ಅಯೋಧ್ಯೆ (www.vknews.in): 2023ರ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್ ಭೇಟಿ ನೀಡಿ ಚಹಾ ಕುಡಿದಿದ್ದ ಅಯೋಧ್ಯೆಯ ಮೀರಾ ಮಾಂಝಿ ಅವರ ಕುಟುಂಬ ಇಂದು ಸಾಲದ ಸಂಕಷ್ಟಕ್ಕೆ ಸಿಲುಕಿದೆ. ಉಜ್ವಲ ಯೋಜನೆಯ 10 ಕೋಟಿ ಫಲಾನುಭವಿಯಾಗಿದ್ದ ಮೀರಾ ಅವರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವ ಭರವಸೆ ನೀಡಲಾಗಿತ್ತು. ಆದರೆ, ಉದ್ಯೋಗದ ಅವಕಾಶ ಕಲ್ಪಿಸುವ ಬದಲು ಸಾಲದ ಹೊರೆ ಹೊರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
2024ರ ಜನವರಿ 22ರಂದು ರಾಮಮಂದಿರ ಉದ್ಘಾಟನೆಗೊಳ್ಳುವ ಕೆಲವೇ ವಾರಗಳ ಮೊದಲು ಪ್ರಧಾನಿ ಮೋದಿ ಅವರು ಮೀರಾ ಮಾಂಝಿ ಅವರ ಸರಳ ಮನೆಗೆ ಅನಿರೀಕ್ಷಿತ ಭೇಟಿ ನೀಡಿ ಚಹಾ ಸೇವಿಸಿದ್ದರು. ಈ ಸಂದರ್ಭದಲ್ಲಿ ಅವರ ಕುಟುಂಬದ ಸ್ಥಿತಿಗತಿ ವಿಚಾರಿಸಿ ಶುಭ ಹಾರೈಸಿದ್ದರು. ತಾವು ಕೂಡ ಹಿಂದೆ ಚಹಾ ಮಾರುತ್ತಿದ್ದ ವ್ಯಕ್ತಿಯಾಗಿದ್ದರಿಂದ ಮೀರಾ ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ಮೋದಿ ಹೇಳಿದ್ದರು ಎನ್ನಲಾಗಿದೆ. ಪ್ರಧಾನಿ ಭೇಟಿ ವೇಳೆ ಚಹಾ ಕುಡಿದಿದ್ದ ಕಪ್ ಇಂದಿಗೂ ಮೀರಾ ಅವರ ಮನೆಯ ದೇವರ ಕೋಣೆಯಲ್ಲಿದ್ದು, ಅದನ್ನು ಅವರು ಪೂಜಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಮೀರಾ ಮಾಂಝಿ ಘಾಟ್ನಲ್ಲಿ ಹೂವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅವರ ಪತಿ ಸೂರಜ್ ಕುಮಾರ್ ಮಾಂಝಿ ಕೂಲಿ ಕೆಲಸ ಮಾಡುತ್ತಿದ್ದರು. ಪ್ರಧಾನಿ ಭೇಟಿಯ ಬಳಿಕ ಜಿಲ್ಲಾಧಿಕಾರಿ, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಹಲವು ಅಧಿಕಾರಿಗಳು ಮನೆಗೆ ಭೇಟಿ ನೀಡಿ ಕುಟುಂಬದ ಆದಾಯದ ಬಗ್ಗೆ ವಿಚಾರಿಸಿದ್ದರು. ಮೀರಾ ಅವರಿಗೆ ಹೂವು ಮಾರಾಟ ಮಾಡಲು ಶಾಶ್ವತ ಸ್ಥಳ ಒದಗಿಸುವುದಾಗಿ ಹಾಗೂ ಪತಿಗೆ ನದಿಯಲ್ಲಿ ದೋಣಿ ಸೇವೆ ನಡೆಸಲು ದೋಣಿ ನಿರ್ಮಿಸಿಕೊಡಲು ನೆರವಾಗುವುದಾಗಿ ಭರವಸೆ ನೀಡಿದ್ದರು ಎಂದು ಮೀರಾ ತಿಳಿಸಿದ್ದಾರೆ.
