(www.vknews.in) ; ಮೊದಲೇ ಹೇಳ್ತೇನೆ; ನಾನೊಬ್ಬ ಸಾಮಾನ್ಯ ಮನುಷ್ಯ. ಸ್ಥಿತಪ್ರಜ್ಞೆಗೆ ತಲುಪಿದ ಮಹಾತ್ಮನಲ್ಲ. ತನ್ನ ಕೃತಿಯನ್ನು ನಾಲ್ಕು ಜನ ಮೆಚ್ಚುವುದಾದರೆ ಅದುವೇ ದೊಡ್ಡ ಸಾರ್ಥಕ್ಯವಾಗಿ ಕಾಣುವುದು ಕಲಾವಿದನೊಬ್ಬನ ಸಹಜ ಗುಣ ಹಾಗೂ ಅವನ ಹಕ್ಕು. ಅದನ್ನು ನೀವು ಹೆಮ್ಮೆ ಅನ್ನುವುದಾದರೆ ಆ ಹೆಮ್ಮೆಯಿಂದಲೇ ಹೇಳ್ತೇನೆ; ಕೆ. ಸುಬ್ರಹ್ಮಣ್ಯಂ ರಂತಹ ಪ್ರಸಿದ್ಧ ಹಾರ್ಟ್ ಸ್ಪೆಶಲಿಸ್ಟ್ ಡಾಕ್ಟರ್ ಕೂಡಾ ನನ್ನ ಎರಡು ವರ್ಷಗಳ ” ಶುಭ ಮುಂಜಾನೆ” ಯನ್ನು ಸ್ಟಾಕ್ ಇಟ್ಟುಕೊಂಡಿದ್ದಾರೆಂದರೆ ಅದು ನನ್ನಂತಹ ವಿನೀತ, ಪುಟ್ಟ ಕಲಾವಿದನಿಗೆ ಸಲ್ಲುವ ದೊಡ್ಡದಾದ ಪುರಸ್ಕಾರವಾಗಿದೆ. ಸುರತ್ಕಲ್ ಮುಕ್ಕದಲ್ಲಿ ಶ್ರೀನಿವಾಸ್ ಮೆಡಿಕಲ್ ಸಯನ್ಸ್ & ರಿಸರ್ಚ್ ಸೆಂಟರ್ ನ ಪ್ರೊಫೆಸರ್ & HOD ಆಗಿರುವ ಇವರು ರವಿವಾರವೊಂದು ಬಿಟ್ಟರೆ ಉಳಿದ ಎಲ್ಲಾ ದಿನಗಳಲ್ಲೂ ಸಂಜೆ 5 ರಿಂದ ರಾತ್ತಿ 8 ರ ತನಕ ಮಂಗಳೂರು ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ಸಮೀಪದ ಜಯಶ್ರೀ ಹಾಸ್ಪಿಟಲ್ ನಲ್ಲಿ ಬ್ಯುಝಿಯಾಗಿರುತ್ತಾರೆ.
” ನಿಮ್ಮ ಶುಭ ಮುಂಜಾನೆಯನ್ನು ದಿನಾಲೂ ಬಹಳ ಆಸಕ್ತಿಯಿಂದ ನೋಡಿ ಸ್ಟಾಕ್ ಇಟ್ಟುಕೊಳ್ಳುತ್ತಿದ್ದೇನೆ, ಬಹಳ ಅರ್ಥವತ್ತಾದ ವಾಕ್ಯಗಳು, ಆದರೆ ನಿಮಗೆ ಮೆಚ್ಚುಗೆ ಹೇಳುವಷ್ಟು ಪುರುಸೊತ್ತು ನನಗೆ ಇರುವುದಿಲ್ಲ, ನನ್ನ ಬ್ಯುಸಿ ನಿಮಗೆ ಗೊತ್ತೇ ಇದೆಯಲ್ಲ” ಎಂದು ಅವರು ನನ್ನಲ್ಲಿ ಖುದ್ದಾಗಿ ಹೇಳಿದ್ದು ಅದು ನೂರಕ್ಕೆ ನೂರು ಸತ್ಯವಾಗಿತ್ತು. ಕಳೆದ ಐದು ವರ್ಷಗಳಿಂದ ಅವರನ್ನು ಬಲ್ಲವನಾಗಿರುವುದರಿಂದ ಅವರು ಎಷ್ಟು ಬ್ಯುಸಿಯಲ್ಲಿರುತ್ತಾರೆಂಬುದು ನನಗೆ ಗೊತ್ತು.
