ನಲ್ಲಿ ಹರಿದಾಡಿದ್ದವು. ಭುವನೇಶ್ವರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬರ ಬಳಿ ಈ ಫೋಟೊಗಳು ಪತ್ತೆಯಾಗಿದ್ದು, ಮತ್ತೊಬ್ಬ ವಿದ್ಯಾರ್ಥಿ ರಚಿಸಿದ್ದ ವಾಟ್ಸಾಪ್ ಗುಂಪಿನ ಮೂಲಕ ಅವು ಬಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆ ಬೆಳಕಿಗೆ ಬಂದ ಬಳಿಕ OUHS ಕುಲಪತಿ ಮಾನಸ್ ರಂಜನ್ ಸಾಹು ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ತುರ್ತು ಸಭೆ ನಡೆಸಿ, ಮುಂದಿನ ಪರೀಕ್ಷೆಗಳಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸುವಂತೆ ಸೂಚಿಸಿದ್ದಾರೆ.
ಇದೊಂದು ಪೂರ್ವಭಾವಿ ಪ್ರಶ್ನೆಪತ್ರಿಕೆ ಸೋರಿಕೆ ಅಲ್ಲ. ಪರೀಕ್ಷೆ ನಡೆಯುವ ವೇಳೆ ಪ್ರಶ್ನೆಪತ್ರಿಕೆ ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಿರುವ ಪ್ರಕರಣವಾಗಿದ್ದು, ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಸಾಧನ ಬಳಸಿರುವ ಸಾಧ್ಯತೆ ಕುರಿತು ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.