ಆದರೆ ಮೂರು-ನಾಲ್ಕು ತಿಂಗಳು ಕಳೆದರೂ ಯಾವುದೇ ನೆರವು ಸಿಗಲಿಲ್ಲ. ಮತ್ತೆ ಅಧಿಕಾರಿಗಳನ್ನು ಭೇಟಿಯಾದಾಗ ಆರಂಭದಲ್ಲಿ ತಮ್ಮನ್ನು ಗುರುತಿಸದಂತೆ ವರ್ತಿಸಿದರು. ಬಳಿಕ ಪತಿಗೆ ದೋಣಿ ನಿರ್ಮಿಸಲು ಸಾಲದ ವ್ಯವಸ್ಥೆ ಮಾಡಿಕೊಟ್ಟರು ಎಂದು ಅವರು ಆರೋಪಿಸಿದ್ದಾರೆ. “ನಮಗೆ ಹಣದ ಅಗತ್ಯವಿರಲಿಲ್ಲ. ಭರವಸೆ ನೀಡಿದಂತೆ ಕೆಲಸ ಕೊಡಿಸುವಂತೆ ಮಾತ್ರ ಕೇಳಿದ್ದೆವು. ನಾವು ಸಾಲ ಕೇಳಿರಲಿಲ್ಲ” ಎಂದು ಮೀರಾ ಹೇಳಿದ್ದಾರೆ.
ಅಕ್ಟೋಬರ್ 28ರಂದು ಉತ್ತರ ಪ್ರದೇಶ ಯುವ ಕಾಂಗ್ರೆಸ್ನ ರಾಜ್ಯ ಉಪಾಧ್ಯಕ್ಷ ಹಾಗೂ ಅಯೋಧ್ಯೆಯ ಮುಖಂಡ ಶರದ್ ಶುಕ್ಲಾ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೀರಾ ಮಾಂಝಿ ತಮ್ಮ ಸಮಸ್ಯೆಗಳನ್ನು ಬಹಿರಂಗಪಡಿಸಿದರು. ನಿಗದಿತ ಸ್ಥಳದಲ್ಲಿ ಹೂವು ಮಾರಾಟ ಮಾಡಲು ಅವಕಾಶ ನೀಡುವ ಬದಲಾಗಿ 5,000 ರೂ. ವಸೂಲಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಹೂವು ಮಾರಾಟವನ್ನೇ ನಿಲ್ಲಿಸಬೇಕಾಯಿತು. ಇದರಿಂದ ಕುಟುಂಬದ ಪ್ರಮುಖ ಆದಾಯದ ಮೂಲವೇ ನಿಂತುಹೋಯಿತು ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಪ್ರವಾಹ ಸೇರಿದಂತೆ ಹಲವು ಕಾರಣಗಳಿಂದ ಪತಿಯ ದೋಣಿ ವ್ಯವಹಾರವೂ ನಿಯಮಿತ ಆದಾಯ ನೀಡುತ್ತಿಲ್ಲ. ಅಯೋಧ್ಯೆಯಿಂದ ವಾರಾಣಸಿವರೆಗೆ ಸಂಚರಿಸುವ ದೊಡ್ಡ ಕ್ರೂಸ್ ಮತ್ತು ಮೋಟಾರ್ ದೋಣಿಗಳಿಂದ ಸಣ್ಣ ದೋಣಿ ನಡೆಸುವವರ ವ್ಯವಹಾರಕ್ಕೆ ಹೊಡೆತ ಬಿದ್ದಿದೆ ಎಂದು ಮೀರಾ ಹೇಳಿದ್ದಾರೆ. ಇದರಿಂದ ಸೂರಜ್ ಕ್ರಮೇಣ ಸಾಲದ ಸುಳಿಗೆ ಸಿಲುಕಿದ್ದಾರೆ.
