ಮಾಡನ್ನೂರು (www.vknews.in) ; ಇಸ್ಲಾಮ್ ಧರ್ಮದ ಪ್ರತಿಯೊಂದು ಆರಾಧನಾ ಕರ್ಮಗಳು ಜನರ ಗುಣನಡತೆಯನ್ನು ಉತ್ತಮಗೊಳಿಸಲು ತರಬೇತು ನೀಡಿ ಒಳಿತಿಗೆ ಪ್ರೇರಣೆ ನೀಡುವಂತದ್ದು.
ಅದರ ಪ್ರತಿಯೊಂದು ಆಚರಣೆಗಳಲ್ಲಿ ಅತ್ಯುತ್ತಮ ಮಾನವೀಯ ಸಂದೇಶಗಳು ಅಡಕಗೊಂಡಿದೆ.ಉಪವಾಸವೂ ಇದಕ್ಕೆ ಹೊರತಲ್ಲ.ಧಾರ್ಮಿಕ ಕರ್ಮಗಳು ಚೈತನ್ಯಯುಕ್ತವಾಗಿ ಭಕ್ತಿ ಮತ್ತು ಸಾತ್ವಿಕತೆಯನ್ನು ಒಳಗೊಂಡರೆ ಮಾತ್ರ ಅದರಿಂದ ಉದ್ದೇಶಿತ ಗುರಿ ಸಾಧಿಸಬಹುದು.ಬರೀ ಯಾಂತ್ರಿಕ ಆರಾಧನೆಗಳಿಂದ ಇಹ ಪರದಲ್ಲಿ ಏನನ್ನೂ ಸಾಧಿಸಲಿಕ್ಕಾಗದು ಎಂದು ಮಾಡನ್ನೂರು ಖತೀಬ್ ಎಸ್ ಬಿ ದಾರಿಮಿ ಹೇಳಿದ್ದಾರೆ. ಅವರು ಮಾಡನ್ನೂರು ಮಸೀದಿಯಲ್ಲಿ ಜುಮಾ ಖುತುಬಾ ನಿರ್ವಹಿಸಿ ಮಾತನಾಡುತ್ತಿದ್ದರು.
ಒಂದು ಕಡೆ ತಮ್ಮದೇ ಆದ ಲೆಕ್ಕವಿಲ್ಲದಷ್ಟು ಮಸೀದಿ ಮದ್ರಸ ದೀನೀ ಸಂಸ್ಥೆಗಳನ್ನು ಸ್ಥಾಪಿಸಿ ಕೋಟ್ಯಾಂತರ ಹಣ ಖರ್ಚುಮಾಡಿ ಧಾರ್ಮಿಕ ಆಚರಣೆಗಳಲ್ಲಿ ಮುಸ್ಲಿಮರು ಮುಂಚೂಣಿಯಲ್ಲಿದ್ದರೂ ಇನ್ನೊಂದು ಕಡೆ ಕೆಲವು ದಾರಿ ತಪ್ಪಿದ ಯುವಕರಿಂದಾಗಿ ದಿನ ನಿತ್ಯ ಮುಸ್ಲಿಮರು ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಸ್ಲಿಮರೇ ಹೆಚ್ಚಾಗಿರುವ ಕೆಲವೊಂದು ಊರುಗಳಿಂದ ಹೊರ ಬರುತ್ತಿರುವ ವರದಿಗಳು ಸಾಮಾನ್ಯ ಜನರನ್ನು ಭಯಭೀತ ಗೊಳಿಸುವಂತದ್ದು.
ದಿನ ನಿತ್ಯ ಮುಸ್ಲಿಂ ಯುವಕರು ಡ್ರಗ್ಸ್ ಕೇಸುಗಳಲ್ಲಿ ಜೈಲು ಸೇರುತ್ತಿರುವ ಭೀಬತ್ಸ ಘಟನೆಗಳು ಮುಸ್ಲಿಂ ಹೆತ್ತವರನ್ನು,ಸಮುದಾಯದ ಉಲಮಾ ಉಮರಾ ನಾಯಕರನ್ನು ಚಿಂತಿಸುವಂತೆ ಮಾಡುತ್ತಿದೆ. ಇಷ್ಟೆಲ್ಲಾ ಖರ್ಚು ವೆಚ್ಚಗಳು ಮಾಡಿ ಧಾರ್ಮಿಕ ಮಸೀದಿ ಮದ್ರಸಗಳು ಕಾರ್ಯಚರಿಸುತ್ತಿದ್ದರೂ ಉದ್ದೇಶಿತ ಗುರಿ ಸಾಧಿಸಲಿಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಬೇಕಾಗಿದೆ ಎಂದ ಖತೀಬರು ವಿಶೇಷವಾಗಿ ದಕ ಜಿಲ್ಲೆಯ ಬ್ಯಾರಿ ಜನಾಂಗದ ಕೆಲವೇ ಕೆಲವು ಯುವಕರ ಅನಾಗರಿಕ ವರ್ತನೆಯಿಂದಾಗಿ ಇಡೀ ಜಿಲ್ಲೆಗೇ ಕೆಟ್ಟ ಹೆಸರು ಬರುವಂತಾಗಿದೆ. ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ ಗಾಂಜಾ ಮಾಫಿಯಾದ ಕಾರಣದಿಂದಾಗಿ ದೂರದ ಯು ಎ ಇ ಯಲ್ಲಿ ಜಿಲ್ಲೆಯ ಯುವಕರಿಗೆ ವಿಸಾ ನಿರಾಕರಿಸುವಂತಾಗಿದೆ.
