(www.vknews.in) : ಇಂದು ಹನಿಮೂನ್ನಲ್ಲಿ ಮಿಂದೇಳುವಾಗ, ಬರೀ ದೂರದ ರಾಜ್ಯಗಳ ಪ್ರೇಕ್ಷಣೀಯ ಸ್ಥಳಗಳನ್ನು ಕಂಡು ಮಜಾ ಉಡಾಯಿಸಿ, ಸೆಲ್ಫಿಗಳ ರಾಶಿಗಳೊಂದಿಗೆ ಹಿಂದಿರುಗುತ್ತಾರೆಯೇ ಹೊರತು, ಯಾವುದೇ ಮೌಲ್ಯಗಳನ್ನು ಕಲಿತಿರುವುದಿಲ್ಲ. ನಿಜವಾಗಿ ಹನಿಮೂನ್ ಎಂಬುದು ಪರಸ್ಪರ ಹತ್ತಿರದಿಂದ ಅರಿಯಲು, ಕಲಿಯಲು ಒಂದವಕಾಶವಷ್ಟೇ. ಹಾಗಂತ ಪ್ರತಿಯೊಂದು ಜೋಡಿಗಳು ದೂರದ ರಾಜ್ಯಗಳಿಗೆ ಸುತ್ತಾಡಿ ಬರಬೇಕೆಂಬುದು ಕಡ್ಡಾಯವೇನೂ ಅಲ್ಲ. ಅದು ಮದುವೆಯ ಭಾಗವೂ ಅಲ್ಲ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಊರಲ್ಲೋ ಅಥವಾ ಸಂಬಂಧಿಕರ ಮನೆಗೆ ಭೇಟಿ ನೀಡುವುದೋ ಮಾಡ ಬಹುದು. ಅದು ಪರಸ್ಪರರ ನಡೆ, ನುಡಿಗಳನ್ನು ಅರಿತು ಜತೆಗೂಡಿ ಬಾಳಲು ಇಂಬು ನೀಡುತ್ತದೆ. ನೋವು, ನಲಿವುಗಳನ್ನು ಹಂಚಲು ಸುಲಭವಾಗುವುದು.
ಜೋಡಿಗಳು ತಂತಮ್ಮ ಮನೆಯವರ ನಡೆ, ಸ್ವಭಾವದ ಕುರಿತು ಕೇಳಿ ಅರಿಯಬೇಕು. ಅದಕ್ಕೆ ತಕ್ಕಂತೆ ಸುಧಾರಿಸಿ ಬದುಕು ಮುಂದಕ್ಕೊಯ್ಯಬೇಕು. ಆಕೆ ಆ ಮನೆಗೆ ಬಂದ ಬಳಿಕ ಕೌಟುಂಬಿಕ ಸಂಬಂಧಗಳೆಲ್ಲವೂ ಹಾಳಾಯಿ ತೆಂಬ ಆಪಾದನೆ ಬಾರದಂತೆ ಸೂಕ್ಷ್ಮತೆ ಪಾಲಿಸಬೇಕು. ಅಲ್ಲಿ ಸೇವೆ ಮಾಡುವುದಕ್ಕೆ ಮೊದಲೇ ಅಧಿಕಾರ ಚಲಾಯಿಸಬಾರದು. ಕುಟುಂಬದ ಪ್ರೀತಿ ಗಳಿಸಲು ಸಾಧ್ಯವಾಗಬೇಕು. ನಾವು ಯಾರದ್ದೇ ಸಂಬಂಧಗಳನ್ನು ಜೋಡಿಸುವವರೇ ಹೊರತು ಕಡಿಯುವವರಲ್ಲ.
ನಮ್ಮ ಗುಣನಡತೆ, ಚಾರಿತ್ರ್ಯ ತೆರೆದ ಪುಸ್ತಕದಂತಿರಬೇಕು. ಪತಿಯ ಆರ್ಥಿಕ ಸ್ಥಿತಿಗತಿಯ ವಿಲೇವಾರಿಯೂ ನಡೆಯಬೇಕು. ಪತಿ ತನ್ನ ಆದಾಯ, ಸಾಮರ್ಥ್ಯಗಳ ಕುರಿತು ಬಾಳ ಸಂಗಾತಿಗೆ ನೈಜ ಮಾಹಿತಿ ನೀಡಬೇಕೇ ಹೊರತು, ಇಲ್ಲದ್ದನ್ನೆಲ್ಲ ಬೊಗಳೆ ಬಿಟ್ಟು, ನಂತರ ಖೇದಿಸುವಂತಾಗಬಾರದು.
