(www.vknews.in) : ಅಥಾಉಲ್ಲಾಹ್ ಎಂಬ ಪದದ ಅರ್ಥವೇ ಅಲ್ಲಾಹನ ಗಿಫ್ಟ್ ಎಂದಾಗಿದೆ. ನಿಜಕ್ಕೂ ಈ ಹೆಸರಿಗೆ ಅನ್ವರ್ಥವಾಗಿ ಸರ್ವ ಕ್ಷೇತ್ರಗಳಲ್ಲಿ ಒಂದು ದೈವಿಕ ಉಡುಗೊರೆಯಾಗಿ ವಿರಾಜಮಾನರಾಗಿರುವ ಉದ್ಯಾವರದ ಸಯ್ಯಿದ್ ಅಥಾವುಲ್ಲಾಹ್ ತಂಙಳ್ ರವರು ತನ್ನ ವ್ಯಕ್ತಿತ್ವ ಹಾಗೂ ಸಾಮಾಜಿಕ ಸೇವೆಯಿಂದ ಜನಾನುರಾಗಿಯಾಗಿದ್ದಾರೆ.
ಕರ್ನಾಟಕದ ಗಡಿಯಂಚಿನ ಮಂಜೇಶ್ವರ, ಉದ್ಯಾವರದಲ್ಲಿ ಸಯ್ಯಿದ್ ಬದ್ರುದ್ದೀನ್ ಕೋಯಮ್ಮ ತಂಙಳ್ ಹಾಗೂ ನಫೀಸಾ ಹಜ್ಜುಮ್ಮ ದಂಪತಿಯ ಪುತ್ರನಾಗಿ ಜನಿಸಿದ ಇವರು ತನ್ನ ಪರಂಪರಾಗತ ಅಹ್ಲುಬೈತಿನ ಪರಿಶುದ್ಧಿಯನ್ನು ಉಳಿಸಿಕೊಂಡೇ ಲೌಕಿಕ ಶಿಕ್ಷಣ ಕ್ಷೇತ್ರದಲ್ಲಿ ಉನ್ನತಿಗೇರಿದ್ದರು. ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಪಿ. ಯು. ಸಿ. ಓದುತ್ತಿದ್ದಾಗ ಇವರ ತಂದೆಯವರಾದ ಸಯ್ಯಿದ್ ಕೋಯಮ್ಮ ತಂಙಳ್ ವಫಾತಾದರು. ಪರಂಪರಾಗತ ಆಧ್ಯಾತ್ಮಿಕ ಚಿಕಿತ್ಸೆಯಲ್ಲಿ ಕೇರಳ – ಕರ್ನಾಟಕದಲ್ಲಿ ಪ್ರಸಿದ್ಧರಾಗಿದ್ದ ಆ ತಂದೆಯವರ ಒಂದು ಮನದಿಂಗಿತ ತನ್ನ ಒಬ್ಬ ಪುತ್ರನಾದರೂ ಭೌತಿಕ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದಾಗಿತ್ತು. ಮುಂಬರುವ ಕಾಲದಲ್ಲಿ ಧಾರ್ಮಿಕ, ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಬೇಕಾದರೆ ಲೌಕಿಕ ಶಿಕ್ಷಣದ ಅಗತ್ಯವಿದೆಯೆಂಬ ದೀರ್ಘದೃಷ್ಟಿಯನ್ನು ಸಯ್ಯಿದ್ ಕೋಯಮ್ಮ ತಂಙಳ್ ರವರು ಹೊಂದಿದ್ದರು.
