(www.vknews.in) : 2008ರಲ್ಲಿ ಪುತ್ತೂರು ತಾಲೂಕಿನ ( ಈಗಿನ ಕಡಬ) ಕೂರತ್ ಎಂಬ ಹಳ್ಳಿಯ ದರ್ಸ್ ವಿದ್ಯಾರ್ಥಿಗಳ ಸಂಘಟನೆ ಅಲ್ ಫಝಲ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ನವರು ಅಲ್ ಫಝಲ್ ಎಂಬ ಸೊವನೀರ್ ಹೊರತಂದಿದ್ದರು.ಆಗಿನ್ನೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲಾರಂಭಿಸಿದ್ದೆನಷ್ಟೆ. ಅದಕ್ಕಿಂತ ಒಂದು ವರ್ಷದ ಹಿಂದೆ ಅಂದರೆ 2007ರಲ್ಲಿ ನನ್ನ ಮೊದಲ ಕೃತಿ ” ಶಾಪದ ಕಣ್ಣೀರು” – ವರದಕ್ಷಿಣೆ ವಿರುದ್ದ ಅಕ್ಷರ ಸಮರ ಹೊರಬಂದಿತ್ತು.
ಅದು ನಮ್ಮ ಬ್ಯಾರಿಗಳ ಮಧ್ಯೆ ಆ ಕಾಲಕ್ಕೆ ತುಸು ಸಂಚಲನ ಹುಟ್ಟಿಸಿದ್ದರಿಂದ ನನ್ನಿಂದ ವರದಕ್ಷಿಣೆ ಕುರಿತಾಗಿ ಒಂದು ಲೇಖನ ಬರೆಸಿದ್ದರು.ಆದುದರಿಂದ ಆ ಸೊವನೀರ್ನ ಒಂದು ಪ್ರತಿ ನನಗೂ ಕಳುಹಿಸಿದ್ದರು.ಅದರಲ್ಲಿ ಕೂರತ್ ಜಮಾಅತಿನ ಗೌರವಾಧ್ಯಕ್ಷ ಯೂಸುಫ್ ಹಾಜಿಯವರದ್ದೊಂದು ಸಂದರ್ಶನವಿತ್ತು. ಆ ಸಂದರ್ಶನದಲ್ಲಿ ಯೂಸುಫ್ ಹಾಜಿಯವರು ಹೇಳಿದ ವಿಶೇಷ ವಾಕ್ಯಗಳು ಹೀಗಿತ್ತು. ” ನಮ್ಮೂರು ದಟ್ಟಾರಣ್ಯದ ನಡುವಿನ ಅತ್ಯಂತ ಹಿಂದುಳಿದ ಹಳ್ಳಿ. ಈ ಊರಿನ ಸೌಭಾಗ್ಯವೇನೆಂದರೆ ಮಡವೂರು ಸಿ.ಎಂ.ವಲಿಯುಲ್ಲಾಹ್, ಜಾವಗಲ್ ಬಾಬಾ, ವಡಗರ ಮುಹಮ್ಮದ್ ಹಾಜಿ, ಕುಂಬೋಳ್ ಕುಟುಂಬದ ಸಾದಾತ್ಗಳು ಇಲ್ಲಿಗೆ ಆಗಾಗ ಬರುತ್ತಿದ್ದರು.
