ನವದೆಹಲಿ (www.vknews.in): ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ತೀವ್ರ ಪ್ರಕ್ಷುಬ್ಧತೆ (Turbulence) ಎದುರಿಸಿದ ಪರಿಣಾಮ ಕೆಲವು ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಮಂಗಳವಾರ ನಡೆದಿದೆ.
ಏರ್ ಇಂಡಿಯಾದ ಎಐ 2379 ವಿಮಾನವು 134 ಪ್ರಯಾಣಿಕರನ್ನು ಹೊತ್ತು ಫುಕೆಟ್ನಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ವಿಮಾನವು ಇಳಿಯುವ ಸಂದರ್ಭದಲ್ಲಿ ಹಠಾತ್ ಎತ್ತರ ಬದಲಾವಣೆಗೆ ಒಳಗಾಗಿದ್ದು, ಪ್ರಕ್ಷುಬ್ಧತೆಯಿಂದಾಗಿ ವಿಮಾನದೊಳಗಿದ್ದ ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಬೆಳಗ್ಗೆ 11 ಗಂಟೆಯ ನಂತರ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಗಾಯಗೊಂಡ ಸುಮಾರು 10 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆ ಮತ್ತು ಅಗತ್ಯ ಚಿಕಿತ್ಸೆಗಾಗಿ ವಿಮಾನ ನಿಲ್ದಾಣದಲ್ಲಿರುವ ಮೇದಾಂತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಘಟನೆ ಕುರಿತು ಏರ್ ಇಂಡಿಯಾ ವಕ್ತಾರರು ಪ್ರತಿಕ್ರಿಯಿಸಿ, ಎಐ 2379 ವಿಮಾನವು ಹಾರಾಟದ ವೇಳೆ ಸ್ವಲ್ಪ ಸಮಯ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು. ಇದರಿಂದ ವಿಮಾನದ ಎತ್ತರದಲ್ಲಿ ತಾತ್ಕಾಲಿಕ ಬದಲಾವಣೆ ಸಂಭವಿಸಿತ್ತು ಎಂದು ತಿಳಿಸಿದ್ದಾರೆ. ವಿಮಾನವು ಯಾವುದೇ ತೊಂದರೆಯಿಲ್ಲದೆ ದೆಹಲಿಯಲ್ಲಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಸಣ್ಣಪುಟ್ಟ ಗಾಯಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಾಗಿದ್ದು, ಸಂಬಂಧಪಟ್ಟ ಸಂಸ್ಥೆಗಳ ಸಹಯೋಗದಲ್ಲಿ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.