ಗಂಡ ಸಾಲದ ಉರುಳಿಗೆ ಸಿಲುಕಿ ಕೊರಳೊಡ್ಡಿದರೆ, ಅದರ ನಷ್ಟ ಅನುಭವಿಸುವುದು ಆತ ಮಾತ್ರವಲ್ಲ, ಅದು ಇಡೀ ಕುಟುಂಬವನ್ನು ಬಾಧಿಸುತ್ತದೆ. ಆದ್ದರಿಂದ ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಮೌಲ್ಯವನ್ನು ರೂಢಿಸಿಕೊಳ್ಳಬೇಕು. ಯಾರದ್ದೋ ಐಷಾರಾಮಿ ಬದುಕು, ಅರಮನೆ ಕಂಡು ನಾವು ಯಾವಾಗ ಆಕಾಶಕ್ಕೇರುವುದು ಎಂಬ ಮೋಹ ಬೇಡ. ಬದುಕು ಸರಳವಾಗಿರಲಿ. ಇನ್ನೊಬ್ಬರ ಆದಾಯ, ಐಷಾರಾಮಿಯನ್ನು ಕಂಡು ನಮ್ಮ ಬದುಕು ಕಟ್ಟಲು ಸಾಧ್ಯವಿಲ್ಲ. ನಾವು ನಮ್ಮ ಆದಾಯದಿಂದಲೇ ಕೂಡಿ ಬದುಕಬೇಕು. ಹನಿಮೂನ್ನಿಂದ ಮರಳುವಾಗ ಈ ಪಾಠಗಳನ್ನು ಅಳವಡಿಸಿ, ಪತಿ ಮನೆಯನ್ನು ಶಾಂತಿಯ ಬೀಡಾಗಿ ಮಾರ್ಪಡಿಸುವ ಸಂಕಲ್ಪ ಕೈಗೊಳ್ಳಬೇಕು.
ಆದರೆ, ಖೇದಕರವೆನ್ನಬೇಕು. ಹನಿಮೂನ್ನಲ್ಲೇ ಜಗಳವಾಡಿ ಬಂದವರಿದ್ದಾರೆ. ಮದುವೆಯ ಉದ್ದೇಶ ಅರಿಯದೆ ಹೋದರೆ ಇದೆಲ್ಲಾ ಸಹಜ. ಹಣ, ಸೌಂದರ್ಯದ ದರ್ಪದಲ್ಲಿ ಬದುಕುವವರಿಂದ ಬೇರೇನು ತಾನೆ ನಿರೀಕ್ಷಿಸಬಹುದು? ಅವರು ಬರೀ ಧಾರವಾಹಿಗಳಲ್ಲಿ ಕಂಡಂತೆ ಬದುಕಲು ಹವಣಿಸುತ್ತಾರೆ. ಕನಸುಗಳನ್ನು ಹೆಣೆಯುತ್ತಾರೆ. ಆದರೆ ಅದು ರೀಲಿನ ಮೇಲಿರುವ ಬಣ್ಣದ ಬದುಕಷ್ಟೆ. ವಾಸ್ತವದ ಬದುಕಲ್ಲಿ ಅವರೂ ಕಾಲುಜಾರಿ ಬೀಳುತ್ತಾರೆ. ಇದನ್ನು ಸುದ್ದಿ ಮಾಧ್ಯಮಗಳಲ್ಲಿ ಧಾರಾಳ ಕಾಣಬಹುದು.
ಆದ್ದರಿಂದ ದಂಪತಿಗಳು ಬರೀ ಬಾಹ್ಯ ಸೌಂದರ್ಯ ನೋಡಿ ಕನಸು ಗಳನ್ನು ಕಟ್ಟಬಾರದು. ಗುಣನಡತೆ, ಸ್ವಭಾವ, ಚಾರಿತ್ರ್ಯ ಬಹು ಮುಖ್ಯವಾದುದು. ಒಟ್ಟಿನಲ್ಲಿ, ಮದುವೆ ಎಂಬುದು ಬರೀ ಕನಸುಗಳ ಮೂಟೆಗಳಲ್ಲ. ಭ್ರಮೆಗಳಲ್ಲ. ಬಟ್ಟೆ, ಜ್ಯುವೆಲ್ಲರಿ, ಎಂಜಾಯ್ಮೆಂಟ್ಗಳಲ್ಲ. ಅದು ಕೂಡಿ ಬಾಳುವ ಮಹತ್ತರ ಜವಾಬ್ದಾರಿಕೆ. ಪವಿತ್ರ ಕುರ್ಆನ್ ಅಭಿಸಂಭೋದಿಸಿದ ಜೋಡಿಗಳು ಅಂದರೆ ಅದು.
ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.