ಸಿ.ಎಂ.ವಲಿಯುಲ್ಲಾಹ್ ಇಲ್ಲಿಗೆ ಬಂದರೆ ಇಲ್ಲೇ ಹರಿಯುವ ಕುಮಾರಾಧಾರಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಒಮ್ಮೆ ಸಿ.ಎಂ.ವಲಿಯುಲ್ಲಾಹ್ ಒಂದು ಮಾತು ಹೇಳಿದ್ದರು. ” ಇಲ್ಲಿನ ಮಣ್ಣು ಮತ್ತು ನೀರು ಔಷಧಿಯಾಗಿ ಮಾರ್ಪಡಲಿದೆ. ಇಲ್ಲಿಗೆ ಓರ್ವ ಸಾತ್ವಿಕ ವ್ಯಕ್ತಿ ಬರಲಿದ್ದಾರೆ.ಆ ಬಳಿಕ ಈ ಊರು ಪ್ರಸಿದ್ಧಿಯಾಗಲಿದೆ.ಅವರ ಹೆಸರು ಈ ಊರಿನ ಹೆಸರಿಂದಲೇ ಪ್ರಸಿದ್ಧಿಯಾಗಲಿದೆ.”. ಸಿ.ಎಂ.ವಲಿಯುಲ್ಲಾಹ್ ಭವಿಷ್ಯ ನುಡಿದ ಆ ಸಾತ್ವಿಕ ಪುರುಷ ಬೇರಾರೂ ಅಲ್ಲ. ನಿನ್ನೆ ನಮ್ಮನ್ನೆಲ್ಲಾ ಕಣ್ಣೀರ ಕಡಲಲ್ಲಿ ಮುಳುಗಿಸಿ ಹೊರಟು ಹೋದ ಕೂರತ್ ತಂಙ ಳ್ ಎಂದೇ ಪ್ರಸಿದ್ಧರಾದ ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್.
ಕೂರತ್ ತಂಙಳ್ ಆಕರ್ಷಕ ಮಾತುಗಾರರಲ್ಲ,ಅವರು ವೇದಿಕೆಗಳಲ್ಲಿ ಮಿಂಚುವವರೂ ಅಲ್ಲ.ಅವರು ದಿರಿಸೂ ಅತೀ ಸರಳವಿತ್ತು.ಅವರು ಹೆಚ್ಚಿನ ಸಂದರ್ಭಗಳಲ್ಲಿ ಬಿಳಿ ಲುಂಗಿ, ಬಿಳಿ ಅಂಗಿ, ತಲೆಗೊಂದು ಮುಂಡಾಸು ಸುತ್ತುತ್ತಿದ್ದರು. ಹೆಚ್ಚುನ ಸಂದರ್ಭಗಳಲ್ಲಿ ಅವರ ದಿರಿಸಿಗೆ ಇಸ್ತ್ರಿಯ ಬಿಸಿ ತಾಗಿದ್ದೇ ಇಲ್ಲ. ಅವರ ಮುಖ ಪರಿಚಯವಿರದವರು ಯಾರಾದರೂ ಮೊದಲ ಬಾರಿ ಕಂಡರೆ ಯಾವುದೋ ಹಳ್ಳಿಯ ಮದ್ರಸಾದ ಮುಅಲ್ಲಿಮ್ ಇರಬೇಕು ಎಂದೇ ತಿಳಿದಾರು. ಸರಳತೆಗೆ ಪರ್ಯಾಯ ಹೆಸರು ಎಂಬಂತೆ ಬಾಳಿ ಬದುಕಿದವರು.
ಅವರ ತಂದೆ ತಾಜುಲ್ ಉಲಮಾ ಶಾಫಿಈ ಕರ್ಮಶಾಸ್ತ್ರ ವಿಭಾಗದ ಸುನ್ನೀ ಮುಸ್ಲಿಮ್ ವಿದ್ವತ್ ಜಗತ್ತಿನ ಅತೀ ಪ್ರಸಿದ್ಧ ವಿದ್ವಾಂಸರೆಂದು ಜಗದ್ವಿಖ್ಯಾತರಾದವರು.ಅವರ ಮುಂದೆ ನಿಂತು ಇಡೀ ಉಲಮಾ ಜಗತ್ತು ತಲೆ ತಗ್ಗಿಸಿ ನಿಲ್ಲುತ್ತಿತ್ತು. ಅಂತಹ ಅಪ್ರತಿಮ ವಿದ್ವಾಂಸರ ಪುತ್ರನೆಂಬ ಯಾವ ಹಮ್ಮು ಬಿಮ್ಮೂ ಇಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಾಳಿ ಬದುಕಿದವರು ಕೂರತ್ ತಂಙಳ್.
