ತಿರುವನಂತಪುರಂ (www.vknews.in): ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಸಾರ್ವಜನಿಕ ರಂಗದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನೀಡಿದ್ದ ಧಾರ್ಮಿಕ ಹೇಳಿಕೆಯನ್ನು ಟೀಕಿಸಿ ಮುಖ್ಯಮಂತ್ರಿ ವಿ.ಡಿ. ಸತೀಸನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ನ್ನು ಇದೀಗ ತೆಗೆದುಹಾಕಿದ್ದಾರೆ. ಕಾಂತಪುರಂ ಉಸ್ತಾದ್ ಅವರ ಹೇಳಿಕೆಯನ್ನು ಟೀಕಿಸಿ ಮುಖ್ಯಮಂತ್ರಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ನಡೆದ ಕ್ಯಾಬಿನೆಟ್ ಬ್ರೀಫಿಂಗ್ನಲ್ಲಿ ಈ ಕುರಿತು ಮುಖ್ಯಮಂತ್ರಿ ಮಾಡಿದ್ದ ಹೇಳಿಕೆಗಳನ್ನೊಳಗೊಂಡ ವೀಡಿಯೊವನ್ನು ಅವರ ಅಧಿಕೃತ ಫೇಸ್ಬುಕ್ ಪುಟದಿಂದ ತೆಗೆದುಹಾಕಲಾಗಿದೆ.
ಇದಕ್ಕೂ ಮುನ್ನ ಸುನ್ನಿ ಮುಖಂಡರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಸಮಸ್ತ ನಾಯಕರು ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ನೀಡಿದ್ದ ಹೇಳಿಕೆಯನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ವಿವರಿಸಿತ್ತು. ಸಮಸ್ತದ ನಿಲುವಿನ ನೈಜ ಉದ್ದೇಶವನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟ ಮುಖಂಡರು, ಮುಖ್ಯಮಂತ್ರಿಯವರ ಪ್ರತಿಕ್ರಿಯೆ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದರು. ಇದರ ಬೆನ್ನಲ್ಲೇ ‘ನಾನು ಆ ಹೇಳಿಕೆಯನ್ನು ಒಪ್ಪುವುದಿಲ್ಲ’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ವೀಡಿಯೊವನ್ನು ಸತೀಸನ್ ಹಿಂತೆಗೆದುಕೊಂಡಿದ್ದಾರೆ.
ಕಾಂತಪುರಂ ಉಸ್ತಾದ್ ಅವರು ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಹಾಗೂ 19ನೇ ಶತಮಾನದಲ್ಲಿ ಹೇಳಬೇಕಾದ ವಿಚಾರಗಳನ್ನು 21ನೇ ಶತಮಾನದಲ್ಲಿಯೂ ಹೇಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಈ ಹಿಂದೆ ಟೀಕಿಸಿದ್ದರು. ಮುಖ್ಯಮಂತ್ರಿಯವರ ಹೇಳಿಕೆಯನ್ನು ಸರಿಪಡಿಸಬೇಕು ಎಂದು ಕೇರಳ ಮುಸ್ಲಿಂ ಜಮಾತ್ ಕೂಡ ಒತ್ತಾಯಿಸಿತ್ತು. ಇದೀಗ ಸುನ್ನಿ ಮುಖಂಡರ ಭೇಟಿ ಹಾಗೂ ವಾಸ್ತವಾಂಶಗಳ ವಿವರಣೆಯ ಬಳಿಕ ಮುಖ್ಯಮಂತ್ರಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನ್ನು ತೆಗೆದುಹಾಕಿರುವುದು ಗಮನ ಸೆಳೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.