ಮಂಗಳೂರು (www.vknews.in): ಚಲಿಸಲು ಆರಂಭಿಸಿದ್ದ ರೈಲನ್ನು ಓಡಿಬಂದು ಹತ್ತಲು ಯತ್ನಿಸಿದ ವೇಳೆ ಕಾಲು ಜಾರಿ ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಳ್ಳುವ ಹಂತದಲ್ಲಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಪಾಯಿಂಟ್ಸ್ಮ್ಯಾನ್ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಮಡ್ಗಾಂವ್–ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಎಕ್ಸ್ಪ್ರೆಸ್ ರೈಲು ಸಂಖ್ಯೆ 10107 ಸುರತ್ಕಲ್ ನಿಲ್ದಾಣದಿಂದ ಹೊರಡಲು ಸಿದ್ಧವಾಗಿತ್ತು. ಹಸಿರು ನಿಶಾನೆ ದೊರೆತ ಬಳಿಕ ರೈಲು ನಿಧಾನವಾಗಿ ಚಲಿಸಲು ಆರಂಭಿಸಿತ್ತು. ಈ ವೇಳೆ ರೈಲು ಹತ್ತಲು ಆತುರದಿಂದ ಓಡಿಬಂದ ಪ್ರಯಾಣಿಕನೊಬ್ಬ ಆಯತಪ್ಪಿ ಪ್ಲಾಟ್ಫಾರ್ಮ್ ಮತ್ತು ರೈಲಿನ ಬೋಗಿಯ ನಡುವಿನ ಕಿರಿದಾದ ಜಾಗಕ್ಕೆ ಬೀಳುವ ಹಂತಕ್ಕೆ ತಲುಪಿದ್ದಾನೆ.
ಪ್ರಯಾಣಿಕ ರೈಲಿನಡಿ ಸಿಲುಕುವ ಅಪಾಯವನ್ನು ಗಮನಿಸಿದ ಕರ್ತವ್ಯನಿರತ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್ ಅವರು ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ರೈಲಿನ ವೇಗ ಮತ್ತಷ್ಟು ಹೆಚ್ಚುವ ಮುನ್ನವೇ ಪ್ರಯಾಣಿಕನನ್ನು ಬಲವಾಗಿ ಹಿಂದಕ್ಕೆ ಎಳೆದು ಪ್ಲಾಟ್ಫಾರ್ಮ್ ಮೇಲೆ ಸುರಕ್ಷಿತವಾಗಿ ಬೀಳಿಸುವ ಮೂಲಕ ಆತನ ಪ್ರಾಣ ಉಳಿಸಿದ್ದಾರೆ. ಸಂದೀಪ್ ನಾಯಕ್ ಅವರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಘಟನೆಯ ಬಳಿಕ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಂತರ ರೈಲನ್ನು ಸುರಕ್ಷಿತವಾಗಿ ಮುಂದಿನ ನಿಲ್ದಾಣದತ್ತ ಕಳುಹಿಸಲಾಯಿತು.
ಪ್ರಯಾಣಿಕನ ಜೀವ ಉಳಿಸಿದ ಸಂದೀಪ್ ನಾಯಕ್ ಅವರ ಸಾಹಸ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಹಾಗೂ ರೈಲ್ವೆ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಂದೀಪ್ ನಾಯಕ್ ಅವರ ಧೈರ್ಯಶಾಲಿ ಕಾರ್ಯವನ್ನು ಮೆಚ್ಚಿದ ಕೊಂಕಣ ರೈಲ್ವೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು ₹10,000 ನಗದು ಬಹುಮಾನ ಘೋಷಿಸಿದ್ದಾರೆ. ರೈಲ್ವೆ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆ ಮತ್ತೊಂದು ದೊಡ್ಡ ದುರಂತವನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.