ಐದು ವರ್ಷಗಳ ಹಿಂದೆ ನನ್ನ ಮಾತೃಶ್ರೀಯವರಿಗೆ ಒಂದು ಹೃದಯ ಸಂಬಂಧಿ ಕಾಯಿಲೆಗೆ ಈ ಡಾಕ್ಟರ್ ಟ್ರೀಟ್ ಕೊಟ್ಟಂದಿನಿಂದ ನಾನು ಪರಿಚಯ ಬೆಳೆಸಿಕೊಂಡಿದ್ದೆ. ನಮ್ಮ ಅಥವಾ ನಮ್ಮವರಿಗೆ ಟ್ರೀಟ್ ಕೊಡುವ ವೈದ್ಯರುಗಳು ನಮ್ಮ ಜೀವನದಲ್ಲಿ ಹಲವರಿರುತ್ತಾರೆ. ಕಾಯಿಲೆ ಗುಣಮುಖವಾಗುವ ತನಕ ರೋಗಿ- ವೈದ್ಯ ಎಂಬ ಒಂದು ಪಾರ್ಮಲ್ ಗೆಳೆತನ ಬೆಳೆದಿರುತ್ತದೆ. ಮತ್ತೆ ಅದು ಮರೆತು ಹೋಗುತ್ತದೆ. ಆದರೆ ಈ ವೈದ್ಯರನ್ನು ಹಾಗೆ ಮರೆಯದೆ ಪಾರ್ಮಾಲಿಟಿ ಮೀರಿ ಆತ್ಮೀಯ ಸಂಬಂಧವನ್ನು ನಾನು ಉಳಿಸಿಕೊಳ್ಳಲು ಕಾರಣ, ಅವರ ನಿರ್ಮಲ, ಸಹಜ ಸ್ವಭಾವ ಗುಣವಾಗಿತ್ತು. ಅವರ ಒಡನಾಟದ ಮಾಧುರ್ಯದಿಂದಲೇ ರೋಗಿಗಳ ಅರ್ಧ ರೋಗ ವಾಸಿಯಾಗುತ್ತದೆ ಎಂದು ನನಗನ್ನಿಸುತ್ತದೆ.
ಆ ಪರಿಚಯದ ಆಧಾರದಲ್ಲಿ ಎರಡು ವರ್ಷಗಳ ಹಿಂದಿನಿಂದ ನನ್ನ ” ಶುಭ ಮುಂಜಾನೆ” ಯನ್ನು ಅವರಿಗೆ ಕಳಿಸಿಕೊಡತೊಡಗಿದ್ದೆ. ನೋಡಲಿ, ಬಿಡಲಿ ಕಳಿಸೋದನ್ನು ಕಳಿಸೋಣ ಎಂಬ ಭಾವದಲ್ಲಿ ಮೊಬೈಲ್ ನಲ್ಲಿರುವ ಎಲ್ಲಾ ಕಾಂಟೆಕ್ಟ್ ನಂಬರ್ ಗಳಿಗೆ ಸಗಟಾಗಿ ಕಳಿಸುವ ಕೂಟದಲ್ಲಿ ಪ್ರಸ್ತುತ ವೈದ್ಯರಿಗೂ ಅದು ಹೋಗುತ್ತಿತ್ತು ಎಂದು ಹೇಳುವುದೇ ಸರಿ. ಬ್ಯುಝಿಯಲ್ಲಿರುವವರು ನೋಡ್ತಾರೆಂದೋ ನೋಡಿದರೂ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆಂದೋ ನಿರೀಕ್ಷೆ ನನಗಿರಲಿಲ್ಲ. ಆದರೆ ಕೆಲವು ಅಧಿಕಾರಿಗಳು, ಡಾಕ್ಟರ್, ಇಂಜಿನಿಯರ್, ಸಾಹಿತಿ, ಕಲಾವಿದರು ಕೂಡಾ ಮೆಚ್ಚುಗೆ ಸೂಚಿಸತೊಡಗಿದಾಗಲೇ ನನ್ನ “ಶುಭ ಮುಂಜಾನೆ” ಎಲ್ಲರಿಂದಲೂ ಗಮನಿಸಲ್ಪಡುತ್ತಿದೆ ಎಂಬ ಅರಿವು ನನಗೆ ಮೂಡಿದ್ದು.
