ಬೆಂಗಳೂರು (www.vknews.in): ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರು ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆಯಂತಹ ತೀರ್ಮಾನ ಕೈಗೊಳ್ಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮನವಿ ಮಾಡಿದ್ದಾರೆ.
ಸಚಿವ ಸ್ಥಾನ ಸಿಗದಿದ್ದರಿಂದ ಕೆಲ ಶಾಸಕರು ನೋವು ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬರ ಸೇವೆ, ಅನುಭವ ಮತ್ತು ಕೊಡುಗೆಯನ್ನು ಕಾಂಗ್ರೆಸ್ ಗೌರವದಿಂದ ಪರಿಗಣಿಸುತ್ತದೆ. ಸಚಿವ ಸ್ಥಾನ ಸಿಗದಿರುವುದು ಅವರ ಸಾಮರ್ಥ್ಯ ಅಥವಾ ರಾಜಕೀಯ ಸೇವೆಯನ್ನು ನಿರಾಕರಿಸಿದಂತಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಚಿವ ಸ್ಥಾನಗಳು ಸೀಮಿತವಾಗಿರುವುದರಿಂದ ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ವಿವಿಧ ಸಮುದಾಯಗಳ ಪ್ರಾತಿನಿಧ್ಯ, ಅನುಭವ, ಹೊಸ ನಾಯಕತ್ವ ಹಾಗೂ ಆಡಳಿತದ ಅಗತ್ಯಗಳನ್ನು ಪರಿಗಣಿಸಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕತ್ವ ಒಟ್ಟಾಗಿ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಅಸಮಾಧಾನಗೊಂಡಿರುವ ಶಾಸಕರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿ ಅವರ ಅಭಿಪ್ರಾಯಗಳನ್ನು ಹೈಕಮಾಂಡ್ಗೆ ತಲುಪಿಸಲಾಗುವುದು. ಮಾತುಕತೆ ಮತ್ತು ಪರಸ್ಪರ ವಿಶ್ವಾಸದ ಮೂಲಕ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಇದೇ ವೇಳೆ, ಸಚಿವರಾಗಿ ಆಯ್ಕೆಯಾದವರು ಸಮರ್ಥರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಅವರ ಆಯ್ಕೆಯನ್ನು ಗೌರವಿಸಿ ಎಲ್ಲರೂ ಸಹಕಾರ ನೀಡಬೇಕು. ವೈಯಕ್ತಿಕ ಆಕಾಂಕ್ಷೆಗಳಿಗಿಂತ ಪಕ್ಷದ ಹಿತ, ಸರ್ಕಾರದ ಸ್ಥಿರತೆ ಮತ್ತು ರಾಜ್ಯದ ಜನರ ಹಿತಾಸಕ್ತಿಗೆ ಆದ್ಯತೆ ನೀಡುವಂತೆ ಅವರು ಎಲ್ಲ ಶಾಸಕರಿಗೆ ಮನವಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.