ಅಲ್ ಅಮೆರತ್ (www.vknews.in): ನಾಯಕ ಲಕ್ಷ್ಯ ರೈಚಂದಾನಿ ಅವರ ಭರ್ಜರಿ 93 ರನ್ಗಳ ನೆರವಿನಿಂದ ಭಾರತ ತಂಡವು ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ಇಶಾನ್ ಸೂದ್ ನೇತೃತ್ವದ ಭಾರತದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು. ಗೆಲುವಿಗೆ 228 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡವು ನಾಯಕ ಲಕ್ಷ್ಯ ರೈಚಂದಾನಿ ಅವರ ಆಕರ್ಷಕ ಬ್ಯಾಟಿಂಗ್ನಿಂದ 37ನೇ ಓವರ್ನಲ್ಲೇ 2 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಸುಲಭ ಜಯ ಸಾಧಿಸಿತು.
ಭಾರತದ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಲಕ್ಷ್ಯ ರೈಚಂದಾನಿ ಕೇವಲ 90 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 93 ರನ್ ಗಳಿಸಿದರು. ಅಫ್ಘಾನಿಸ್ತಾನದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಅವರು, ಉತ್ತಮ ಸ್ಟ್ರೈಕ್ರೇಟ್ ಕಾಯ್ದುಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಕೇವಲ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೈಚಂದಾನಿ, ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಅವರೊಂದಿಗೆ ಮೊದಲ ವಿಕೆಟ್ಗೆ 17 ಓವರ್ಗಳಲ್ಲಿ 117 ರನ್ಗಳ ಜೊತೆಯಾಟ ನೀಡಿದರು. ಆರ್ಯವೀರ್ 51 ರನ್ ಗಳಿಸಿದರು.
ನಂತರ ವಿಕೆ ವಿನೀತ್ ಅವರೊಂದಿಗೆ ಎರಡನೇ ವಿಕೆಟ್ಗೆ ಮತ್ತೊಂದು 77 ರನ್ಗಳ ಜೊತೆಯಾಟ ನೀಡುವ ಮೂಲಕ ಭಾರತದ ಗೆಲುವನ್ನು ಸುಲಭಗೊಳಿಸಿದರು. ವಿನೀತ್ ಅಜೇಯ 57 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 61 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ನೂರ್ ಅಲಿ ಎಸೆದ ಸತತ ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಪಂದ್ಯಕ್ಕೆ ತೆರೆ ಎಳೆದರು.
93 ರನ್ ಗಳಿಸಿದ್ದ ರೈಚಂದಾನಿ, ಸೋಹೈಲ್ ಖಾನ್ ಅವರ ಆಫ್ಸ್ಪಿನ್ ಬೌಲಿಂಗ್ನಲ್ಲಿ ಎಕ್ಸ್ಟ್ರಾ ಕವರ್ ಮೇಲೆ ಚೆಂಡನ್ನು ಹೊಡೆಯಲು ಯತ್ನಿಸಿ ಮೊಹಮ್ಮದ್ ಅಲಿ ಅವರಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಆದರೆ, ಅಷ್ಟರಲ್ಲಾಗಲೇ ಭಾರತ ಗೆಲುವಿನ ಸನಿಹದಲ್ಲಿತ್ತು.
ಇನ್ನೊಂದು ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಅರ್ಹತೆ ಪಡೆದಿದೆ. ಗುಂಪು ಹಂತದಲ್ಲಿಯೂ ಪಾಕಿಸ್ತಾನ ಭಾರತವನ್ನು ಸೋಲಿಸಿತ್ತು. ಹೀಗಾಗಿ ಇದೀಗ ಫೈನಲ್ನಲ್ಲಿ ಉಭಯ ತಂಡಗಳ ನಡುವೆ ಮತ್ತೊಂದು ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.
ನವೆಂಬರ್ 14ರ ಶನಿವಾರ ಅಲ್ ಅಮೆರತ್ನಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಗುಂಪು ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳುವ ಮೂಲಕ ಭಾರತ ಕಿರೀಟ ಮುಡಿಗೇರಿಸಿಕೊಳ್ಳುತ್ತದೆಯೇ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.