ಇಂದು ನನ್ನ ಮಾತೃಶ್ರೀಯವರಿಗೆ ಮಗದೊಮ್ಮೆ ಹೃದಯ ಸಂಬಂಧಿ ಟೆಸ್ಟ್ ಅಗತ್ಯವಾಗಿ ಕಂಡು ಬಂದಾಗ ಡಾಕ್ಟರ್ ಕೆ. ಸುಬ್ರಹ್ಮಣ್ಯಂ ಅವರಿಗೆ ಕಾಲ್ ಮಾಡಿದೆ. ಕಾಲ್ ಎತ್ತಿದ ಕೂಡಲೇ ಶುಭ ಮುಂಜಾನೆ ಸರ್ ಅನ್ನಬೇಕೆ? ನನಗೆ ನಿಜಕ್ಕೂ ರೋಮಾಂಚನವಾಗಿತ್ತು! ಮಾತೃಶ್ರೀಯವರನ್ನು ಕರಕೊಂಡು ಹೋದಾಗ ನಮಗೆ ಆದ್ಯತೆ ಕೊಟ್ಟು ಸೂಕ್ತ ಚಿಕಿತ್ಸೆ ಕೊಡಿಸಿದರಲ್ಲದೆ ” ಶುಭ ಮುಂಜಾನೆ” ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎರಡು ವರ್ಷಗಳಿಂದ ಅದನ್ನು ಸ್ಟಾಕ್ ಇಟ್ಟು ಕೊಂಡು ಬಂದಿದ್ದೇನೆ, ಬಹಳ ಅರ್ಥ ಪೂರ್ಣ ವಾಕ್ಯಗಳು ಅಂದರು.
ಟ್ರೀಟ್ ಮೆಂಟ್ ಗೆ ಅವರು ಶುಲ್ಕ ಪಡಕೊಳ್ಳದಿರುವಾಗ ಹಣ ಉಳಿತಾಯವಾಯಿತು ಎಂಬ ಸಂತೋಷವಲ್ಲ ನನಗುಂಟಾದುದು. ಯಾವುದೇ ಕಲಾವಿದ, ಬರಹಗಾರ ತನ್ನ ಸೃಷ್ಟಿಗೆ ದೊಡ್ಡ ವ್ಯಕ್ತಿತ್ವಗಳಿಂದಲೂ ಪರಿಗಣನೆ ದೊರೆತಾಗ ಉಂಟಾಗುವ ಸಹಜವಾದ ಸಂತೋಷ ಉಂಟಾಯಿತು. ಅದು ನನ್ನ ಸಾಹಿತ್ಯ ಸೇವೆಗೆ ಅವರು ನೀಡಿದ ಪುರಸ್ಕಾರ ಎಂದೆನಿಸಿತು. ಚಿತ್ರ ಕಲಾವಿದನು ತನ್ನ ಚಿತ್ರವನ್ನು ಹತ್ತು ಜನ ಕಂಡು ಮೆಚ್ಚಬೇಕೆಂದು ಬಯಸುವುದು, ಮೆಚ್ಚುಗೆ ದೊರೆತರೆ ಧನ್ಯತಾ ಭಾವ ತಳೆಯುವುದು ಸ್ವಾಭಾವಿಕ. ಅದು ಸ್ವಪ್ರತಿಷ್ಠೆಯಲ್ಲ. ಕಲಾವಿದನ ಹಕ್ಕು. ಯಾವುದೇ ” ರಚನೆ” ಇರಲಿ ಅದನ್ನು ಹತ್ತು ಮೆಚ್ಚಬೇಕೆಂತಲೇ ರಚನೆ ಮಾಡುವುದು. ಒಬ್ಬ ಉತ್ತಮ ಗಾಯಕ ಪಬ್ಲಿಕ್ ನಲ್ಲಿ ಹಾಡುವುದೇ ತನ್ನ ಹಾಡು ಜನಮೆಚ್ಚುಗೆ ಪಡೆಯಬೇಕು ಎಂಬ ಉದ್ದೇಶದಿಂದಲೇ. ಕವಿ, ಸಾಹಿತಿಗಳ ಮನದಾಳವೂ ತಥೈವ. ಹತ್ತು ಜನರ ಮೆಚ್ಚುಗೆಯೇ ಅವನಿಗೆ ಸಾರ್ಥಕ್ಯ. ಜನಸ್ಪಂಧನವೇ ಅವನಿಗೆ ಇಂಧನ.
-ಡಿ. ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.