(www.vknews.in) : ಮೊನ್ನೆ ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದಿಂದ ನಡೆದುಕೊಂಡು ಹೋಗುತ್ತಿದ್ದೆ. ರಸ್ತೆಯ ಬದಿಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಕುಳಿತಿದ್ದರು. ಮೇಲ್ನೋಟಕ್ಕೆ ಗಟ್ಟಿಮುಟ್ಟಾದ ಶರೀರ. ಆದರೆ ಹತ್ತಿರ ಹೋದಾಗ ಕಂಡ ದೃಶ್ಯ ಮನಸ್ಸನ್ನು ಕಲಕಿತು. ಅವರ ಎರಡೂ ಕಾಲುಗಳು ನಜ್ಜುಗುಜ್ಜಾಗಿ, ನಡೆಯಲು ಮಾತ್ರವಲ್ಲ, ಎದ್ದು ನಿಲ್ಲಲೂ ಸಾಧ್ಯವಾಗದ ಸ್ಥಿತಿ!
ನನ್ನ ಕೈಯಲ್ಲಿದ್ದದ್ದು ಕೇವಲ ಎಪ್ಪತ್ತು ರೂಪಾಯಿ. ಉಳಿದ ಹಣ ಅಕೌಂಟ್ನಲ್ಲಿ. ಭಿಕ್ಷುಕರಿಗೂ ಡಿಜಿಟಲ್ ಪೇಮೆಂಟ್ ಮಾಡುವ ಕಾಲವಲ್ಲವೇ ಇದು!
ನಾನು ಅವರ ಕೈಗೆ ಎಪ್ಪತ್ತು ರೂಪಾಯಿ ನೀಡಿದೆ.
“ಹಜರತ್, ಪೈಸಾ ನಕ್ಕೋ ಬಹುತ್ ಭೂಖ್ ಹೈ… ಮುಜೆ ದೋ ಪೊರೊಟಾ ದೀಜಿಯೇ!”
ಹಣ ಬೇಡ, ತುಂಬಾ ಹಸಿವಿದೆ. ಎರಡು ಪೋರೋಟ ಕೊಡಿಸುವಿರ..? ಎಂದು ಕೇಳಿದರು. ಆ ಮಾತಿನಲ್ಲಿದ್ದ ಹಸಿವು, ಅಸಹಾಯಕತೆ ಮತ್ತು ನೋವು ನನ್ನ ಹೃದಯವನ್ನು ತಟ್ಟಿತು. ನಿಜಕ್ಕೂ ಕಣ್ಣಲ್ಲಿ ನೀರು ತುಂಬಿತು.
ತಕ್ಷಣ ಸುತ್ತಮುತ್ತಲಿನ ಮೂರ್ನಾಲ್ಕು ಹೋಟೆಲ್ಗಳಿಗೆ ಹೋಗಿ ಪರೋಟಾ ಕೇಳಿದೆ . ಆದರೆ ಎಲ್ಲರೂ ಒಂದೇ ಉತ್ತರ ನೀಡಿದರು. “ಪರೋಟಾ ಖಾಲಿಯಾಗಿದೆ.” ಮರಳಿ ಬಂದು, “ಪರೋಟಾ ಸಿಗಲಿಲ್ಲ, ಬೇರೆ ಏನಾದರೂ ಬೇಕೇ?” ಎಂದು ಕೇಳಿದೆ. “ರೈಸ್ ಸಾಕು” ಎಂದರು.
ಹೋಗಿ ಒಂದು ಚಿಕನ್ ಫ್ರೈಡ್ ರೈಸ್ ಆರ್ಡರ್ ಮಾಡಿದೆ. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಬಂದು, “ಸರ್, ಅದರಲ್ಲಿ ನನಗೂ ಅರ್ಧ ಕೊಡಿ” ಎಂದು ಕೇಳಿದರು. ಅವರ ಹಸಿವನ್ನೂ ಕಂಡು ಮತ್ತೊಂದು ರೈಸ್ ಆರ್ಡರ್ ಮಾಡಿದೆ. ಇಬ್ಬರಿಗೂ ಒಂದೊಂದು ಪ್ಯಾಕೆಟ್ ನೀಡಿದೆ.
ಆದರೆ ಆ ದಿನ ನನಗೆ ಸಿಕ್ಕಿದ್ದು ಕೇವಲ ಇಬ್ಬರಿಗೆ ಊಟ ಕೊಡಿಸಿದ ತೃಪ್ತಿಯಲ್ಲ. ಒಬ್ಬ ಮನುಷ್ಯನ ಬದುಕಿನ ಕಣ್ಣೀರಿನ ಕಥೆಯನ್ನು ಕೇಳುವ ಅವಕಾಶವೂ ಸಿಕ್ಕಿತು.
