ಬೆಂಗಳೂರು (www.vknews.in): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎನ್ನಲಾಗಿದೆ. ಸುಮಾರು 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಚಿವ ಸ್ಥಾನಕ್ಕೆ ಆಯ್ಕೆಯಾದ 20 ಶಾಸಕರ ಅಂತಿಮ ಪಟ್ಟಿಯೊಂದಿಗೆ ಇಂದು ಸಂಜೆ ಕೇರಳದಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಒಪ್ಪಿಗೆ ನೀಡುವ ನಿರೀಕ್ಷೆಯಿದೆ.
ಲೋಕಭವನದಲ್ಲಿ ಸೋಮವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಅಧಿಕೃತ ಪ್ರಕಟಣೆಗೆ ರಾಜಕೀಯ ವಲಯ ಕಾತರದಿಂದ ಕಾಯುತ್ತಿದೆ.
ಇದರ ನಡುವೆ ಸಚಿವ ಸ್ಥಾನಾಕಾಂಕ್ಷಿಗಳು ತಮ್ಮ ಕೊನೆಯ ಹಂತದ ಲಾಬಿಯನ್ನು ತೀವ್ರಗೊಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಹಲವು ಶಾಸಕರು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ನಾಡಗೌಡ, ರಿಜ್ವಾನ್ ಅರ್ಷದ್, ವಿಜಯಾನಂದ ಕಾಶಪ್ಪನವರ್, ಎ.ಎಸ್. ಪೊನ್ನಣ್ಣ, ಯಾಸಿರ್ ಅಹ್ಮದ್ ಖಾನ್ ಪಠಾಣ್, ಅಶೋಕ್ ಎಸ್. ಪಟ್ಟಣ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಾರಿಗೆ ಸಚಿವ ಬೈರತಿ ಸುರೇಶ್ ಕೂಡ ಭೇಟಿ ನೀಡಿದ್ದಾರೆ.
ಇದರ ಜೊತೆಗೆ ಪಿ.ಎಂ. ನರೇಂದ್ರಸ್ವಾಮಿ, ಬಸವಂತಪ್ಪ, ಶರತ್ ಬಚ್ಚೇಗೌಡ, ಕನೀಜ್ ಫಾತಿಮಾ ಹಾಗೂ ತನ್ವೀರ್ ಸೇಠ್ ಅವರ ಹೆಸರೂ ಸಚಿವ ಸ್ಥಾನಕ್ಕೆ ಕೇಳಿಬರುತ್ತಿದೆ. ಆದರೆ, ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಬೇಕಿದ್ದು, ಅಲ್ಲಿಯವರೆಗೆ ಈ ಎಲ್ಲ ಹೆಸರುಗಳು ಊಹಾಪೋಹಗಳ ಪಟ್ಟಿಯಲ್ಲೇ ಉಳಿದಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.