ದುಬೈ (www.vknews.in): 29ನೇ ದುಬೈ ಅಂತರರಾಷ್ಟ್ರೀಯ ಪವಿತ್ರ ಕುರಾನ್ ಪ್ರಶಸ್ತಿ (1448 ಎಎಚ್–2027)ಗೆ ವಿಶ್ವದಾದ್ಯಂತದಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ನೋಂದಣಿ ಪ್ರಾರಂಭವಾದ ಕೇವಲ ಎರಡು ವಾರಗಳಲ್ಲೇ 120 ದೇಶಗಳಿಂದ 12,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಕಳೆದ ವರ್ಷದ ದಾಖಲೆಯನ್ನು ಮೀರಿಸಿದೆ.
ಕಳೆದ 28ನೇ ಆವೃತ್ತಿಯಲ್ಲಿ 105 ದೇಶಗಳಿಂದ 5,618 ಅರ್ಜಿಗಳು ಬಂದಿದ್ದರೆ, ಈ ಬಾರಿ ಅದರ ಎರಡು ಪಟ್ಟು ಹೆಚ್ಚು ಅರ್ಜಿಗಳು ಬಂದಿರುವುದು ವಿಶೇಷ. ಯುಎಇ ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಘೋಷಿಸಿರುವ “ವಿಶ್ವದ ಅತ್ಯಂತ ಸುಂದರ ಕುರಾನ್ ಪಠಣದ ಅನ್ವೇಷಣೆ” ಎಂಬ ಹೊಸ ಪರಿಕಲ್ಪನೆಗೆ ವಿಶ್ವಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ.
ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಚಟುವಟಿಕೆಗಳ ಇಲಾಖೆಯ ಮಹಾನಿರ್ದೇಶಕ ಹಾಗೂ ಪ್ರಶಸ್ತಿಯ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಅಹ್ಮದ್ ದರ್ವಿಶ್ ಅಲ್ ಮುಹೈರಿ ಮಾತನಾಡಿ, ಪರಿಷ್ಕೃತ ಸ್ಪರ್ಧಾ ವಿಭಾಗಗಳು, ಬಹುಮಾನದ ಮೊತ್ತ ಹಾಗೂ ಸರಳೀಕೃತ ನಾಮನಿರ್ದೇಶನ ವಿಧಾನದಿಂದಾಗಿ ಜನರ ವಿಶ್ವಾಸ ಹೆಚ್ಚಿದ್ದು, ಅರಬ್ ರಾಷ್ಟ್ರಗಳು, ಮಧ್ಯಪ್ರಾಚ್ಯ, ಆಫ್ರಿಕಾ, ಏಷ್ಯಾ, ಯುರೋಪ್ ಹಾಗೂ ಅಮೆರಿಕ ಖಂಡಗಳಿಂದ ಭಾರಿ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ ಎಂದು ತಿಳಿಸಿದ್ದಾರೆ.
ಈ ವರ್ಷದ ಸ್ಪರ್ಧೆಯ ಒಟ್ಟು ಬಹುಮಾನದ ಮೊತ್ತ 12 ಮಿಲಿಯನ್ ದಿರ್ಹಮ್ಗಿಂತ ಅಧಿಕವಾಗಿದೆ. 16 ವರ್ಷ ಮೇಲ್ಪಟ್ಟ ಪುರುಷರ ವಿಭಾಗ ಹಾಗೂ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಥಮ ಸ್ಥಾನ ವಿಜೇತರಿಗೆ ತಲಾ 10 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ನೀಡಲಾಗುತ್ತದೆ.
ಪ್ರತಿ ವಿಭಾಗದಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 1,00,000 ಡಾಲರ್ ಮತ್ತು 50,000 ಡಾಲರ್ ಬಹುಮಾನ ನೀಡಲಾಗುತ್ತದೆ. ಜೊತೆಗೆ, ‘ಗ್ಲೋಬಲ್ ಕುರಾನಿಕ್ ಪರ್ಸನಾಲಿಟಿ ಆಫ್ ದಿ ಇಯರ್’ ಪ್ರಶಸ್ತಿ ವಿಜೇತರಿಗೆ 1 ಮಿಲಿಯನ್ ಅಮೆರಿಕನ್ ಡಾಲರ್ ನಗದು ಬಹುಮಾನ ಘೋಷಿಸಲಾಗಿದೆ.
ಈ ಬಾರಿ ಮೊದಲ ಬಾರಿಗೆ, ಮಾನ್ಯತೆ ಪಡೆದ ಇಸ್ಲಾಮಿಕ್ ಕೇಂದ್ರಗಳು ಅಥವಾ ತಮ್ಮ ದೇಶಗಳ ಅಧಿಕೃತ ನಾಮನಿರ್ದೇಶನದ ಜೊತೆಗೆ, ವ್ಯಕ್ತಿಗಳು ಸ್ವತಃ ನೇರವಾಗಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಿಗಳು ತಮ್ಮ ಕುರಾನ್ ಪಠಣದ ವಿಡಿಯೊವನ್ನು ನೇರವಾಗಿ ಅಪ್ಲೋಡ್ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಫೈನಲ್ಗೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ರಂಜಾನ್ ತಿಂಗಳಲ್ಲಿ ದುಬೈನ ಪ್ರಮುಖ ಮಸೀದಿಗಳಲ್ಲಿ ತರಾವೀಹ್ ನಮಾಜ್ ನಡೆಸುವ ಅವಕಾಶ ದೊರೆಯಲಿದೆ. ಅಂತಿಮವಾಗಿ ವಿಶ್ವದ ಅತ್ಯಂತ ಸುಂದರ ಕುರಾನ್ ಪಠಣವನ್ನು ಸಾರ್ವಜನಿಕರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಗೆ 2026ರ ಆಗಸ್ಟ್ 15ರವರೆಗೆ ಅಧಿಕೃತ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕಳೆದ 28 ಆವೃತ್ತಿಗಳಲ್ಲಿ 123 ದೇಶಗಳ 7,826 ಸ್ಪರ್ಧಿಗಳು ಭಾಗವಹಿಸಿದ್ದು, ಈವರೆಗೆ 67 ಮಿಲಿಯನ್ ದಿರ್ಹಮ್ಗಿಂತ ಹೆಚ್ಚು ಬಹುಮಾನ ವಿತರಿಸಲಾಗಿದೆ. ಅಲ್ಲದೆ, 24 ವ್ಯಕ್ತಿಗಳು ಹಾಗೂ ಮೂರು ಸಂಸ್ಥೆಗಳಿಗೆ ‘ಗ್ಲೋಬಲ್ ಕುರಾನಿಕ್ ಪರ್ಸನಾಲಿಟಿ ಆಫ್ ದಿ ಇಯರ್’ ಗೌರವ ಪ್ರಶಸ್ತಿ ನೀಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.