ಇದು ಅವರ ಪ್ರಬುದ್ಧ ಚಿಂತನೆಶೀಲತೆಗೆ ಸಾಕ್ಷಿಯಾಗಿತ್ತು. ತಂದೆಯವರಾದ ಸಯ್ಯಿದ್ ಬದ್ರುದ್ದೀನ್ ಕೋಯಮ್ಮ ತಂಙಳ್ ರವರು 1986 ರಲ್ಲಿ ವಫಾತಾಗಿದ್ದರು. ತಾಯಿ ನಫೀಸಾ ಹಜ್ಜುಮ್ಮ ವಫಾತಾಗಿ ನಾಲ್ಕು ವರ್ಷಗಳಾದುವಷ್ಟೆ. ವಫಾತಾದ ತನ್ನ ತಂದೆಯವರ ಅಭಿಲಾಷೆಯನ್ನು ಪೂರೈಸಲೇ ಬೇಕು ಎಂದು ಪಣ ತೊಟ್ಟ ಸುಪುತ್ರ ಸಯ್ಯಿದ್ ಅಥಾಉಲ್ಲಾಹ್ ತಂಙಳ್ ರವರು ಸತತ ಪರಿಶ್ರಮದಿಂದ ಓದಿದರು. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಮುಗಿಸಿ ಕೊಣಾಜೆ ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಪ್ರಥಮ ರಾಂಕ್ ನೊಂದಿಗೆ ಎಂ. ಎ. ಪದವಿಗಳಿಸಿದರು. ಸೈಂಟ್ ಅಲೋಶಿಯಸ್ ನಿಂದಲೂ “ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್” ಪುರಸ್ಕಾರ ಪಡೆದಿದ್ದ ತಂಙಳ್ ರವರಿಗೆ ಎಂ. ಎ. ತೇರ್ಗಡೆಯಾದಾಗ ಅದೇ ಅಲೋಶಿಯಸ್ ಕಾಲೇಜಿನಲ್ಲಿ ಲೆಕ್ಚರರ್ ಆಗುವ ಅವಕಾಶ ಕೂಡಿ ಬಂದಿತ್ತು.
ಆದರೆ ಅಥಾವುಲ್ಲಾಹ್ ತಂಙಳ್ ರವರು ತನ್ನ ಮುಂದಿನ ಸೇವೆ ಬರೀ ಲೌಕಿಕತೆಗೆ ಸೀಮಿತವಾಗದೆ ಧಾರ್ಮಿಕ- ಲೌಕಿಕ ಸಮನ್ವಯಗೊಂಡಿರಬೇಕೆಂಬ ಉದ್ದೇಶ ಹೊಂದಿದ್ದರು. ಆದ್ದರಿಂದ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲಿ ಲೆಕ್ಚರರ್ ಹುದ್ದೆ ವಹಿಸಿಕೊಂಡು ಅಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಆಧ್ಯಾತ್ಮಿಕ ಚಿಕಿತ್ಸೆಯ ಮೂಲಕ ಜನಸೇವೆ ಸಲ್ಲಿಸುತ್ತಾ ಬಂದಿರುವ ಪವಿತ್ರ ಅಹ್ಲು ಬೈತ್ ಪರಂಪರೆಯವರಾದ ಅಥಾವುಲ್ಲಾಹ್ ತಂಙಳ್ ರವರು ಆ ಪರಂಪರೆಯನ್ನು ಮುಂದುವರಿಸಿದರು. ಇದೂ ಕೂಡಾ ಒಂದು ಮಹತ್ವದ ಸೇವೆಯಾಗಿದೆ. ಬೇರೆ ಯಾವುದರಿಂದಲೂ ಪರಿಹಾರ ಸಿಗದೆ ಆಧ್ಯಾತ್ಮಿಕ ಚಿಕಿತ್ಸೆಯಿಂದ ಮಾತ್ರ ಪರಿಹಾರ ಸಿಗುವ ಹಲವಾರು ಸಮಸ್ಯೆಗಳಿವೆ. ಅಂತಹ ಸಮಸ್ಯೆಗಳಿಗೆ ಆಧ್ಯಾತ್ಮಿಕ ಚಿಕಿತ್ಸೆ ಲಭ್ಯವಾಗದೆ ಹೋದರೆ ಜನರ ಪರಿಸ್ಥಿತಿ ಹೇಗಾಗಬಹುದು? ಈ ಉದಾತ್ತ ಉದ್ದೇಶದಿಂದ ತನ್ನ ಲೆಕ್ಚರರ್ ಹುದ್ದೆ, ಶೈಕ್ಷಣಿಕ ಸೇವೆಯ ನಡುವೆಯೇ ಪರಂಪರಾಗತ ಆಧ್ಯಾತ್ಮಿಕ ಚಿಕಿತ್ಸೆಯನ್ನು ಸಯ್ಯಿದ್ ಅಥಾವುಲ್ಲಾಹ್ ತಂಙಳ್ ರವರು ಮುಂದುವರಿಸಿದರು. ಅವರ ಈ ಚಿಕಿತ್ಸೆಯು ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಕೇರಳ- ಕರ್ನಾಟಕಗಳಿಂದ ಜನ ಪ್ರವಾಹವೇ ಉದ್ಯಾವರದ ಅವರ ಮನೆಗೆ ಹರಿದು ಬರುವಂತಾಯಿತು.
