ಕೊಪ್ಪಳ | www.vknews.in: ಪ್ರೀತಿ ಧರ್ಮದ ಎಲ್ಲೆಗಳನ್ನು ಮೀರಿ ಎರಡು ಕುಟುಂಬಗಳನ್ನು ಒಂದುಗೂಡಿಸಿದ ಅಪರೂಪದ ವಿವಾಹಕ್ಕೆ ಕೊಪ್ಪಳ ಸಾಕ್ಷಿಯಾಗಿದೆ. ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಹಿಂದೂ ಯುವಕ ವೆಂಕಟೇಶ್ ರೆಡ್ಡಿ ಹಾಗೂ ಮುಸ್ಲಿಂ ಯುವತಿ ಶಹೀನಾ ಕುಟುಂಬದವರ ಒಪ್ಪಿಗೆಯೊಂದಿಗೆ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಭಾಗ್ಯನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಶಹೀನಾ ಬಿಂದಿ ಧರಿಸಿ, ಸಪ್ತಪದಿ ತುಳಿದು, ಮಂತ್ರ ಪಠಣಗಳ ನಡುವೆ ಮಾಂಗಲ್ಯ ಧರಿಸುವ ಮೂಲಕ ‘ಜಾನಕಿ’ ಎಂಬ ಹೆಸರಿನೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೆಂಕಟೇಶ್ ರೆಡ್ಡಿ ಮತ್ತು ಶಹೀನಾ ಅವರು ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪರಿಚಯವಾಗಿ ಪ್ರೀತಿಸುತ್ತಿದ್ದರು. ಪದವಿ ಪೂರ್ಣಗೊಂಡ ಬಳಿಕವೂ ಇವರ ಪ್ರೀತಿ ಮುಂದುವರಿದಿತ್ತು. ಆರಂಭದಲ್ಲಿ ಕುಟುಂಬದವರಿಂದ ವಿರೋಧ ವ್ಯಕ್ತವಾಗಿದ್ದರೂ, ಇಬ್ಬರೂ ತಮ್ಮ ನಿರ್ಧಾರವನ್ನು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಬಂಧು-ಬಳಗ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ನೆರವೇರಿತು.
ಅಳವಂಡಿ ಗ್ರಾಮದ ಸಿದ್ದರಡ್ಡಿ ಬಿಸನಹಳ್ಳಿ ಹಾಗೂ ಚಂದ್ರಕಲಾ ದಂಪತಿಯ ಪುತ್ರ ವೆಂಕಟೇಶ್ ರೆಡ್ಡಿ ಮತ್ತು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಬಾಷುಸಾಬ್ ಕಟ್ಟಿಮನಿ ಹಾಗೂ ಮಮ್ತಾಜಿ ದಂಪತಿಯ ಪುತ್ರಿ ಶಹೀನಾ ವಿವಾಹವಾಗಿದ್ದಾರೆ. ಸಕಲ ವಾದ್ಯವೃಂದ, ಮಂತ್ರ ಪಠಣ ಹಾಗೂ ಹಿಂದೂ ಸಂಪ್ರದಾಯದ ವಿಧಿವಿಧಾನಗಳೊಂದಿಗೆ ನಡೆದ ಮದುವೆಯಲ್ಲಿ ಎರಡೂ ಕುಟುಂಬಗಳ ಬಂಧುಗಳು, ಗ್ರಾಮಸ್ಥರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.