ಅವರು ಒಂದು ಇಶಾರೆ ಮಾಡಿದರೆ ದುಡ್ಡಿನ ಚೀಲಗಳನ್ನು ತಂದು ಅವರ ಮುಂದೆ ರಾಶಿ ಹಾಕುವಂತಹ ನೂರಾರು ಶ್ರೀಮಂತ ಅಭಿಮಾನಿಗಳು ಶಿಷ್ಯರು ಅವರಿಗಿದ್ದಾರೆ. ಸ್ನೇಹಿತ Rafi Nagara ಬರೆದ ಕಾಮೆಂಟ್ ಒಂದನ್ನು ಓದಿ ನನ್ನ ಕಣ್ಣಾಲಿಗಳು ಒದ್ದೆಯಾದವು. ಒಮ್ಮೆ ಕೂರತ್ ತಂಙಳ್ ಯಾವುದೋ ಕಾರ್ಯಕ್ರಮಕ್ಕೆಂದು ಪುಣೆಗೆ ಹೋದವರು ಕಾಲೆಳೆದು ನಡೆಯುತ್ತಿದ್ದರಂತೆ. ಯಾಕಪ್ಪಾ ಇವರು ಕಾಲೆಳೆದು ನಡೆಯುತ್ತಿದ್ದಾರೆ ಎಂದು ನೋಡಿದರೆ ಅವರ ಚಪ್ಪಲಿ ಕಡಿದಿತ್ತು. ಆ ಕಡಿದ ಚಪ್ಪಲಿಗೆ ಅದಾಗಲೇ ಮೂರು ಕಡೆ ಹೊಲಿಗೆ ಹಾಕಿದ್ದರಂತೆ..!!!
ಅವರ ಬಳಿಗೆ ಸಾಂತ್ವನ ಬಯಸಿ ಹೋದವ ದಟ್ಟ ದರಿದ್ರನಿರಲಿ, ಅಗರ್ಭ ಶ್ರೀಮಂತನಿರಲಿ.. ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದರು. ಖಾಯಿಲೆ, ಕೌಟುಂಬಿಕ ಸಮಸ್ಯೆ, ಮತ್ತೊಂದು, ಇನ್ನೊಂದು ಎಂದು ಜಾತಿ ಮತಗಳಿಗತೀತವಾಗಿ ಪ್ರತಿನಿತ್ಯವೂ ಜನ ಹೋಗುತ್ತಿರುತ್ತಾರೆ.ಅವರು ಅದನ್ನೆಂದೂ ಲಾಭದಾಯಕ ಉದ್ಯಮ ಮಾಡಲಿಲ್ಲ.ಅವರ ಬಳಿ ಹೋದವರಿಗೆ ಒಂದೋ ನೀರು ಮಂತ್ರಿಸಿ ಕೊಡುತ್ತಿದ್ದರು ಅಥವಾ ಖುರ್ಆನ್ ಓದಲು ನಿರ್ದೇಶನ ನೀಡುತ್ತಿದ್ದರು.