ಮುಸ್ಲಿಮರು ಮಾತ್ರವಲ್ಲ, ಹಿಂದೂ , ಕ್ರೈಸ್ತರ ಸಮೇತ ಎಲ್ಲಾ ಧರ್ಮೀಯರೂ ಅವರ ಬಳಿಗೆ ಪರಿಹಾರ ಬಯಸಿಕೊಂಡು ಈಗಲೂ ಬರುತ್ತಿದ್ದಾರೆ. ಆಧ್ಯಾತ್ಮಿಕ ಚಿಕಿತ್ಸೆ ಮತ್ತು ಪರಿಹಾರ ನಿರ್ದೇಶನಗಳ ಒತ್ತಡ ಜಾಸ್ತಿಯಾದಾಗ ಅವರು ಹುದ್ದೆಯನ್ನು ತ್ಯಜಿಸಿ ಈ ಸೇವೆಯಲ್ಲೇ ಮುಂದುವರಿಯುವಂತಹ ಪರಿಸ್ಥಿತಿಯುಂಟಾಗಿತ್ತು. ಅವರ ಆಧ್ಯಾತ್ಮಿಕ ಮಾರ್ಗದರ್ಶನದಿಂದ ಸಹಸ್ರಾರು ಸಂತ್ರಸ್ತರು ಉಪಶಮನ ಪಡೆದರು. ಸಹಸ್ರಾರು ಸಮಸ್ಯೆಗಳ ಪರಿಹಾರವಾದುವು.
ಅಚ್ಚರಿಯ ವಿಷಯವೆಂದರೆ ಬಿಡುವಿಲ್ಲದ ತನ್ನ ಈ ಕಾರ್ಯ ಚಟುವಟಿಕೆಯ ನಡುವೆಯೂ ಇನ್ನಿತರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಅವರು ಸಮಯ ಹೊಂದಿಸಿಕೊಂಡದ್ದು. ಇತ್ತೀಚೆಗೆ ಸಿಲ್ವರ್ ಜ್ಯೂಬಿಲಿ ಆಚರಿಸಿದ ಉದ್ಯಾವರದ ಹೆಸರಾಂತ ಸಕಾಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಆರಂಭ ದೆಸೆಯಿಂದ ಇಂದಿನ ವರೆಗೂ ತಂಗಳ್ ರವರು ಹೆಗಲೆಣೆಯಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅದೇ ಪ್ರಕಾರ ಡೆಲ್ಟಾ ಸ್ಕೂಲ್ ಚೆಯರ್ ಮ್ಯಾನ್ ಆಗಿ, ಮಂಜೇಶ್ವರ ಸಂಯುಕ್ತ ಜಮಾಅತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಯುಕ್ತ ಜಮಾಅತಿನ ಇಪ್ಪತ್ತೊಂದು ಜಮಾಅತ್ ನಲ್ಲಿ ಸಲಹೆಗಾರರಾಗಿ, ಸಮಸ್ಯೆಗಳ ಇತ್ಯರ್ಥದಾರರಾಗಿ ಉತ್ತಮ ನಾಯಕತ್ವದ ಛಾಪು ಮೂಡಿಸಿದ್ದಾರೆ.
