ನವದೆಹಲಿ (www.vknews.in): ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಂದ ಸುಪ್ರೀಂ ಕೋರ್ಟ್ ಶುಕ್ರವಾರ ವಿಚ್ಛೇದನ ಮಂಜೂರು ಮಾಡಿದೆ. ಪರಸ್ಪರ ಒಪ್ಪಿಗೆಯೊಂದಿಗೆ ವಿವಾಹವನ್ನು ವಿಸರ್ಜಿಸಲು ಇಬ್ಬರೂ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ, ಸಂವಿಧಾನದ 142ನೇ ವಿಧಿಯಡಿ ನ್ಯಾಯಾಲಯ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠದ ಮುಂದೆ ಹಿರಿಯ ವಕೀಲ ಕಪಿಲ್ ಸಿಬಲ್, “ಇಬ್ಬರೂ ಪರಸ್ಪರ ಸಮ್ಮತಿಯಿಂದ ಬೇರ್ಪಡಲು ನಿರ್ಧರಿಸಿದ್ದು, ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಿದ್ದಾರೆ” ಎಂದು ತಿಳಿಸಿದರು.
ಜುಲೈ 22ರಂದು ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಅಂತಿಮ ಆದೇಶ ನೀಡಿದೆ. ಒಮರ್ ಅಬ್ದುಲ್ಲಾ ಮತ್ತು ಪಾಯಲ್ ಅಬ್ದುಲ್ಲಾ ಕಳೆದ 15 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2016ರಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಲು ನಿರಾಕರಿಸಿತ್ತು. ಬಳಿಕ ದೆಹಲಿ ಹೈಕೋರ್ಟ್ ಕೂಡ 2023ರಲ್ಲಿ ಅವರ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ಇದರ ವಿರುದ್ಧ ಒಮರ್ ಅಬ್ದುಲ್ಲಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಸಮ್ಮತಿಸಿದ ಹಿನ್ನೆಲೆಯಲ್ಲಿ, ನ್ಯಾಯಾಲಯ ಅಂತಿಮವಾಗಿ ಅವರ ವಿವಾಹವನ್ನು ವಿಸರ್ಜಿಸಿ ಆದೇಶ ಹೊರಡಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.