1960ರಲ್ಲಿ ಸಯ್ಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿ ಮತ್ತು ಪ್ರಸಿದ್ಧ ಏಯ್ಮಲ ಸಯ್ಯದ್ ಕುಟುಂಬದ ಸಯ್ಯದತ್ ಫಾತಿಮಾ ಬೀವಿ ದಂಪತಿಗಳ ಪುತ್ರನಾಗಿ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಲಂನಲ್ಲಿ ಜನಿಸಿದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಎಸ್ಸೆಸ್ಸೆಲ್ಸಿವರೆಗಿನ ಶಿಕ್ಷಣ ಪಡೆದು ನಂತರ ತಂದೆಯವರ ಜೊತೆಗೆ ಇಸ್ಲಾಮಿಕ್ ಥಿಯಾಲಜಿ ಕಲಿಯಲು ಹೋದರು. ಉಳ್ಳಾಲದ ಸಯ್ಯದ್ ಮದನಿ ಅರೆಬಿಕ್ ಕಾಲೇಜಿನಿಂದ ಮದನಿ ಪದವಿ ಪಡೆದು 1988ರಿಂದ 1991ರವರೆಗೆ ಉಳ್ಳಾಲದ ಅದೇ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.ಅದಾಗಲೇ ಸಂಪೂರ್ಣವಾಗಿ ತಸವ್ವುಫ್ (ಸೂಫಿಸಂ) ನತ್ತ ಹೊರಳಿದ್ದರು.
1982ರಲ್ಲಿ ಪುತ್ತೂರಿನಿಂದ ಹದಿನೆಂಟು ಕಿಲೋ ಮೀಟರ್ ದೂರದ ಕೂರತ್ ಎಂಬ ಅರಣ್ಯದ ನಡುವಿನ ಪುಟ್ಟ ಹಳ್ಳಿಯಲ್ಲಿ ನಿರ್ಮಾಣಗೊಂಡಿದ್ದ ಮಸೀದಿಗೆ 1992ರಲ್ಲಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಪಾದಾರ್ಪಣೆಗೈದರು.ಅವರ ಸಾತ್ವಿಕ ಸ್ವಭಾವಕ್ಕೆ ಮನಸೋತು ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೋರಿ ಬರತೊಡಗಿದರು.ಹೃಸ್ವ ಅವಧಿಯಲ್ಲೇ ಫಝಲ್ ಕೋಯಮ್ಮ ಎಂಬ ಅವರ ಮೂಲ ಹೆಸರು ಮರೆಯಾಗಿ ಕೂರತ್ ತಂಙಳ್ ಎಂಬ ಹೆಸರಿನೊಂದಿಗೆ ಅವರು ಮನೆಮಾತಾದರು. ಕೂರತ್ ಎಂಬ ಪುಟ್ಟ ಹಳ್ಳಿ ಬದುಕಲ್ಲಿ ನೊಂದು ಬೆಂದವರ ಪಾಲಿನ ಆಶಾ ಕೇಂದ್ರವಾಯಿತು.ಮಡವೂರು ಸಿ.ಎಂ.ವಲಿಯುಲ್ಲಾಹ್ ಭವಿಷ್ಯ ನುಡಿದ ಸಾತ್ವಿಕ ಪುರುಷರು ಇವರೇ ಊರ ಜನಕ್ಕೆ ಖಚಿತವಾಯಿತು. ಕೂರತ್ ತಂಙಳ್ರ ಆಗಮನದೊಂದಿಗೆ ಅಲ್ಲಿ ಮಸೀದಿ ಅಭಿವೃದ್ಧಿಯಾಯಿತು. ಅಲ್ ಫಝಲ್ ದರ್ಸ್ ಬೆಳೆಯಿತು. ಹೈದ್ರೋಸಿಯಾ ಮದ್ರಸಾಕ್ಕೆ ಸುಸಜ್ಜಿತ ಕಟ್ಟಡವೂ ನಿರ್ಮಾಣವಾಯಿತು.ಕಂಪ್ಯೂಟರ್ ಕಲಿಕಾ ಕೇಂದ್ರ, ಖುತುಬ್ ಖಾನಾ ( ಗ್ರಂಥಾಲಯ) ಸ್ಥಾಪನೆಯಾಯಿತು.ಅವಕ್ಕೂ ಬೇರೆ ಬೇರೆ ಕಟ್ಟಡಗಳಾದವು.