ಮರ್ಹೂಮ್ ತಾಜುಲ್ ಉಲಮಾರವರ ನಿಕಟವರ್ತಿಯಾಗಿ ಅವರ ಅಪ್ರತಿಮ ಅಭಿಮಾನಿಯಾಗಿ ಬೆಳೆದು ಬಂದಿದ್ದ ಅಥಾವುಲ್ಲಾಹ್ ತಂಙಳ್ ರವರಲ್ಲಿ ಸತ್ಯನಿಷ್ಠೆಯ ವಿಷಯದಲ್ಲಿ ತಾಜುಲ್ ಉಲಮಾರವರ ಅದೇ ನಿಷ್ಠುರ ಗುಣ ಕಂಡು ಬರುತ್ತಿದೆ. ಸತ್ಯದ ವಿಷಯದಲ್ಲಿ ಯಾರೊಂದಿಗೂ ರಾಜಿಗೆ ಸಿದ್ಧರಿಲ್ಲದ, ಯಾರಿಗೂ ಹೆದರದ ತಾಜುಲ್ ಉಲಮಾರವರು ಆ ವಿಷಯದಲ್ಲಿ ಯಾವ ಮುಲಾಜಿಗೂ ಒಳಗಾಗದೆ ನಿಷ್ಠುರವಾಗಿ ವರ್ತಿಸುತ್ತಿದ್ದರು. ಅದೇ ಪ್ರಕಾರ ವೈಯಕ್ತಿಕವಾಗಿ ಬಹಳ ಸೌಮ್ಯ, ಸಾಧು ಸ್ವಭಾವದ ಅಥಾವುಲ್ಲಾಹ್ ತಂಙಳ್ ರವರು ಅಧಾರ್ಮಿಕತೆ, ಢಾಂಬಿಕತೆಯ ವಿರುದ್ಧ ಸಿಡಿದೇಳುತ್ತಾರೆ. ಇದು ಅವರ ಮನದಾಳದ ಈಮಾನ್ ಹಾಗೂ ಧರ್ಮ ನಿಷ್ಠೆಯ ಪ್ರತೀಕವಾಗಿದೆ. ತಾಜುಲ್ ಉಲಮಾರವರನ್ನು ಇವರು ಅದೆಷ್ಟು ಹಚ್ಚಿಕೊಂಡಿದ್ದರೆಂದರೆ ಒಮ್ಮೆ ಇವರು ತಾಜುಲ್ ಉಲಮಾರವರಲ್ಲಿ; ” ನನ್ನನ್ನು ತಾವು ತಮ್ಮ ಮಗನಂತೆ ಕಾಣಬೇಕು, ಅದು ನನ್ನದೊಂದು ಅಭಿಲಾಷೆ ” ಎಂದಿದ್ದರಂತೆ. ಅದಕ್ಕೆ ತಾಜುಲ್ ಉಲಮಾರವರು; ” ನೀವು ನನ್ನ ಮಗನಿಗಿಂತಲೂ ಮಿಗಿಲಾದವರು, ನನ್ನ ಮಗನಿಗಿಂತಲೂ ಹೆಚ್ಚು ಪ್ರೀತಿ ನನಗೆ ನಿಮ್ಮ ಮೇಲಿದೆ ” ಎಂದಿದ್ದರಂತೆ !!
ಇದೀಗ ಸಂತೃಪ್ತ ಜೀವನದಲ್ಲಿರುವ ಸಯ್ಯಿದ್ ಅಥಾವುಲ್ಲಾಹ್ ತಂಙಳ್ ರವರಿಗೆ ಅಲ್ಲಾಹು ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಲೆಂದು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಿದ್ದೇನೆ. ಅವರು ಸದ್ದು ಗದ್ದಲವಿಲ್ಲದೆ ಅನೇಕರಿಗೆ ಅನೇಕ ಸಹಾಯ ಸಹಕಾರಗಳನ್ನು ನೀಡಿದ್ದಾರೆ. ಅವರು ಮಾಡಿದ ಉಪಕಾರವನ್ನು ಯಾರಲ್ಲೂ ಹೇಳಿಕೊಳ್ಳುವುದಿಲ್ಲ, ಪ್ರತ್ಯುಪಕಾರ ಬಯಸುವುದಿಲ್ಲ. ಕನಿಷ್ಠ ಪಕ್ಷ ಒಂದು ಥ್ಯಾಂಕ್ಸ್ ನ್ನು ಕೂಡಾ ಬಯಸದ ಅಕಳಂಕ ನಿಸ್ವಾರ್ಥ ಸೇವೆ ಅವರದ್ದು. ಕರ್ನಾಟಕದ ಹೆಸರಾಂತ ಲೇಖಕ ವಿದ್ವಾಂಸರೊಬ್ಬರ ಮಗಳಿಗೆ ಒಂದು ವರ ಗೊತ್ತು ಪಡಿಸುವ ಮಾತು ಕೊಡುವಾಗ ನಾನೂ ಜೊತೆಗಿದ್ದೆ. ಆ ಮಾತು ಕೊಟ್ಟ ಎರಡೇ ದಿನಗಳೊಳಗೆ ಮಂಗಳೂರಿನ ಪ್ರಸಿದ್ಧ ಹೊಟೇಲ್ ಉದ್ಯಮಿ ಯುವಕನನ್ನು ಉಸ್ತಾದರ ಪುತ್ರಿಗೆ ಗೊತ್ತು ಪಡಿಸಿದ್ದರು. ಇದು ಹತ್ತೊಂಬತ್ತು ವರ್ಷಗಳ ಹಿಂದಿನ ಮಾತು.
