ಬೆಂಗಳೂರು (www.vknews.in) : RSS ನೋಂದಣಿ ಮಾಡಿಲ್ಲ, ಮುಂದೆಯೂ ನೋಂದಣಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ. 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬೆಂಗಳೂರಿನ ಬನ್ನಪ್ಪ ಪಾರ್ಕ್ನಲ್ಲಿ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ RSS ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಎತ್ತಿದ್ದ ಪ್ರಶ್ನೆಗಳಿಗೆ ಸಂತೋಷ್ ತಿರುಗೇಟು ನೀಡಿದರು.
ತಿರಂಗ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಸಂತೋಷ್, ದೇಶದ ಇತಿಹಾಸದಲ್ಲಿ RSS ನೀಡಿರುವ ಕೊಡುಗೆಗಳೇನು ಎಂಬುದು ದೇಶಾಭಿಮಾನಿಗಳಿಗೆ ತಿಳಿದಿದೆ ಎಂದು ಹೇಳಿದರು. “RSS ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ. ರಿಜಿಸ್ಟ್ರೇಷನ್ ಮಾಡಿಸಿಕೊಂಡ ಸಂಘಟನೆಗಳು ಏನು ಮಾಡುತ್ತಿವೆ ಎಂಬುದು ನಮಗೆ ಗೊತ್ತಿದೆ. ಸಂಘದ ನೋಂದಣಿ ಮಾನದಂಡವಲ್ಲ. ಪ್ರಿಯಾಂಕ್ ಖರ್ಗೆ ಅವರೇ ಎಲ್ಲದಕ್ಕೂ ಮಾನದಂಡ ಅಲ್ಲ” ಎಂದು ಅವರು ಹೇಳಿದರು.
ತಾವು ಬಿಜೆಪಿ ಕಾರ್ಯಕರ್ತರಾಗಿದ್ದರೂ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಲು ಬಂದಿಲ್ಲ ಎಂದು ಹೇಳಿದ ಸಂತೋಷ್, ಬೆಂಗಳೂರಿನ ಶಿವಾಜಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಹಿಂದೂ ಪ್ರತಿನಿಧಿಯನ್ನು ಶಾಸಕರನ್ನಾಗಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು. “ಈ ಎರಡು ಕ್ಷೇತ್ರಗಳಲ್ಲಿ ಹಿಂದೂ ನಾಯಕನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ನೋಡೋಣ” ಎಂದು ಸವಾಲು ಹಾಕಿದರು.
ತಮ್ಮ ಭಾಷಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ಇತಿಹಾಸವನ್ನು ಪ್ರಸ್ತಾಪಿಸಿದ ಬಿ.ಎಲ್. ಸಂತೋಷ್, ರಜಾಕರ ದಾಳಿಯ ಸಂದರ್ಭದಲ್ಲಿ RSS ಕಾರ್ಯಕರ್ತರು ಜನರ ರಕ್ಷಣೆಗೆ ನಿಂತಿದ್ದರು ಎಂದು ಹೇಳಿದರು. ಪ್ರಿಯಾಂಕ್ ಖರ್ಗೆ ಅವರ ಕುಟುಂಬ ಗುಲ್ಬರ್ಗಾಕ್ಕೆ ಬಂದು ನೆಲೆಸಲು ಹಿಂದೂಗಳು ಕಾರಣರಾಗಿದ್ದಾರೆ ಎಂದು ಹೇಳಿದ ಅವರು, ರಜಾಕರ ವಿರುದ್ಧ RSS ಕಾರ್ಯಕರ್ತರು ನಿಂತಿದ್ದರು; ಅಂದು ಪೊಲೀಸರು ಅಥವಾ ರಾಜಕಾರಣಿಗಳು ಬಂದಿರಲಿಲ್ಲ ಎಂದು ಹೇಳಿಕೆ ನೀಡಿದರು. RSS ನೋಂದಣಿ ವಿಚಾರವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಚರ್ಚೆಗೆ ಬಿ.ಎಲ್. ಸಂತೋಷ್ ಅವರ ಈ ಹೇಳಿಕೆ ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.