ಊಟ ನೀಡಿದ ನಂತರ ಆ ಕಾಲು ಕಳೆದುಕೊಂಡ ವ್ಯಕ್ತಿ ತನ್ನ ಬದುಕಿನ ಕಥೆಯನ್ನು ಹೇಳತೊಡಗಿದರು.
“ಹಜರತ್, ನಾನು ಆಟೋಮೊಬೈಲ್ ಮೆಕ್ಯಾನಿಕ್ ಆಗಿದ್ದೆ. ಒಂದು ವರ್ಷದ ಹಿಂದೆ ಒಂದು ಮಿನಿ ಲಾರಿ ಅಡಿಯಲ್ಲಿ ಮಲಗಿ ರಿಪೇರಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಅದರ ಬ್ರೇಕ್ ಫೇಲಾಯಿತು. ನಿಯಂತ್ರಣ ತಪ್ಪಿದ ವಾಹನ ನನ್ನ ಎರಡೂ ಕಾಲುಗಳ ಮೇಲೆ ಹರಿಯಿತು. ಕಾಲುಗಳೆರಡೂ ನಜ್ಜುಗುಜ್ಜಾದವು.
ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆಪರೇಷನ್ ಮಾಡಲು ಲಕ್ಷಾಂತರ ರೂಪಾಯಿ ಬೇಕೆಂದರು. ಅಷ್ಟು ಹಣ ಹೊಂದಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಎಲ್ಲರೂ ಕೈಬಿಟ್ಟರು. ಇಂದು ಬೀದಿಪಾಲಾಗಿದ್ದೇನೆ. ಯಾರಿಗೂ ಬೇಡದವನಾಗಿದ್ದೇನೆ.”
ಅವರ ಮಾತು ಕೇಳಿ ಮನಸ್ಸು ಭಾರವಾಯಿತು. ನಾನು ಅವರನ್ನು ಕೇಳಿದೆ: “ನಿಮ್ಮ ಹೆಂಡತಿ, ಮಕ್ಕಳು, ಮನೆಯವರೆಲ್ಲಿದ್ದಾರೆ?” ಅದಕ್ಕೆ ಅವರು ಹೇಳಿದ ಉತ್ತರ ನನ್ನನ್ನು ಇನ್ನಷ್ಟು ಕಾಡಿತು. “ಎಲ್ಲರೂ ಇದ್ದಾರೆ ಹಜರತ್… ಚೆನ್ನಾಗಿಯೇ ಇದ್ದಾರೆ. ಆದರೆ ಈಗ ಅವರಿಗೆ ನಾನು ಬೇಡವಾಗಿದ್ದೇನೆ.
ನನ್ನ ಆರೋಗ್ಯ ಚೆನ್ನಾಗಿದ್ದಾಗ, ಪ್ರತಿದಿನ ದುಡಿದು ಕೈತುಂಬಾ ಹಣ ಸಂಪಾದಿಸುತ್ತಿದ್ದಾಗ, ಮಕ್ಕಳು ಮತ್ತು ಮನೆಯವರು ಯಾವಾಗ ಮನೆಗೆ ಬರುತ್ತೀರಿ ಎಂದು ಫೋನ್ ಮಾಡಿ ಕೇಳುತ್ತಿದ್ದರು.
ಆದರೆ ಈಗ ನನಗೆ ಕಾಲುಗಳಿಲ್ಲ, ಕೆಲಸವಿಲ್ಲ, ಕೈಯಲ್ಲಿ ಕಾಸೂ ಇಲ್ಲ. ಹಾಗಾಗಿ ಈಗ ಯಾರಿಗೂ ನಾನು ಬೇಡ…” ಎಂದು ಹೇಳುತ್ತಾ ಎರಡು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡರು.
