ಇಸ್ತಾನ್ಬುಲ್ (www.vknews.in): ಬ್ರೆಜಿಲ್ನ ಮಾಜಿ ಖ್ಯಾತ ಫುಟ್ಬಾಲ್ ಆಟಗಾರ ರಾಬರ್ಟೊ ಕಾರ್ಲೋಸ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟರ್ಕಿಯ ಆಡಳಿತಾರೂಢ ಜಸ್ಟಿಸ್ ಅಂಡ್ ಡೆವಲಪ್ಮೆಂಟ್ ಪಾರ್ಟಿಯ (AKP) ಸಂಸದ ಅಲಿ ಶಾಹಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಈ ಚರ್ಚೆಗೆ ಕಾರಣವಾಗಿದೆ.
ವಿಶ್ವದ 500 ಪ್ರಭಾವಿ ಮುಸ್ಲಿಮರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಶೇಖ್ ಜಿಹಾದ್ ಹಮದ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಕಾರ್ಲೋಸ್ ಇಸ್ಲಾಂ ಸ್ವೀಕರಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ ಎಂದು ಅಲಿ ಶಾಹಿನ್ ಹೇಳಿದ್ದಾರೆ. ಇದೇ ವೇಳೆ ರಾಬರ್ಟೊ ಕಾರ್ಲೋಸ್ ಅವರ ಹೊಸ ಜೀವನಕ್ಕೆ ಶುಭ ಹಾರೈಸುವುದಾಗಿ ಅವರು ತಿಳಿಸಿದ್ದಾರೆ.
ಸಾವೊ ಪಾಲೊದಲ್ಲಿರುವ ಇಸ್ಲಾಮಿಕ್ ಚಾರಿಟೇಬಲ್ ಯೂತ್ ಲೀಗ್ನ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲಿ ಶಾಹಿನ್ ಅವರು ಶೇಖ್ ಜಿಹಾದ್ ಹಮದ್ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ರಾಬರ್ಟೊ ಕಾರ್ಲೋಸ್ ಈ ಹಿಂದೆ ಟರ್ಕಿಯ ಖ್ಯಾತ ಕ್ಲಬ್ ಫೆನರ್ಬಾಹ್ಸೆ ಪರ ಆಡಿದ್ದರು.
ಅಲಿ ಶಾಹಿನ್ ಅವರ ಪೋಸ್ಟ್ ಬಳಿಕ ಟರ್ಕಿಶ್ ಮಾಧ್ಯಮಗಳೂ ರಾಬರ್ಟೊ ಕಾರ್ಲೋಸ್ ಅವರು ಸುಮಾರು ನಾಲ್ಕು ವಾರಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ವರದಿ ಮಾಡಿವೆ. ಆದರೆ, ರಾಬರ್ಟೊ ಕಾರ್ಲೋಸ್ ಸ್ವತಃ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಸದ್ಯಕ್ಕೆ ಇದು ಟರ್ಕಿಶ್ ಸಂಸದರ ಹೇಳಿಕೆ ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲಿರುವ ಸುದ್ದಿಯಾಗಿದ್ದು, ಕಾರ್ಲೋಸ್ ಅವರಿಂದ ಅಧಿಕೃತ ದೃಢೀಕರಣ ಹೊರಬಂದಿಲ್ಲ.
ಇತ್ತೀಚೆಗೆ ಮೊರೊಕನ್ ಮೂಲದ ಫಿಫಾ ಮಾನ್ಯತೆ ಪಡೆದ ಆಟಗಾರರ ಏಜೆಂಟ್ ಸುಹೈಲಾ ಅಲ್-ತಹಿರಿ ಅವರೊಂದಿಗೆ ರಾಬರ್ಟೊ ಕಾರ್ಲೋಸ್ ವಿವಾಹವಾಗಿದ್ದಾರೆ ಎನ್ನಲಾಗಿದ್ದು, ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ವಿವಾಹದ ಬಳಿಕವೇ ರಾಬರ್ಟೊ ಕಾರ್ಲೋಸ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಚರ್ಚೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಆದರೆ ವಿವಾಹ ಹಾಗೂ ಧರ್ಮಾಂತರದ ನಡುವಿನ ಸಂಬಂಧದ ಕುರಿತು ಕಾರ್ಲೋಸ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.