ಹಾಸನ (www.vknews.in): ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿಯ ಕುಟುಂಬದಿಂದ ನಿರಂತರ ಮಾನಸಿಕ ಕಿರುಕುಳ ಹಾಗೂ ಕೌಟುಂಬಿಕ ಕಲಹ ಎದುರಿಸುತ್ತಿದ್ದ ಯುವತಿಯೊಬ್ಬರು ತನ್ನ ಎರಡು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಅನುಪಮಾ (27) ಹಾಗೂ ಅವರ ಎರಡು ವರ್ಷದ ಪುತ್ರ ಆರ್ಯನ್ ಎಂದು ಗುರುತಿಸಲಾಗಿದೆ.
ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಅಕ್ಕಪಕ್ಕದ ಮನೆಯವರಾಗಿದ್ದ ಶ್ರೀನಿವಾಸ್ ಹಾಗೂ ಅನುಪಮಾ ಪರಸ್ಪರ ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಇವರ ವಿವಾಹಕ್ಕೆ ಶ್ರೀನಿವಾಸ್ ಅವರ ತಾಯಿ ಜಯಮ್ಮ ಹಾಗೂ ಸಹೋದರಿ ಅನುಶ್ರೀ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಕುಟುಂಬದವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದರು.
ಮದುವೆಯ ನಂತರ ಪತಿಯ ಕುಟುಂಬದವರು ದಂಪತಿಯನ್ನು ಮನೆಗೆ ಸೇರಿಸದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಹಾಗೂ ಅನುಪಮಾ ಬೆಂಗಳೂರಿಗೆ ತೆರಳಿ ವಾಸವಾಗಿದ್ದರು. ಶ್ರೀನಿವಾಸ್ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಗೆ ನಾಲ್ಕು ವರ್ಷಗಳ ಬಳಿಕ ಗಂಡು ಮಗು ಜನಿಸಿತ್ತು.
ಗ್ರಾಮದಲ್ಲಿದ್ದ ಜಯಮ್ಮ ಅವರು ಅನುಪಮಾ ಅವರ ತಾಯಿ ಯಶೋಧ ಅವರೊಂದಿಗೆ ಮದುವೆ ವಿಚಾರವಾಗಿ ನಿರಂತರವಾಗಿ ಜಗಳವಾಡುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿದ್ದ ಶ್ರೀನಿವಾಸ್ ಅವರು ತಮ್ಮ ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ ವಿಚಾರವೂ ದಂಪತಿ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. “ನಮ್ಮನ್ನು ಮನೆಗೆ ಸೇರಿಸದವರೊಂದಿಗೆ ನೀವು ಮಾತನಾಡಬಾರದು” ಎಂದು ಅನುಪಮಾ ಪತಿಯೊಂದಿಗೆ ಹಲವು ಬಾರಿ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ.
ಹಲವು ಬಾರಿ ರಾಜಿ ಸಂಧಾನ ನಡೆಸಿದ ಬಳಿಕ, ಸುಮಾರು ಎರಡು ತಿಂಗಳ ಹಿಂದೆ ದಂಪತಿ ಆಲೂರಿಗೆ ಬಂದು ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಾವಿಗೆ ಕಾರಣವಾದ ನಿಖರ ಪರಿಸ್ಥಿತಿ ಹಾಗೂ ಕುಟುಂಬದವರು ಮಾಡಿರುವ ಆರೋಪಗಳ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಇನ್ನು, ಅನುಪಮಾ ಅವರ ಕುಟುಂಬದವರು ಅವರ ನೇತ್ರಗಳನ್ನು ದಾನ ಮಾಡಲು ಮುಂದಾಗಿದ್ದು, ದುರಂತದ ನಡುವೆಯೂ ಮತ್ತೊಬ್ಬರ ಬದುಕಿಗೆ ಬೆಳಕು ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.