ದುಬೈ (www.vknews.in): ಬೇಸಿಗೆ ರಜೆ ಮುಗಿಸಿ ಯುಎಇಗೆ ಮರಳುತ್ತಿರುವ ವಲಸಿಗರು ಹಾಗೂ ಪ್ರವಾಸಿಗರ ಹೆಚ್ಚುತ್ತಿರುವ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ದುಬೈ ಕಸ್ಟಮ್ಸ್ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಪ್ರಕ್ರಿಯೆಗಳನ್ನು ಮತ್ತಷ್ಟು ವೇಗಗೊಳಿಸಲು 24 ಗಂಟೆಗಳ ವಿಶೇಷ ವ್ಯವಸ್ಥೆ ಜಾರಿಗೆ ತಂದಿದೆ. ಪ್ರಯಾಣಿಕರ ಆಗಮನ ಮತ್ತು ನಿರ್ಗಮನದ ಮಾಹಿತಿಯನ್ನು ಮುಂಚಿತವಾಗಿ ವಿಶ್ಲೇಷಿಸಿ, ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅತ್ಯಾಧುನಿಕ ತಪಾಸಣಾ ತಂತ್ರಜ್ಞಾನಗಳನ್ನೂ ಬಳಸಲಾಗುತ್ತಿದೆ.
ಬ್ಯಾಗೇಜ್ ತಪಾಸಣೆಗಾಗಿ ದುಬೈ ವಿಮಾನ ನಿಲ್ದಾಣಗಳ ಪ್ರವೇಶದ್ವಾರಗಳಲ್ಲಿ ಒಟ್ಟು 77 ಅತ್ಯಾಧುನಿಕ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಲ್ಲಿ 58 ಯಂತ್ರಗಳು ದೊಡ್ಡ ಬ್ಯಾಗೇಜ್ಗಳಿಗಾಗಿ ಹಾಗೂ 19 ಯಂತ್ರಗಳು ಹ್ಯಾಂಡ್ ಬ್ಯಾಗ್ಗಳ ತಪಾಸಣೆಗಾಗಿ ಬಳಸಲಾಗುತ್ತಿದೆ. ಅನುಮಾನಾಸ್ಪದ ಸಾಮಾನುಗಳನ್ನು ಮಾತ್ರ ಪ್ರತ್ಯೇಕಿಸಿ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹೆಚ್ಚಿನ ಮಟ್ಟದ ತಪಾಸಣೆ ನಡೆಸುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.
ದುಬೈ ಕಸ್ಟಮ್ಸ್ನ ಸ್ಮಾರ್ಟ್ ‘ಐಡಿಜಿಟ್’ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ತಮ್ಮ ಸಾಮಾನು ಹಾಗೂ ಉಡುಗೊರೆಗಳನ್ನು ಮುಂಚಿತವಾಗಿಯೇ ಘೋಷಿಸಬಹುದಾಗಿದೆ. ಈ ಸ್ಮಾರ್ಟ್ ವ್ಯವಸ್ಥೆಯಿಂದ ರೆಡ್ ಲೈನ್ನಲ್ಲಿನ ಕಸ್ಟಮ್ಸ್ ಪ್ರಕ್ರಿಯೆಯ ಸಮಯವನ್ನು ಸುಮಾರು 45 ನಿಮಿಷಗಳಿಂದ 5 ನಿಮಿಷಕ್ಕಿಂತಲೂ ಕಡಿಮೆ ಅವಧಿಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷವಾಗಿ ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಭಾರತ ಸೇರಿದಂತೆ ವಿವಿಧ ದೇಶಗಳಿಂದ ಕುಟುಂಬ ಸಮೇತ ಯುಎಇಗೆ ಮರಳುತ್ತಿರುವ ವಲಸಿಗರಿಗೆ ಈ ವ್ಯವಸ್ಥೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಅತ್ಯಾಧುನಿಕ ಸ್ಮಾರ್ಟ್ ಚಾನೆಲ್ಗಳು ಹಾಗೂ ತಂತ್ರಜ್ಞಾನಗಳ ಬಳಕೆಯಿಂದ ಕಸ್ಟಮ್ಸ್ ಕ್ಲಿಯರೆನ್ಸ್ ವೇಗಗೊಂಡಿದ್ದು, ಪ್ರಯಾಣಿಕರ ಸಮಯ ಉಳಿತಾಯ ಹಾಗೂ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಮತ್ತಷ್ಟು ಸುಗಮಗೊಳಿಸುವ ಗುರಿಯನ್ನು ದುಬೈ ಕಸ್ಟಮ್ಸ್ ಹೊಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.