ಬೆರಳೆಣಿಕೆಯ ಯುವಕರ ದುರ್ವರ್ತನೆಯಿಂದಾಗಿ ಎಲ್ಲರೂ ಕಷ್ಟ ಅನುಭವಿಸುವಂತಾಗಿದೆ ಎಂದು ಖೇದ ವ್ಯಕ್ತ ಪಡಿಸಿದರು. ಒಂದೂರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದಂತೆ ಇಡೀ ಊರಿನ ಹೆಸರಿಗೆ ಕಳಂಕ ಬರುತ್ತದೆ. ಹಾಗೇ ಕಳಂಕ ಬಂದರೆ ಅದು ಆ ಊರಿನ ಪ್ರತಿಯೊಬ್ಬರನ್ನೂ ಆತಂಕಕ್ಕೆ ದೂಡುತ್ತದೆ. ಊರಿನ ಹೆಸರನ್ನು ಉಳಿಸಿಕೊಳ್ಳುವುದೇ ಇಂದಿನ ಕಾಲದಲ್ಲಿ ದೊಡ್ಡ ಸಾಧನೆ ಎಂದ ಖತೀಬರು ಊರಿಗೆ ಉತ್ತಮ ಹೆಸರು ದೊರಕಿದರೆ ಆ ಊರಿನ ಪ್ರತಿಯೊಬ್ಬರೂ ಅದರ ಫಲಾನುಭವಿಗಳಾಗುತ್ತಾರೆ. ಊರಿನ ಹೆಸರಿಗೆ ಕಳಂಕ ಬಂದರೆ ಮತ್ತೆ ಅದು ಶಾಸ್ವತವಾಗಿ ಉಳಿದು ಅದರ ದುಷ್ಫರಿಣಾಮ ಎಲ್ಲರೂ ಅನುಭವಿಸ ಬೇಕಾಗುತ್ತದೆ ಎಂದರು. ಸ್ವಂತ ಅನುಭವವನ್ನು ಇದಕ್ಕೆ ಉಧಾಹರಣೆಯಾಗಿ ನೀಡಿದ ದಾರಿಮಿಯವರು,
ಹಳೆಯ ಕಾಲದಲ್ಲಿ ಉಪ್ಪಿನಂಗಡಿ ಸಂತೆಯಲ್ಲಿ ತನ್ನ ಸುರಿಬೈಲು ಊರಿನವರು ಅಡಿಕೆ ವ್ಯಾಪಾರಕ್ಕೆ ಹೆಚ್ಚಾಗಿ ಬರುತ್ತಿದ್ದರು.ಅಲ್ಲಿ ಅವರು ಪ್ರಾಮಾಣಿಕತೆ ಗೆ ಹೆಸರಾಗಿದ್ದರು. ತಾನು ಅಂದು ಉಪ್ಪಿನಂಗಡಿ ಮಸೀದಿಗೆ ಖತೀಬ್ ಆಗಿ ಸೇವೆಗೆ ಸೇರುವಾಗ ಮಸೀದಿಯ ಅಧಿಕಾರಿಗಳು ತನ್ನ ಊರು ತಿಳಿದುಕೊಂಡು ಸಂತೋಷದಿಂದ ಶಿಪಾರಸ್ಸು ಮಾಡಿದ್ದರು.ಹೀಗೆ ಪ್ರತಿಯೊಂದು ಊರಿನವರೂ ಅವರವರ ಊರಿನ ಬಗ್ಗೆ ಅಭಿಮಾನ ಇಟ್ಟು ಕೊಂಡು ತನ್ನ ಊರಿಗೆ ,ಕುಟುಂಬಕ್ಕೆ,ಸಂಘಟನೆಗೆ,ಪಕ್ಷಕ್ಕೆ ಕಲಂಕ ಬಾರದಂತೆ ಎಚ್ಚರ ವಹಿಸುವ ಕೆಲಸ ಮಾಡಿದರೆ ಅದೊಂದು ದೊಡ್ಡ ಸೇವೆಯಾಗಿ ಪರಿಗಣಿಸಲ್ಪಡುತ್ತದೆ ಎಂದು ನುಡಿದರು.
— ಝುಹ್ರಿ ಪುಣಚ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.