ಬೆಂಗಳೂರು (www.vknews.in): ಹೋಟೆಲ್ನಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದ 42 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಅಕ್ಟೋಬರ್ 30ರಂದು ನಡೆದಿದೆ. ಮೃತರನ್ನು ಚನ್ನರಾಯಪಟ್ಟಣ ಮೂಲದ ಚಂದ್ರು (42) ಎಂದು ಗುರುತಿಸಲಾಗಿದೆ. ಅವರು ಕಳೆದ ಕೆಲವು ವರ್ಷಗಳಿಂದ ಗೊಟ್ಟಿಗೆರೆಯ ಗುರು ಗ್ರೀನ್ಸ್ ಫ್ಯಾಮಿಲಿ ರೆಸ್ಟೋರೆಂಟ್ನ ಬಾರ್ ವಿಭಾಗದಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಅಕ್ಟೋಬರ್ 30ರಂದು ಬೆಳಗ್ಗೆ ಸುಮಾರು 11.40ರ ವೇಳೆಗೆ ಚಂದ್ರು ರೆಸ್ಟೋರೆಂಟ್ನಲ್ಲಿ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಅವರು ತೀವ್ರವಾಗಿ ಬಳಲತೊಡಗಿದರು. ಬಳಿಕ ಮೇಜಿನ ಮೇಲೆಯೇ ಕುಸಿದುಬಿದ್ದರು. ಮೊದಲು ಎಡಭಾಗಕ್ಕೆ ವಾಲಿದ ಅವರು, ಕೆಲ ಕ್ಷಣಗಳ ಕಾಲ ಮತ್ತೆ ಕುಳಿತುಕೊಂಡಿದ್ದರು. ಆದರೆ ನಂತರ ಬಲಭಾಗಕ್ಕೆ ಕುಸಿದು ನೆಲಕ್ಕೆ ಬಿದ್ದರು ಎಂದು ವರದಿಯಾಗಿದೆ.
ಘಟನೆಯನ್ನು ಗಮನಿಸಿದ ರೆಸ್ಟೋರೆಂಟ್ ಸಿಬ್ಬಂದಿ ತಕ್ಷಣ ಚಂದ್ರು ಅವರ ನೆರವಿಗೆ ಧಾವಿಸಿದರು. ಅವರನ್ನು ಬದುಕಿಸಲು ಸಿಪಿಆರ್ (CPR) ನೀಡುವ ಪ್ರಯತ್ನ ಮಾಡಿದರು. ಪ್ರಜ್ಞೆ ಮರಳಬಹುದು ಎಂಬ ನಿರೀಕ್ಷೆಯಲ್ಲಿ ತಲೆಯ ಮೇಲೂ ನೀರು ಸುರಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ರೆಸ್ಟೋರೆಂಟ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಸಂಪೂರ್ಣ ಘಟನೆ ಸೆರೆಯಾಗಿದೆ. ಹುಳಿಮಾವು ಠಾಣೆ ವ್ಯಾಪ್ತಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.