ವಿಜಯಪುರ (www.vknews.in): ಅಣ್ಣ ಶಾಲಾ ಬಸ್ನಿಂದ ಇಳಿಯುವುದನ್ನು ಕಂಡು ಆತನ ಬಳಿಗೆ ಓಡಿ ಬಂದ ಮೂರು ವರ್ಷದ ಬಾಲಕಿಯೊಬ್ಬಳು ಅದೇ ಶಾಲಾ ಬಸ್ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಮೃತ ಬಾಲಕಿಯನ್ನು ಶಿಫಾ ಸುಹಾಸ ವಾಡಿ (3) ಎಂದು ಗುರುತಿಸಲಾಗಿದೆ.
ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿಯ ಅಣ್ಣ ಸಂಜೆ ಶಾಲಾ ಬಸ್ನಲ್ಲಿ ಮನೆಗೆ ಬಂದಿದ್ದ. ಬಸ್ನಿಂದ ಅಣ್ಣ ಇಳಿಯುವುದನ್ನು ಕಂಡ ಶಿಫಾ, ಆತನನ್ನು ನೋಡಲು ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಬಾಲಕಿ ಬಸ್ನ ಮುಂಭಾಗದಿಂದ ಅಣ್ಣನ ಬಳಿಗೆ ತೆರಳುತ್ತಿದ್ದ ವೇಳೆ, ಆಕೆಯಿರುವುದನ್ನು ಗಮನಿಸದ ಚಾಲಕ ಬಸ್ನ್ನು ಮುಂದಕ್ಕೆ ಚಲಾಯಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಬಸ್ನ ಮುಂಭಾಗದ ಚಕ್ರ ಬಾಲಕಿಯ ಮೇಲೆ ಹರಿದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಿಫಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುದ್ದು ಬಾಲಕಿಯ ದಾರುಣ ಸಾವು ಕುಟುಂಬಸ್ಥರಲ್ಲಿ ತೀವ್ರ ಆಘಾತ ಹಾಗೂ ದುಃಖಕ್ಕೆ ಕಾರಣವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.