ಆ ದಂಪತಿಗಳು ಇಂದು ಮಂಗಳೂರು ನಗರದಲ್ಲಿ ಉತ್ತಮ ಮನೆ ಮಾಡಿಕೊಂಡು ಸುಖವಾಗಿದ್ದಾರೆ. ಇದು ನನ್ನ ಖುದ್ದು ಅನುಭವದಿಂದ ಕಂಡಿದ್ದರಿಂದ ಹೇಳಿದ್ದೇನೆಯೇ ಹೊರತು ಇದೊಂದೇ ಅವರು ಮಾಡಿದ ಪರೋಪಕಾರ ಎಂದರ್ಥವಲ್ಲ, ಇಂತಹ ಅದೆಷ್ಟೋ ವೈವಾಹಿಕ, ಆರ್ಥಿಕ, ಶೈಕ್ಷಣಿಕ, ಮತೀಯ ಭ್ರಾತ್ವತ್ವ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ತಂಙಳ್ ರವರು ಅಪಾರ ಕೊಡುಗೆಗಳನ್ನು ನೀಡಿದ್ದಾರೆ.
ಅಹ್ಲು ಬೈತ್ ವಂಶಜರಾಗಿ, ಜನಾನುರಾಗಿಯಾಗಿ, ವಿದ್ಯಾಸಂಪನ್ನರಾಗಿ ಉನ್ನತ ಸ್ತರದಲ್ಲಿದ್ದರೂ ಅದರ ಬಗ್ಗೆ ಯಾವುದೇ ಭಾವವಿಲ್ಲದ ವಿನಯಸಂಪನ್ನತೆಯು ಅವರ ಶ್ರೇಷ್ಠತೆಗೊಂದು ಹೊನ್ನ ಕಲಶ. ಎಷ್ಟೇ ಕನಿಷ್ಠ ಸಾಮಾನ್ಯನೊಡನೆಯೂ ಆತ್ಮೀಯತೆಯಿಂದ ಬೆರೆಯುವ ಅವರ ಮಧುರ ಬಂಧುರ ಸ್ವಭಾವ ಗುಣ ಅಪ್ರತಿಮ. ಹೆಸರು, ಕೀರ್ತಿ ಅವರನ್ನು ಹುಡುಕಿಕೊಂಡು ಬಂದಿವೆಯೇ ವಿನಾ ಯಾವತ್ತೂ ಅದನ್ನು ಬಯಸಿದವರಲ್ಲ. ಸುನ್ನಿಗಳ ಎರಡೂ ಬಣಗಳವರ ಕಾರ್ಯಕ್ರಮಗಳಲ್ಲೂ ತಂಙಳ್ ರವರು ಆಹ್ವಾನಿತ ಅಥಿತಿಯಾಗಿ ಭಾಗವಹಿಸುತ್ತಾರೆ. ಈ ಬಗ್ಗೆ ಕೇಳಿದರೆ ” ನಾನು ಎರಡೂ ವಿಭಾಗಗಳವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸುನ್ನಿಗಳ ಐಕ್ಯಕ್ಕೆ ನಾಂದಿಯಾಗಲಿ ಎಂದು