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP) ಅಡಿಯಲ್ಲಿ ಸೂರಜ್ ಮಾಂಝಿ ಅವರಿಗೆ ಸಾಲ ನೀಡಲಾಗಿತ್ತು. ಬಿಬಿಸಿ ಹಿಂದಿ ವರದಿಯ ಪ್ರಕಾರ, ಮೊದಲ ಹಂತದಲ್ಲಿ 2,61,250 ರೂ. ಹಾಗೂ ಎರಡನೇ ಹಂತದಲ್ಲಿ 23,750 ರೂ. ಸಾಲ ಮಂಜೂರಾಗಿತ್ತು.
ಈ ಹಣವನ್ನು ಬಳಸಿ ಅವರು ದೋಣಿ ನಿರ್ಮಿಸಿದ್ದರು. ದೋಣಿ ವ್ಯವಹಾರದಿಂದ ಬಂದ ಆದಾಯದಲ್ಲಿ ಸಾಲದ ಕಂತುಗಳನ್ನು ಪಾವತಿಸುತ್ತಿದ್ದರು. ಆದರೆ 2,04,616 ರೂ. ಬಾಕಿ ಉಳಿದ ಹಿನ್ನೆಲೆಯಲ್ಲಿ ಸಾಲವನ್ನು ಅನುತ್ಪಾದಕ ಆಸ್ತಿ (NPA) ಎಂದು ಘೋಷಿಸಲಾಯಿತು. 2026ರ ಜುಲೈ 5ರಂದು ಬ್ಯಾಂಕ್ ಸೂರಜ್ ಅವರಿಗೆ ನೋಟಿಸ್ ನೀಡಿದೆ ಎಂದು ವರದಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರದ್ ಶುಕ್ಲಾ, ಪ್ರಧಾನಿ ಚಹಾ ಕುಡಿದಿದ್ದ ಕುಟುಂಬ ಇಂದು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದೆ ಎಂದು ಆರೋಪಿಸಿದರು. ಮೂರು ಮಕ್ಕಳನ್ನು ಒಳಗೊಂಡ ಕುಟುಂಬ ಸಾಲದ ಹೊರೆ ಅನುಭವಿಸುತ್ತಿದ್ದು, ಸಾಲ ವಸೂಲಾತಿ ಏಜೆಂಟರಿಂದ ಬೆದರಿಕೆ ಎದುರಿಸುತ್ತಿದೆ ಎಂದು ಅವರು ಹೇಳಿದರು. ಇದು ‘ಮೋದಿ ಮಾದರಿ’ಯ ದುರಂತ ವಾಸ್ತವ ಎಂದು ಟೀಕಿಸಿದರು.
ಮೀರಾ ಅವರ ಪತ್ರಿಕಾಗೋಷ್ಠಿಯ ಬಳಿಕ ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಪವನ್ ಪಾಂಡೆ ಅವರು ಕುಟುಂಬಕ್ಕೆ 50,000 ರೂ. ನೆರವು ನೀಡಿದರು. ಅಯೋಧ್ಯೆಯ ಬಿಜೆಪಿ ಮೇಯರ್ ಗಿರೀಶ್ ಪತಿ ತ್ರಿಪಾಠಿ ಅವರು ಹೆಚ್ಚುವರಿಯಾಗಿ 60,000 ರೂ. ನೀಡಿದರು ಎಂದು ವರದಿಯಾಗಿದೆ. ಆದರೆ, ಈ ಪ್ರಕರಣವನ್ನು ಪ್ರತಿಪಕ್ಷಗಳು ಅನಗತ್ಯ ವಿವಾದವನ್ನಾಗಿ ಮಾಡುತ್ತಿವೆ ಎಂದು ಮೇಯರ್ ತ್ರಿಪಾಠಿ ಪ್ರತಿಕ್ರಿಯಿಸಿದ್ದಾರೆ. ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ದೊರೆತಿವೆ ಎಂದು ಅವರು ಹೇಳಿದ್ದಾರೆ.