ಇತ್ತ ತಂದೆ ತಾಜುಲ್ ಉಲಮಾರಿಗೆ ವಯಸ್ಸು ಏರುತ್ತಿತ್ತು. ಅವರಿಗೊಬ್ಬ ಸಹಾಯಕ ಬೇಕೆಂದು ಅವರು ತನ್ನ ಮಗ ಕೂರತ್ ತಂಙಳ್ರನ್ನೇ ನಾಯಿಬ್ (ಸಹಾಯಕ) ಖಾಝಿಯನ್ನಾಗಿ ನೇಮಿಸಿದರು.ಇದರಿಂದ ಒಂದೊಮ್ಮೆ ಉಳ್ಳಾಲದಲ್ಲಿ ಸಣ್ಣ ಮಟ್ಟದ ಅಸಮಾಧಾನವೆದ್ದಿತು.ಇವರಿಗೆ ಕಲಿಸಿದ ಗುರುಗಳಿರುವಾಗ ಅವರನ್ನೆಲ್ಲಾ ಬಿಟ್ಟು ಇವರನ್ನು ಹೇಗೆ ನಾಯಿಬ್ ಖಾಝಿಯನ್ನಾಗಿಸಿದರು ಎಂಬ ಪ್ರಶ್ನೆಯನ್ನು ಜನ ಅಲ್ಲಲ್ಲಿ ಕೇಳತೊಡಗಿದರು. ಇವರ ಉಸ್ತಾದರುಗಳಲ್ಲೊಬ್ಬರಾದ ತಾಯಕ್ಕೋಡ್ ಅಬ್ದುಲ್ಲಾ ಮುಸ್ಲಿಯಾರ್ ಅದಾಗಲೇ ಮಲಪ್ಪುರಂ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿಯಾಗಿದ್ದರು. ಅಲ್ಲಿ ಖಾಝಿಯಾಗಿದ್ದವರನ್ನು ಇಲ್ಲಿ ಸಹಾಯಕ ಖಾಝಿ ಮಾಡುವುದು ಸರಿಯಲ್ಲವಲ್ಲಾ..?
ಉಳಿದವರು ಆ ಜವಾಬ್ದಾರಿಯುತ ಹುದ್ದೆಗೆ ಉತ್ಸುಕರಾಗಿರಲಿಲ್ಲ.ಯಾಕೆಂದರೆ ತಾಜುಲ್ ಉಲಮಾರಿಗೆ ಸಮುದಾಯದ ಮೇಲಿರುವ ನಿಯಂತ್ರಣವನ್ನು ತಮಗೂ ಸಾಧಿಸಲು ಸಾಧ್ಯವೇ ಎಂಬ ಅಳುಕು ಬೇರೆ ಉಲಮಾಗಳಲ್ಲಿ ಇತ್ತು. ತಾಜುಲ್ ಉಲಮಾರ ಮರಣಾನಂತರ ಸಹಜವಾಗಿಯೇ ಖಾಝಿ ಸ್ಥಾನ ಕೂರತ್ ತಂಙಳ್ರಿಗೆ ಬಂತು. ಆದರೆ ಅವರು ನೂರಾರು ಜಮಾಅತ್ಗಳ ಖಾಝಿಯಾಗಿದ್ದರೂ ತನ್ನ ಅದೇ ಸರಳತೆಯನ್ನು ಮುಂದುವರಿಸಿದ್ದರು. ಅವರಿಗೆ ಪ್ರಾಪಂಚಿಕ ಮೋಹಗಳೇ ಇರಲಿಲ್ಲ. ಸತ್ಯವನ್ನು ಸಾರ್ವಜನಿಕವಾಗಿ ದಿಟ್ಟವಾಗಿ ಹೇಳುವ ಅವರ ಸ್ವಭಾವ ಅನೇಕರಿಗೆ ಕಸಿವಿಸಿ ಉಂಟು ಮಾಡುತ್ತಿತ್ತು.
