ಮಲಪ್ಪುರಂ (www.vknews.in): ತಿರೂರು ಹೊಳೆ ಸಮೀಪ ಗೋಣಿಚೀಲದಲ್ಲಿ ಕಟ್ಟಿ, ಕಲ್ಲುಗಳನ್ನು ತುಂಬಿ ಮುಳುಗಿಸಿಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೀನುಗಾರಿಕೆಗೆ ತೆರಳಲು ಸಿದ್ಧವಾಗುತ್ತಿದ್ದ ‘ಸಮರ್ಕಂದ್’ ದೋಣಿಯ ಕಾರ್ಮಿಕರು ನಿನ್ನೆ ಮಧ್ಯಾಹ್ನ ಹೊಳೆ ಸಮೀಪ ಗೋಣಿಚೀಲವೊಂದನ್ನು ಗಮನಿಸಿದ್ದಾರೆ. ಅನುಮಾನಗೊಂಡು ಪರಿಶೀಲಿಸಿದಾಗ ಅದರೊಳಗೆ ಮನುಷ್ಯರ ದೇಹವಿರುವುದು ತಿಳಿದುಬಂದಿದೆ. ಕೂಡಲೇ ತಿರೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಗೋಣಿಚೀಲದೊಳಗಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ. ಮಹಜರು ಸೇರಿದಂತೆ ಪ್ರಾಥಮಿಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಹೆಚ್ಚಿನ ತಪಾಸಣೆಗಾಗಿ ತಿರೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಇತ್ತೀಚೆಗೆ ನಾಪತ್ತೆಯಾಗಿದ್ದ ಪಡಿಞಾರೆಕರೆ ಬೀಚ್ ನಿವಾಸಿ ಫೌಸಿಯ (37) ಅವರ ಮೃತದೇಹವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬುಧವಾರ ರಾತ್ರಿ ಫೌಸಿಯ ಅವರು ತಮ್ಮ ಪತಿ ಅಂಡಿಪಾಟಿಲ್ ನಿವಾಸಿ ಹುಸೈನ್ ಅವರೊಂದಿಗೆ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಹುಸೈನ್ ಅವರು ಫೌಸಿಯರನ್ನು ಮನೆಯಿಂದ ಕರೆದುಕೊಂಡು ಹೋಗಿರುವುದಾಗಿ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಿರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾಗಿರುವ ಹುಸೈನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಮೃತದೇಹದ ಗುರುತು ಹಾಗೂ ಸಾವಿನ ನಿಖರ ಕಾರಣವನ್ನು ತನಿಖೆಯ ಬಳಿಕ ಖಚಿತಪಡಿಸಿಕೊಳ್ಳಬೇಕಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.