ಮೈಸೂರು (www.vknews.in): ಬಡವರು, ದೀನದಲಿತರು ಹಾಗೂ ಅಗತ್ಯವಿರುವವರಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ (ರಿ.) ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ, ವಂತಿಕೆ ಅಥವಾ ಬಹುಮಾನ ಸಂಗ್ರಹಿಸುವವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಂಸ್ಥೆಯ ಆಡಳಿತ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶಿವಕುಮಾರ್ ಹೂಟಗಳ್ಳಿ ಅವರ ಸೂಚನೆಯಂತೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ಟ್ರಸ್ಟ್ ಸ್ಥಾಪನೆಯಾದ ದಿನದಿಂದಲೂ ಸಮಾಜದ ಬಡವರು, ದೀನದಲಿತರು ಹಾಗೂ ಅಗತ್ಯವಿರುವವರ ಸೇವೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಲಾಗಿದೆ.
ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ, ಖಜಾಂಚಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸೌಮ್ಯಶ್ರೀ (ಏಳನೇ ಹೊಸಕೋಟೆ) ಮತ್ತು ಕಾರ್ಯದರ್ಶಿ ಎನ್. ನಾಗೇಂದ್ರ ಅವರು ನೀಡಿರುವ ಮಾಹಿತಿಯಂತೆ, ಸಂಸ್ಥೆಯು ಇದುವರೆಗೆ ಯಾವುದೇ ಸಾರ್ವಜನಿಕರು, ದಾನಿಗಳು ಅಥವಾ ಇತರ ಸಂಘ-ಸಂಸ್ಥೆಗಳಿಂದ ಹಣಕಾಸಿನ ನೆರವು ಅಥವಾ ಬಹುಮಾನಗಳನ್ನು ಸ್ವೀಕರಿಸಿಲ್ಲ. ಆಡಳಿತ ಮಂಡಳಿಯ ಪ್ರಮುಖರು ತಮ್ಮ ಸ್ವಂತ ಹಣದಿಂದಲೇ ಬಡವರು ಹಾಗೂ ಅಗತ್ಯವಿರುವವರಿಗೆ ನೆರವು ನೀಡುತ್ತಾ ಬಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾರಾದರೂ ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್’ ಹೆಸರನ್ನು ಬಳಸಿಕೊಂಡು ಸಾರ್ವಜನಿಕರಿಂದ ಹಣ, ವಂತಿಕೆ, ಬಹುಮಾನ ಅಥವಾ ಯಾವುದೇ ರೀತಿಯ ಆರ್ಥಿಕ ಸಹಾಯ ಕೇಳಿದರೆ ಅಂತಹವರಿಗೆ ಯಾವುದೇ ಹಣ ಅಥವಾ ನೆರವು ನೀಡಬಾರದು ಎಂದು ಸಂಸ್ಥೆ ಮನವಿ ಮಾಡಿದೆ. ಟ್ರಸ್ಟ್ನ ಹೆಸರು, ಲೋಗೋ ಅಥವಾ ವಿಳಾಸವನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸುವವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಲಾಗಿದೆ.
ಟ್ರಸ್ಟ್ ಹೆಸರಿನಲ್ಲಿ ಯಾರಾದರೂ ಹಣ ಅಥವಾ ಸಹಾಯ ಕೇಳಿರುವುದು ಕಂಡುಬಂದರೆ, ಫೋನ್ ರೆಕಾರ್ಡಿಂಗ್, ಸಂದೇಶಗಳು, ರಶೀದಿ ಸೇರಿದಂತೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಂಸ್ಥೆಯ ಕಾರ್ಯದರ್ಶಿ ಅಥವಾ ಖಜಾಂಚಿಯವರ ಗಮನಕ್ಕೆ ತರಬಹುದು.
ಅಲ್ಲದೆ, ಅಧಿಕೃತ ಇ-ಮೇಲ್ [email protected] ಮೂಲಕವೂ ದೂರು ಸಲ್ಲಿಸಬಹುದು. ಸೂಕ್ತ ಸಾಕ್ಷ್ಯಾಧಾರಗಳಿರುವ ದೂರುಗಳನ್ನು ಮಾತ್ರ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಟ್ರಸ್ಟ್ನ ಹೆಸರು, ಲೋಗೋ ಅಥವಾ ವಿಳಾಸವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಅಕ್ರಮವಾಗಿ ಹಣ ಅಥವಾ ನೆರವು ಸಂಗ್ರಹಿಸುವವರ ವಿರುದ್ಧ ತಕ್ಷಣ ಪೊಲೀಸ್ ದೂರು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಇಂತಹ ವಂಚನೆಗಳಿಗೆ ಒಳಗಾಗದೆ, ಟ್ರಸ್ಟ್ ಹೆಸರಿನಲ್ಲಿ ಹಣ ಕೇಳುವವರ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಸಂಸ್ಥೆಯ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.