ದೀನನ್ನು ವ್ಯಾಪಾರದ ಸರಕಿನಂತೆ ಮಾಡುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತಾ ಬಂದರು. ಉಳ್ಳಾಲದಲ್ಲಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಮಾಸಿಕ ಸ್ವಲಾತ್ ಮಜ್ಲಿಸ್ಗೆ ಜನ ಪ್ರವಾಹದಂತೆ ಹರಿದು ಬರುತ್ತಿದ್ದರು. ಸಾಮಾನ್ಯವಾಗಿ ಮಜ್ಲಿಸ್ಗಳಿಗೆ ಮಹಿಳೆಯರು ಬಂದರೆ ಹರಕೆ ಹರಿದು ಬರುತ್ತದೆ. ಆದರೆ ಮಹಿಳೆಯರು ಪುಟ್ಟ ಪುಟ್ಟ ಮಕ್ಕಳನ್ನು ಹಿಡ್ಕೊಂಡು ಜನಜಾತ್ರೆಯಲ್ಲಿ ಬರುವ ಕಷ್ಟ ಬೇಡವೆಂದು ನೀವು ನೀವಿದ್ದಲ್ಲೇ ಸ್ವಲಾತ್ ಹೇಳಿದರೆ ಸಾಕು ಎಂದರು.
ಅಲ್ಲಲ್ಲಿ ತೆರೆಯುವ ಮಹಿಳಾ ಶರೀಅತ್ ಕಾಲೇಜುಗಳ ಬಗ್ಗೆ ಅವರಿಗೆ ಸ್ಪಷ್ಟ ವಿರೋಧವಿತ್ತು. ಅವರ ವಿರೋಧ ಮಹಿಳಾ ಶಿಕ್ಷಣಕ್ಕಲ್ಲ. ಏಳನೇ ಕ್ಲಾಸ್ ಮದ್ರಸಾ ಕಲಿತು ನಂತರದ ವಿದ್ಯೆಯನ್ನು ಶರೀಅತ್ ಎಂದು ಅಷ್ಟು ಹಗುರವಾಗಿಸಬಾರದು ಎನ್ನುವುದು ಅವರ ನಿಲುವಾಗಿತ್ತು. ಶರೀಅತ್ ಎಂದರೆ ಇಸ್ಲಾಮೀ ಕಾನೂನು ಶಾಸ್ತ್ರ. ಅದು ಇವರೆನಿಸಿದಷ್ಟು ಹಗುರವಾದುದಲ್ಲ. ಅದು ಅತ್ಯಂತ ಆಳವಾದ ಅಧ್ಯಯನ ಬಯಸುತ್ತದೆ.ಇವರು ಕಲಿಸುವ ಫ್ರೌಡ ಮದ್ರಸಾ ಶಿಕ್ಷಣವನ್ನೇ ಶರೀಅತ್ ಎನ್ನುವುದೆಷ್ಟು ಸರಿ..? ಏಳನೇ ಕ್ಲಾಸ್ ಮದ್ರಸಾ ಕಲಿತು ಮೂರು ವರ್ಷ ಶರೀಅತ್ ಕಲಿತು ಅದರಲ್ಲಿ ಪರಿಣತಿ ಪಡೆಯುವುದೆಂದರೆ ಮಕ್ಕಳಾಟಿಕೆಯೇ..? ಅದು ಇಸ್ಲಾಮೀ ಕಾನೂನು ಶಾಸ್ತ್ರವನ್ನು ಗೇಲಿ ಮಾಡುವಂತಹದ್ದು.ಶರೀಅತ್ ಕಲಿಕೆಗೆ ಗಟ್ಟಿಯಾದ ಅಡಿಪಾಯ ಬೇಕಾಗುತ್ತದೆ.
