ಚೆನ್ನೈ (www.vknews.in): ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ನೀಲಂಕರೈನಲ್ಲಿರುವ ಅವರ ನಿವಾಸದಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದು, ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ದಿದ್ದಾರೆ.
ತಂಜಾವೂರಿನಲ್ಲಿ ಡಿಎಂಕೆ ಆಯೋಜಿಸಿದ್ದ ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತ ಪ್ರತಿಭಟನಾ ರ್ಯಾಲಿಯಲ್ಲಿ ಉದಯನಿಧಿ ಸ್ಟಾಲಿನ್ ಮಾಡಿದ ಭಾಷಣವೇ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ಒಂದು ಹನಿ ನೀರು ಕೂಡ ಸಿಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಕಾಳಜಿ ವಹಿಸುತ್ತಿಲ್ಲ ಎಂದು ಉದಯನಿಧಿ ಸ್ಟಾಲಿನ್ ಮುಖ್ಯಮಂತ್ರಿ ವಿಜಯ್ ಅವರನ್ನು ಟೀಕಿಸಿದ್ದರು.
“ಕಾವೇರಿ ಮುಖಜ ಭೂಮಿಯಲ್ಲಿರುವ ಎಲ್ಲಾ ನದಿಗಳು ಇಂದು ಒಣಗಿ ಹೋಗಿದ್ದು, ಮರುಭೂಮಿಯಂತೆ ಕಾಣುತ್ತಿವೆ. ನಮ್ಮ ನಾಯಕ ಈಗ ಮುಖ್ಯಮಂತ್ರಿಯಾಗಿದ್ದರೆ, ಈ ಪರಿಸ್ಥಿತಿ ಉದ್ಭವಿಸುತ್ತಿತ್ತೇ? ಇಂತಹ ಪರಿಸ್ಥಿತಿ ಎದುರಾಗಲು ನಮ್ಮ ನಾಯಕ ಅವಕಾಶ ನೀಡುತ್ತಿದ್ದರೇ?” ಎಂದು ಅವರು ಪ್ರಶ್ನಿಸಿದ್ದರು.
ಈ ವೇಳೆ ಪ್ರತಿಭಟನಾ ಸಭೆಯಲ್ಲಿದ್ದ ಕೆಲವರು ನಟಿ ತ್ರಿಷಾ ಅವರ ಹೆಸರನ್ನು ಜೋರಾಗಿ ಕೂಗಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ತಮ್ಮ ಭಾಷಣವನ್ನು ಕೆಲಕಾಲ ನಿಲ್ಲಿಸಿ ದ್ವಂದ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಉದಯನಿಧಿ ಅವರ ಹೇಳಿಕೆಯನ್ನು ಆಡಳಿತಾರೂಢ ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ಹಾಗೂ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಹೇಳಿಕೆ ಅಶ್ಲೀಲ ಹಾಗೂ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಉದಯನಿಧಿ ಸ್ಟಾಲಿನ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಪೊಲೀಸರಿಗೆ ದೂರು ಸಲ್ಲಿಕೆಯಾದ ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಉದಯನಿಧಿ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಅವರ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಿಎಂಕೆ ಕಾರ್ಯಕರ್ತರು ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ಘರ್ಷಣೆಯ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಉದಯನಿಧಿ ಅವರನ್ನು ತಮ್ಮ ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.
ಪೊಲೀಸ್ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಉದಯನಿಧಿ ಸ್ಟಾಲಿನ್, ತಮ್ಮ ವಿರುದ್ಧದ ಕ್ರಮವನ್ನು ರಾಜಕೀಯ ಪ್ರೇರಿತ ಹಾಗೂ ತಮಾಷೆಯ ನಡೆ ಎಂದು ಪರಿಗಣಿಸುವುದಾಗಿ, ಪ್ರಕರಣವನ್ನು ಕಾನೂನುಬದ್ಧವಾಗಿ ಎದುರಿಸುವುದಾಗಿ ಹೇಳಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಅವರು ನಗುತ್ತಲೇ ಪ್ರತಿಕ್ರಿಯಿಸಿರುವುದು ಗಮನ ಸೆಳೆಯಿತು.
ಇದೇ ವೇಳೆ, ಉದಯನಿಧಿ ಸ್ಟಾಲಿನ್ ಅವರ ಬಂಧನದ ಹಿಂದೆ ರಾಜಕೀಯ ಪೈಪೋಟಿಯಿದೆ ಎಂದು ಡಿಎಂಕೆ ಆರೋಪಿಸಿದೆ. ಪಕ್ಷದ ನಾಯಕ ಟಿ.ಕೆ.ಎಸ್. ಇಳಂಗೋವನ್ ಅವರು ಉದಯನಿಧಿ ಯಾರ ವಿರುದ್ಧವೂ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಉದಯನಿಧಿ ಅವರು ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ವಿಜಯ್ ಅವರ ವೈಫಲ್ಯಗಳನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಅವರ ಭಾಷಣದಲ್ಲಿ ಯಾವುದೇ ನಿಂದನೀಯ ಅಂಶವಿರಲಿಲ್ಲ ಎಂದು ಇಳಂಗೋವನ್ ಹೇಳಿದ್ದಾರೆ. ಅಲ್ಲದೆ, ಉದಯನಿಧಿ ತಮ್ಮ ಭಾಷಣದಲ್ಲಿ ನಟಿ ತ್ರಿಷಾ ಅವರ ಹೆಸರನ್ನೇ ಉಲ್ಲೇಖಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ನೀರು ಹಂಚಿಕೆ ವಿವಾದದ ಪ್ರತಿಭಟನಾ ರ್ಯಾಲಿಯಲ್ಲಿ ನೀಡಲಾದ ಹೇಳಿಕೆ ಇದೀಗ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪ್ರಕರಣ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.