ತಾಜುಲ್ ಉಲಮಾ ಮತ್ತು ಎಪಿ ಉಸ್ತಾದರು ಹರಸಿದ್ದಾರೆ” ಎನ್ನುತ್ತಿದ್ದಾರೆ ಸಯ್ಯಿದ್ ಅಥಾವುಲ್ಲಾಹ್ ತಂಙಳ್. ಅಥಾವುಲ್ಲಾಹ್ ತಂಙಳ್ ರವರ ಬಗ್ಗೆ ಬರೆಯುವಾಗ ಮಂಜೇಶ್ವರ ಸಂಯುಕ್ತ ಜಮಾಅತ್ ಸೆಕ್ರಟರಿ ಇಬ್ರಾಹೀಮ್ ಉಮರ್ ಹಾಜಿಯವರ ಬಗ್ಗೆ ಬರೆಯದಿದ್ದರೆ ಈ ಬರಹ ಅಪೂರ್ಣವಾಗುತ್ತದೆ. ಯಾವಾಗಲೂ ತಂಙಳ್ ರವರನ್ನು ನೆರಳಿನಂತೆ ಅನುಸರಿಸಿ ಎಲ್ಲಾ ಕಾರ್ಯಗಳಲ್ಲೂ ಸಹಕಾರ ನೀಡುತ್ತಾ ಬಂದಿರುವ ಇಬ್ರಾಹೀಮ್ ಉಮರ್ ಹಾಜಿಯವರ ಸೇವೆ ಅನನ್ಯ.
ಅವರ ಬಗ್ಗೆ ಬರೆದ ಈ ಬರಹವನ್ನು ಹೊರಹಾಕುವ ಮುನ್ನ ಅವರ ಅನುಮತಿಗಾಗಿ ಕಳುಹಿಸಿ ಕೊಟ್ಟಿದ್ದೆ. ಹೆಸರು, ಪ್ರಶಂಶೆ ಬಯಸದ ಅವರ ಸ್ವಭಾವ ಗೊತ್ತಿರುವುದರಿಂದ ಅವರ ಉತ್ತರವು ಆತಂಕ ಪಟ್ಟಿದ್ದ ಹಾಗೆಯೇ ಇತ್ತು. “ಇದೆಲ್ಲ ಬೇಡ , ಇದಕ್ಕೆ ನಾನು ಅರ್ಹನಲ್ಲ, ಹಾಗೆಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು” ಎಂದಾಗಿತ್ತು ಅವರ ಉತ್ತರ.
ನಿಮ್ಮ ಬದುಕಿನ ಸಾಧನೆ ಇತರರಿಗೆ ಸ್ಪೂರ್ತಿ, ಉತ್ತಮ ವ್ಯಕ್ತಿತ್ವಗಳ ಪರಿಚಯವು ಬೆಳೆದು ಬರುತ್ತಿರುವ ಇಂದಿನ ಪೀಳಿಗೆಯ ಪರಿಸ್ಥಿತಿಯಲ್ಲಿ ಬಹಳ ಅಗತ್ಯ ಎಂದು ನಾನು ಅನೇಕ ಬಾರಿ ಒತ್ತಾಯ ಮಾಡಿದಾಗ ಕೊನೆಗೆ ಒಪ್ಪಿಗೆ ಕೊಟ್ಟರು. ಅಲ್ಲಾಹು ತಆಲಾ ಸಯ್ಯಿದ್ ಅಥಾವುಲ್ಲಾಹ್ ತಂಙಳ್ ಮತ್ತು ಅವರ ಕುಟುಂಬದವರಿಗೆ ಆಯುರಾರೋಗ್ಯ ಕರುಣಿಸಲಿ. ಅವರ ಪವಿತ್ರ ಅಹ್ಲು ಬೈತ್ ಪರಂಪರೆಯ ಬರಕತ್ ನಿಂದ ನಮಗೂ ಅನುಗ್ರಹಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್ .
– ಡಿ.ಐ. ಅಬೂಬಕರ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.