ಕೂರತ್ ತಂಙಳ್ ಸರ್ಜರಿಗಳನ್ನು ವಿರೋಧಿಸಿ ಜನರನ್ನು ಅಪಾಯಕ್ಕೆ ತಳ್ಳುತ್ತಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡಿದ್ದೂ ಇದೆ. ವಾಸ್ತವದಲ್ಲಿ ಅವರು ಆಧುನಿಕ ವೈದ್ಯಕೀಯ ಶಾಸ್ತ್ರದ ವಿರೋಧಿಯಾಗಿರಲಿಲ್ಲ. ಅಗತ್ಯವಿಲ್ಲದೇ ಜನರ ಹೊಟ್ಟೆ ಬಗೆದು ದುಡ್ಡು ಕಮಾಯಿಸುವ ವೈದ್ಯಕೀಯ ದರೋಡೆಯ ಬಗ್ಗೆ ಅವರಿಗೆ ವಿರೋಧವಿತ್ತು.
ವೈದ್ಯರು ಅವಧಿಗೆ ಬಹಳ ಮುಂಚೆಯೇ ಸಿಸೇರಿಯನ್ ಹೆರಿಗೆ ಮಾಡುವುದರ ಬಗ್ಗೆ ಅವರಿಗೆ ಸ್ಪಷ್ಟ ವಿರೋಧವಿತ್ತು.ಅದೊಂದು ದಂಧೆ ಎನ್ನುತ್ತಿದ್ದರು.ಕೊನೆಯ ಕ್ಷಣದಲ್ಲಿ ಅನ್ಯ ದಾರಿಯಿಲ್ಲದಾದಾಗ ಸಿಸೇರಿಯನ್ ಮಾಡುವುದೇನೋ ಸರಿ. ಅವರು ಸಿಸೇರಿಯನ್ ಬೇಡ ನಾರ್ಮಲ್ ಹೆರಿಗೆಯೇ ಆಗುತ್ತೆ ಎಂದು ಸಾವಿರಾರು ವೈದ್ಯಕೀಯ ದರೋಡೆಯನ್ನು ತಪ್ಪಿಸಿದ್ದಿದೆ. ಕ್ಯಾನ್ಸರ್ ಕೊನೆಯ ಹಂತದಲ್ಲಿ ಸರ್ಜರಿ ಮಾಡಿಸಿದರೆ ದುಡ್ಡೂ ವ್ಯರ್ಥ, ಫಲಿತಾಂಶವಂತೂ ಸಿಗುವುದಿಲ್ಲ.ಉಲ್ಬಣಗೊಂಡ ಕ್ಯಾನ್ಸರ್ಗೆ ಸರ್ಜರಿ ಮಾಡಿ ರೋಗಿಯನ್ನು ಮತ್ತಷ್ಟು ನೋವಿಗೆ ತಳ್ಳಬೇಡಿ ಎನ್ನುತ್ತಿದ್ದರು.
ಅವರ ಜೊತೆ ಯಾರು ಬೇಕಾದರೂ ನೇರವಾಗಿ ಮಾತನಾಡಬಹುದಿತ್ತು. ಅದೆಷ್ಟೋ ವಿಧವೆಯರು, ಬಡ ಮಹಿಳೆಯರು ದೂರವಾಣಿ ಮೂಲಕ ಮಾತನಾಡಿ ತಮ್ಮ ಸಾಂಸಾರಿಕ ಸಮಸ್ಯೆಗೆ ಪವಿತ್ರ ಖುರ್ಆನ್ ಆಧಾರಿತ ಪರಿಹಾರ ಕಂಡುಕೊಳ್ಳುತ್ತಿದ್ದರು.
ಶರಣರ ಬದುಕನ್ನು ಮರಣದಲ್ಲಿ ಕಾಣು ಎಂಬ ಮಾತೊಂದಿದೆ.ಅದನ್ನು ನಿನ್ನೆ ಎಟ್ಟಿಕ್ಕುಳಂ, ಕಾಸರಗೋಡು, ಉಳ್ಳಾಲ ಮತ್ತು ಕೂರತ್ನಲ್ಲಿ ಕಾಣಲು ನಮಗೆಲ್ಲಾ ಸಾಧ್ಯವಾಯಿತು.
-ಇಸ್ಮತ್ ಪಜೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.