ಮೈಸೂರು (www.vknews.in): ಕುರ್ಕುರೆ ಪ್ಯಾಕೆಟ್ನಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ನ್ನು ನುಂಗಿದ ಪರಿಣಾಮ ಐದು ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಂತೋಷ್ ಹಾಗೂ ಐಶ್ವರ್ಯ ದಂಪತಿಯ ಪುತ್ರ ಮುಕುಂದ ಮಯೂರ್ (5) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮಗು ಕುರ್ಕುರೆ ಸೇವಿಸಿದ ಬಳಿಕ ಅದರ ಪ್ಯಾಕೆಟ್ನೊಳಗಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ನ್ನು ಆಟವಾಡುತ್ತಾ ಬಾಯಿಗೆ ಹಾಕಿಕೊಂಡಿದ್ದು, ಅದು ಆಕಸ್ಮಿಕವಾಗಿ ಗಂಟಲಿನಲ್ಲಿ ಸಿಲುಕಿದೆ. ಇದರಿಂದ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಮೂಡಿಸಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮಕ್ಕಳಿಗೆ ಆಟಿಕೆ ಅಥವಾ ಸಣ್ಣ ವಸ್ತುಗಳಿರುವ ಆಹಾರ ಪ್ಯಾಕೆಟ್ಗಳನ್ನು ನೀಡುವಾಗ ಪೋಷಕರು ವಿಶೇಷ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಣ್ಣ ವಸ್ತುಗಳನ್ನು ಬಾಯಿಗೆ ಹಾಕುವ ಸಾಧ್ಯತೆ ಹೆಚ್ಚಿರುವುದರಿಂದ, ಇಂತಹ ವಸ್ತುಗಳನ್ನು ಅವರ ಕೈಗೆ ಸಿಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.