ಆ ಕ್ಷಣದಲ್ಲಿ ನನಗೆ ಮರುಮಾತಿಲ್ಲದಾಯಿತು. ಒಂದು ಕಾಲದಲ್ಲಿ ತನ್ನ ಕುಟುಂಬಕ್ಕಾಗಿ ದುಡಿದ ಕೈಗಳು ಇಂದು ಇನ್ನೊಬ್ಬರ ಮುಂದೆ ಊಟಕ್ಕಾಗಿ ಚಾಚಬೇಕಾದ ಸ್ಥಿತಿ! ಒಂದು ಕಾಲದಲ್ಲಿ ಮನೆಯವರ ನಿರೀಕ್ಷೆಯಾಗಿದ್ದ ವ್ಯಕ್ತಿ, ಇಂದು ಅದೇ ಮನೆಯವರಿಗೆ ಅನಗತ್ಯನಾಗಿದ್ದೇನೆ ಎಂದು ಕಣ್ಣೀರಿಡುವ ಪರಿಸ್ಥಿತಿ!
ನಿಜಕ್ಕೂ ಬದುಕು ಎಷ್ಟು ವಿಚಿತ್ರವಲ್ಲವೇ? ನಮ್ಮ ಆರೋಗ್ಯ, ಉದ್ಯೋಗ, ಹಣ, ಸಂಬಂಧಗಳು ಎಲ್ಲವೂ ಶಾಶ್ವತವೆಂದು ಭಾವಿಸುತ್ತೇವೆ. ಆದರೆ ಒಂದು ಕ್ಷಣದ ಅಪಘಾತ ಮನುಷ್ಯನ ಇಡೀ ಬದುಕನ್ನೇ ಬದಲಾಯಿಸಬಹುದು.
ಇಂದು ದುಡಿಯುವ ಶಕ್ತಿ ಇದೆ ಎಂದು ಯಾರನ್ನೂ ಕೀಳಾಗಿ ಕಾಣಬಾರದು. ಇಂದು ಆರೋಗ್ಯವಿದೆ ಎಂದು ಅಸಹಾಯಕರನ್ನು ನಿರ್ಲಕ್ಷಿಸಬಾರದು. ಏಕೆಂದರೆ ನಾಳೆ ನಮ್ಮ ಬದುಕು ಯಾವ ತಿರುವು ಪಡೆಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.
ನಮ್ಮ ಸುತ್ತಮುತ್ತ ಇಂತಹ ಎಷ್ಟೋ ಬದುಕುಗಳಿವೆ. ರಸ್ತೆಯ ಬದಿಯಲ್ಲಿ ಕುಳಿತಿರುವ ಪ್ರತಿಯೊಬ್ಬರ ಹಿಂದೆಯೂ ಒಂದು ಕಥೆಯಿರಬಹುದು. ಅವರ ನೋವು, ಹಸಿವು, ಅಸಹಾಯಕತೆ ನಮಗೆ ತಿಳಿದಿರದೇ ಇರಬಹುದು.
ನಾವು ಅವರಿಗೆ ನೀಡುವ ಒಂದು ಹೊತ್ತಿನ ಊಟ, ಒಂದು ಸಣ್ಣ ನೆರವು ಅಥವಾ ಪ್ರೀತಿಯ ಎರಡು ಮಾತುಗಳು ಅವರ ಪಾಲಿಗೆ ದೊಡ್ಡ ಆಸರೆಯಾಗಬಹುದು.
ಇಲ್ಲಿ ನಾನು ಮಾಡಿದ ಸಣ್ಣ ಸಹಾಯವನ್ನು ಹೇಳಿಕೊಂಡು ಹೊಗಳಿಸಿಕೊಳ್ಳುವ ಉದ್ದೇಶವಿಲ್ಲ.
ನಮ್ಮ ಸುತ್ತಮುತ್ತ ಇಂತಹ ಅಸಹಾಯಕ ಮನುಷ್ಯರೂ ಇದ್ದಾರೆ. ಅವರನ್ನೂ ಗಮನಿಸಬೇಕು, ಅವರ ನೋವಿಗೂ ಸ್ಪಂದಿಸಬೇಕು ಎಂಬುದನ್ನು ನೆನಪಿಸುವುದಷ್ಟೇ ನನ್ನ ಆಶಯ.
ಒಂದು ತುತ್ತು ಅನ್ನ ನೀಡುವ ಕೈಗಳಾಗೋಣ. ಒಂದು ಹನಿ ಕಣ್ಣೀರು ಒರೆಸುವ ಮನಸ್ಸುಗಳಾಗೋಣ. ಅಸಹಾಯಕರ ಬದುಕಿಗೆ ಆಸರೆಯಾಗೋಣ. ಅಲ್ಲಾಹು ನಮ್ಮೆಲ್ಲರನ್ನೂ ದುರಂತಗಳಿಂದ ಕಾಪಾಡಲಿ.
🖊️ ಅನ್ವಾರಿ ಕೊಡಗರಹಳ್ಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.