ನಲ್ಗೊಂಡ (www.vknews.in): ಹಣ ಹಾಗೂ ಐಷಾರಾಮಿ ಜೀವನಶೈಲಿಗಾಗಿ ಶಾಲಾ ಪ್ರಾಂಶುಪಾಲೆ ಹಾಗೂ ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ (48) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಹಾಗೂ ನಿರ್ದೇಶಕಿಯಾಗಿದ್ದ ರೂಪಾ ರೆಡ್ಡಿ ಅವರು ಆಗಸ್ಟ್ 12ರ ಬೆಳಗ್ಗೆ ತಮ್ಮ ನಿವಾಸದಲ್ಲಿ 27 ಇರಿತದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೈದರಾಬಾದ್ನಲ್ಲಿದ್ದ ಅವರ ಪತಿ, ರೂಪಾ ಅವರು ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು. ಬಳಿಕ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಾಲೆಗೆ ಗೈರುಹಾಜರಾಗಿದ್ದ ಐವರು 10ನೇ ತರಗತಿ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಿದ್ದರು. ಈ ಪೈಕಿ ಇಬ್ಬರು ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿರುವುದು ಹಾಗೂ ಪಾರ್ಟಿಗಳನ್ನು ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಬುಧವಾರ ಬೆಳಗ್ಗೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ರೂಪಾ ರೆಡ್ಡಿ ಅವರನ್ನು ಪೂರ್ವಯೋಜಿತವಾಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸುಮಾರು ಐದು ದಿನಗಳ ಕಾಲ ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ರೂಪಾ ರೆಡ್ಡಿ ಅವರ ಮನೆಯನ್ನೂ ಪರಿಶೀಲಿಸಿ, ಚಾಕು ಹಾಗೂ ಗುರುತು ಮರೆಮಾಚಲು ಕೈಗವಸುಗಳನ್ನು ಖರೀದಿಸಿದ್ದರು. ಕೊಲೆಯ ದಿನ ಆರೋಪಿಗಳ ಪೈಕಿ ಒಬ್ಬ ಮಂಕಿ ಕ್ಯಾಪ್ ಹಾಗೂ ಕೈಗವಸು ಧರಿಸಿ ರೂಪಾ ರೆಡ್ಡಿ ಅವರ ಮನೆಗೆ ಪ್ರವೇಶಿಸಿದ್ದ. ಮಲಗುವ ಕೋಣೆಯಲ್ಲಿ ಇರಿಸಿದ್ದ ₹2.50 ಲಕ್ಷ ಹಣವನ್ನು ಕಂಡು ಅದನ್ನು ತೆಗೆದುಕೊಂಡು ಪರಾರಿಯಾಗಲು ಮುಂದಾಗಿದ್ದ. ಈ ವೇಳೆ ಮಂಕಿ ಕ್ಯಾಪ್ ಜಾರಿದ್ದರಿಂದ ರೂಪಾ ರೆಡ್ಡಿ ಆರೋಪಿಯನ್ನು ಗುರುತಿಸಿದ್ದರು ಎನ್ನಲಾಗಿದೆ. ತಾನು ಗುರುತಿಸಲ್ಪಟ್ಟಿರುವ ಭಯದಿಂದ ಆರೋಪಿ ಚಾಕುವಿನಿಂದ ಅವರಿಗೆ 27 ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಬಳಿಕ ಆರೋಪಿಗಳು ಹಣವನ್ನು ತೆಗೆದುಕೊಂಡು, ರಕ್ತದ ಕಲೆಗಳಿದ್ದ ಬಟ್ಟೆ ಹಾಗೂ ಮಂಕಿ ಕ್ಯಾಪ್ ಅನ್ನು ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ. ಬಳಿಕ ಇಬ್ಬರೂ ಗೋವಾಕ್ಕೆ ಪ್ರವಾಸ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ರಕ್ತದ ಕಲೆಗಳಿದ್ದ ಕೆಲವು ಕರೆನ್ಸಿ ನೋಟುಗಳು, ಅವರು ಖರೀದಿಸಿದ್ದ ಐಫೋನ್ ಹಾಗೂ ರೂಪಾ ರೆಡ್ಡಿ ಅವರ ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹1.54 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಗೂ ಮುನ್ನ ಇಬ್ಬರೂ ಆರೋಪಿಗಳು ತ್ವರಿತವಾಗಿ ಹಣ ಗಳಿಸುವ ಮಾರ್ಗಗಳ ಕುರಿತು ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.