ಕೊಚ್ಚಿ (www.vknews.in): 2029ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರದಿಂದ ಹೊರಬೀಳಲಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಭವಿಷ್ಯ ನುಡಿದಿದ್ದಾರೆ. ಕೇಂದ್ರದಲ್ಲಿ ಸರ್ಕಾರ ಬದಲಾವಣೆಗೆ ಜನರು ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಹಮ್ಮಿಕೊಂಡಿರುವ ‘ಕೊಚ್ಚಿಯಲ್ಲಿ ಜಂತರ್ ಮಂತರ್’ ಅಭಿಯಾನದ ಭಾಗವಾಗಿ ರಾಜೇಂದ್ರ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಬದಲಾವಣೆ ಚುನಾವಣೆಗಳ ಮೂಲಕವೇ ಸಾಧ್ಯವಾಗಬೇಕು. ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ಚುನಾವಣಾ ವ್ಯವಸ್ಥೆ ಖಚಿತಪಡಿಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ದಿಪ್ಕೆ ಆಗ್ರಹಿಸಿದರು. “2029ಕ್ಕೆ ಸಿದ್ಧರಾಗಿರಿ. ಅವರು ಖಂಡಿತವಾಗಿಯೂ ಅಧಿಕಾರದಿಂದ ಹೊರಹೋಗಲಿದ್ದಾರೆ. ಜ್ಞಾನೇಶ್ ಕುಮಾರ್ ಹುದ್ದೆಯಿಂದ ನಿರ್ಗಮಿಸಿದರೆ ನರೇಂದ್ರ ಮೋದಿ ಕೂಡ ಅಧಿಕಾರ ಕಳೆದುಕೊಳ್ಳಲಿದ್ದಾರೆ” ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ದೆಹಲಿಯ ಜಂತರ್ ಮಂತರ್ನಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರವೇಶಿಸಿದ ಹಿನ್ನೆಲೆಯಲ್ಲಿ ತಮ್ಮನ್ನು ಹಾಗೂ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಬಂಧಿಸಲಾಗಿತ್ತು ಎಂದು ದಿಪ್ಕೆ ಉಲ್ಲೇಖಿಸಿದರು. “ತ್ರಿವರ್ಣ ಧ್ವಜವನ್ನು ಎತ್ತಿಹಿಡಿದಿದ್ದಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸಲಾಯಿತು. ನನ್ನ ಸಹೋದರರಾದ ಸೌರವ್ ಮತ್ತು ಆಶು ಅವರನ್ನೂ ಬಂಧಿಸಲಾಯಿತು.
ಭಾರತದಲ್ಲಿ ಇಂತಹ ಘಟನೆ ಕೊನೆಯದಾಗಿ ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ನಡೆದಿತ್ತು” ಎಂದು ಅವರು ಹೇಳಿದ್ದಾರೆ. ದೇಶದ ಯಾವುದೇ ಭಾಗಕ್ಕೆ ಹೋದರೂ ತ್ರಿವರ್ಣ ಧ್ವಜವನ್ನು ಹಿಡಿಯುವುದನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, ದೆಹಲಿ, ಮಹಾರಾಷ್ಟ್ರ, ಕೇರಳ ಅಥವಾ ತಮಿಳುನಾಡು ಸೇರಿದಂತೆ ಎಲ್ಲೆಡೆ ತಮ್ಮನ್ನು ಬಂಧಿಸಿದರೂ ಮತ್ತೆ ಬಂದು ರಾಷ್ಟ್ರಧ್ವಜವನ್ನು ಎತ್ತಿಹಿಡಿಯುವುದಾಗಿ ಸವಾಲು ಹಾಕಿದರು.
ಸರ್ಕಾರ ಜನರು ಏನು ತಿನ್ನಬೇಕು, ಯಾರನ್ನು ಪ್ರೀತಿಸಬೇಕು ಮತ್ತು ಯಾರನ್ನು ಮದುವೆಯಾಗಬೇಕು ಎಂಬುದರ ಮೇಲಷ್ಟೇ ಅಲ್ಲದೆ, ಯಾರಿಗೆ ಮತ ಹಾಕಬೇಕು ಎಂಬುದರ ಮೇಲೂ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ದಿಪ್ಕೆ ಆರೋಪಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಯುವಜನರು ಸರ್ಕಾರವನ್ನು ಪ್ರಶ್ನಿಸಲು ಆರಂಭಿಸಿರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.