ಬಿಬಿಸಿ ಹಿಂದಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಪ್ರಧಾನಿ ಭೇಟಿ ಬಳಿಕ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕುಟುಂಬಕ್ಕೆ ಮನೆ ನಿರ್ಮಿಸಲಾಗಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗಿದೆ. ಆಯುಷ್ಮಾನ್ ಯೋಜನೆಯಡಿ ಆರೋಗ್ಯ ಕಾರ್ಡ್ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಪಿಎಂ ಸ್ವನಿಧಿ ಯೋಜನೆಯಡಿ ದೋಣಿ ದುರಸ್ತಿಗಾಗಿ 25,000 ರೂ. ಸಾಲ ನೀಡಲಾಗಿದೆ. 3 ಲಕ್ಷ ರೂ. ಸಾಲದಲ್ಲೂ 75,000 ರೂ. ಸಬ್ಸಿಡಿ ಸೇರಿದೆ. ಸಬ್ಸಿಡಿ ಹೊರತುಪಡಿಸಿ ಉಳಿದ 2.25 ಲಕ್ಷ ರೂ. ಸಾಲದ ಕಂತುಗಳನ್ನು ಪಾವತಿಸಲು ಕುಟುಂಬಕ್ಕೆ ಕಷ್ಟವಾಗುತ್ತಿದೆ. ಸಾಲ ಮರುಪಾವತಿಯ ವಿಚಾರದಲ್ಲಿ ಸರ್ಕಾರ ಮತ್ತು ಆಡಳಿತಕ್ಕೆ ಏನೂ ಮಾಡಲು ಸಾಧ್ಯವಿಲ್ಲ; ಸಮಾಜವೇ ನೆರವಾಗಬೇಕು ಎಂದು ಮೇಯರ್ ಹೇಳಿದ್ದಾರೆ.
ಪ್ರಧಾನಿ ಭೇಟಿಯ ಬಳಿಕ ಕುಟುಂಬಕ್ಕೆ ನೀಡಲಾದ ಭರವಸೆಗಳು, ಸಾಲದ ಮಂಜೂರಾತಿ, ಉದ್ಯೋಗದ ಅವಕಾಶಗಳ ಕೊರತೆ ಮತ್ತು ಸರ್ಕಾರದ ಯೋಜನೆಗಳ ಪ್ರಯೋಜನಗಳ ಕುರಿತು ಇದೀಗ ಚರ್ಚೆ ಆರಂಭವಾಗಿದೆ. ಪ್ರಚಾರದ ಬೆಳಕು ಮರೆಯಾದ ಬಳಿಕ ಫಲಾನುಭವಿಗಳ ಸ್ಥಿತಿಗತಿಗಳ ಬಗ್ಗೆ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಯೂ ಈ ಪ್ರಕರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ.
अयोध्या में उज्ज्वला योजना की 10 करोड़वीं लाभार्थी बहन मीरा जी के घर पर उनके परिवार वालों से ‘चाय पे चर्चा’ हुई। इस दौरान यह जानकर मन को बहुत संतोष हुआ कि कैसे सरकारी योजनाओं से पूरे परिवार का जीवन आसान हुआ है। pic.twitter.com/NCTb4yXcaB — Narendra Modi (@narendramodi) December 30, 2023
अयोध्या में उज्ज्वला योजना की 10 करोड़वीं लाभार्थी बहन मीरा जी के घर पर उनके परिवार वालों से ‘चाय पे चर्चा’ हुई। इस दौरान यह जानकर मन को बहुत संतोष हुआ कि कैसे सरकारी योजनाओं से पूरे परिवार का जीवन आसान हुआ है। pic.twitter.com/NCTb4yXcaB
— Narendra Modi (@narendramodi) December 30, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.