ಆಲಪ್ಪುಳ (www.vknews.in): ಕೇರಳದ ಆಲಪ್ಪುಳ ಜಿಲ್ಲೆಯ ಕರುವಾಟ್ಟಾದಲ್ಲಿ 65 ವರ್ಷದ ವೃದ್ಧನ ಕೊಲೆ ಪ್ರಕರಣವೊಂದು ಆಘಾತಕಾರಿ ತಿರುವು ಪಡೆದುಕೊಂಡಿದೆ. ಸ್ವಂತ 13 ವರ್ಷದ ಮೊಮ್ಮಗಳೇ ತನ್ನ ಅಪ್ರಾಪ್ತ ಸ್ನೇಹಿತರೊಂದಿಗೆ ಸೇರಿ ಅಜ್ಜನ ಹತ್ಯೆಗೆ ಸಂಚು ರೂಪಿಸಿದ್ದಾಳೆ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಮೃತರನ್ನು ಕೊಲ್ಲಂ ಜಿಲ್ಲೆಯ ಶಿವನ್ಕುಟ್ಟಿ (65) ಎಂದು ಗುರುತಿಸಲಾಗಿದೆ. ಕರುವಾಟ್ಟಾದ ಬಾಡಿಗೆ ಮನೆಯಲ್ಲಿ ಅಜ್ಜ ಒಬ್ಬರೇ ವಾಸಿಸುತ್ತಿರುವುದನ್ನು ಗಮನಿಸಿದ್ದ ಬಾಲಕಿ, ತನ್ನ ಅಪ್ರಾಪ್ತ ಸ್ನೇಹಿತರ ನೆರವಿನಿಂದ ಕೊಲೆ ಸಂಚು ರೂಪಿಸಿದ್ದಳು ಎನ್ನಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಗೆ ಐಫೋನ್ ಖರೀದಿಸಿಕೊಳ್ಳಲು ಹಾಗೂ ತನ್ನ ಬಾಯ್ಫ್ರೆಂಡ್ಗೆ ಬೈಕ್ ಕೊಡಿಸಲು ಹಣದ ಅಗತ್ಯವಿತ್ತು. ಇದೇ ಕಾರಣಕ್ಕೆ ಅಜ್ಜನನ್ನೇ ಕೊಲೆ ಮಾಡಿಸುವ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಮೊಬೈಲ್ ಫೋನ್ ಬಳಕೆ ಹಾಗೂ ತಡವಾಗಿ ಮನೆಗೆ ಬರುತ್ತಿದ್ದುದಕ್ಕೆ ಅಜ್ಜ ಪದೇಪದೇ ಗದರಿಸುತ್ತಿದ್ದರಿಂದ ಬಾಲಕಿಗೆ ಅವರ ಮೇಲೆ ಅಸಮಾಧಾನವಿತ್ತು ಎಂದು ತಿಳಿದುಬಂದಿದೆ.
ಆರೋಪಿಗಳು ಮನೆಯ ಶೌಚಾಲಯದ ವೆಂಟಿಲೇಟರ್ ಮೂಲಕ ಒಳನುಗ್ಗಿ ಶಿವನ್ಕುಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಬಾಲಕಿಗೆ ವಿಡಿಯೋ ಕಾಲ್ ಮಾಡಿ ಕೊಲೆಯನ್ನು ತೋರಿಸಿದ್ದಾರೆ ಎನ್ನಲಾಗಿದೆ.
ಕೊಲೆಯ ಬಳಿಕ ಆರೋಪಿಗಳು ಪೊಲೀಸರ ದಾರಿ ತಪ್ಪಿಸಲು ಘಟನಾ ಸ್ಥಳದಲ್ಲಿ ಖಾರದ ಪುಡಿ ಎರಚಿದ್ದರು ಎನ್ನಲಾಗಿದೆ. ಮನೆಯಲ್ಲಿದ್ದ ಸುಮಾರು 6 ಪವನ್ ಚಿನ್ನಾಭರಣ ಹಾಗೂ ಹಣವನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು.
ಆರಂಭದಲ್ಲಿ ಈ ಘಟನೆ ಕಳ್ಳತನದ ಉದ್ದೇಶದಿಂದ ನಡೆದ ಕೊಲೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಬಾಲಕಿಯ ಸಂಶಯಾಸ್ಪದ ವರ್ತನೆ ಹಾಗೂ ಆಕೆಯ ಫೋನ್ ಕರೆಗಳ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದಾಗ ಪ್ರಕರಣದ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಸೇರಿದಂತೆ ನಾಲ್ವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.