ಭಾರತವು ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರ ಆದರ್ಶಗಳ ಮೇಲೆ ನಿರ್ಮಾಣವಾಗಿದೆ ಎಂದು ದಿಪ್ಕೆ ಹೇಳಿದರು. ಗಾಂಧೀಜಿಯನ್ನು ಭಾರತದ ಆತ್ಮ, ಅಂಬೇಡ್ಕರ್ ಅವರನ್ನು ಬೆನ್ನೆಲುಬು ಮತ್ತು ನೆಹರೂ ಅವರನ್ನು ಬುದ್ಧಿಶಕ್ತಿ ಎಂದು ಬಣ್ಣಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಈ ನಾಯಕರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಸಿಜೆಪಿ ವಿದೇಶಿ ಹಣ ಪಡೆಯುತ್ತಿದೆ ಅಥವಾ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ಪ್ರಧಾನಿ ಮೋದಿ ವಿದೇಶಿ ಶಕ್ತಿಗಳ, ವಿಶೇಷವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು. ಭಾರತದ ಹಿತಾಸಕ್ತಿಗಳನ್ನು ಬದಿಗಿಟ್ಟು ತಮ್ಮ ವರ್ಚಸ್ಸು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಪ್ರಧಾನಿಯನ್ನು ಬಹಿರಂಗವಾಗಿ ಟೀಕಿಸುವ ಸ್ವಾತಂತ್ರ್ಯವಿತ್ತು. ಆ ಕಾಲದ ಭಾರತ ಹೆಚ್ಚು ಪ್ರಜಾಸತ್ತಾತ್ಮಕವಾಗಿತ್ತು ಎಂದು ದಿಪ್ಕೆ ಅಭಿಪ್ರಾಯಪಟ್ಟರು. “ಆ ಸರ್ಕಾರ ಪರಿಪೂರ್ಣವಾಗಿತ್ತು ಎಂದು ನಾನು ಹೇಳುತ್ತಿಲ್ಲ. ಆದರೆ ಪ್ರಧಾನಿಯನ್ನು ಟೀಕಿಸಲು ಅವಕಾಶವಿದ್ದ ಭಾರತ ಹೆಚ್ಚು ಪ್ರಜಾಸತ್ತಾತ್ಮಕವಾಗಿತ್ತು. ಪ್ರಜಾಪ್ರಭುತ್ವ ಹೀಗೆಯೇ ಇರಬೇಕು” ಎಂದು ಅವರು ಹೇಳಿದ್ದಾರೆ.
ಬಿಜೆಪಿ ಧಾರ್ಮಿಕ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದೆ ಮತ್ತು ರಾಜಕೀಯ ಲಾಭಕ್ಕಾಗಿ ಗಲಭೆಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ತಮ್ಮನ್ನು ಅರಾಜಕತಾವಾದಿಗಳೆಂದು ಕರೆಯಬಾರದು; ತಾವು ಅಂಬೇಡ್ಕರ್ ಮತ್ತು ಗಾಂಧೀಜಿಯವರ ತತ್ವಗಳನ್ನು ಅನುಸರಿಸುವವರು ಎಂದು ದಿಪ್ಕೆ ಹೇಳಿದರು.
ರಾಜೇಂದ್ರ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ವಿವಿಧ ವಯೋಮಾನದ ಜನರು ಹಾಗೂ ಯುವ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಇದಕ್ಕೂ ಮೊದಲು ಮರೀನ್ ಡ್ರೈವ್ನಿಂದ ರಾಜೇಂದ್ರ ಮೈದಾನದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಗೆ ನಟ ಪ್ರಕಾಶ್ ರಾಜ್ ನೇತೃತ್ವ ವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.