ಮಂಡ್ಯ (www.vknews.in): ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ, ಅವರ ಮನೆಯಲ್ಲಿ ಮೂಟೆಗಟ್ಟಲೆ ನಗದು ಹಣ ಪತ್ತೆಯಾಗಿರುವ ಘಟನೆ ಮಂಡ್ಯದ ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಮನೆಯಲ್ಲಿ ಪತ್ತೆಯಾದ ಹಣದ ಮೊತ್ತ ಕಂಡು ಸ್ಥಳೀಯರು ಅಚ್ಚರಿಗೆ ಒಳಗಾಗಿದ್ದಾರೆ.
ಮೃತ ವೃದ್ಧೆಯನ್ನು ನೂರ್ ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಆಸರೆ ಇಲ್ಲದೆ ಹಲವು ವರ್ಷಗಳಿಂದ ಮಂಡ್ಯ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ನೂರ್ ಅವರು, ಶನಿವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ವೃದ್ಧೆಯ ನಿಧನದ ಬಳಿಕ ಸಂಬಂಧಿಕರು ಹಾಗೂ ಸ್ಥಳೀಯರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಬಳಿಕ ನೂರ್ ವಾಸವಿದ್ದ ಮನೆಗೆ ತೆರಳಿ ಪರಿಶೀಲಿಸಿದಾಗ ಚೀಲಗಳಲ್ಲಿ ತುಂಬಿದ್ದ ನಾಣ್ಯಗಳು ಹಾಗೂ ಪ್ಲಾಸ್ಟಿಕ್ ಕವರ್ಗಳಲ್ಲಿ ಸುತ್ತಿಟ್ಟಿದ್ದ ನೋಟಿನ ಕಂತೆಗಳು ಪತ್ತೆಯಾಗಿವೆ.
ಮನೆಯಲ್ಲಿ ಪತ್ತೆಯಾದ ಹಣವನ್ನು ಸ್ಥಳೀಯರು ಹಾಗೂ ಸಂಬಂಧಿಕರು ಒಟ್ಟಾಗಿ ಕುಳಿತು ಬೆಳಗ್ಗಿನಿಂದ ಸಂಜೆಯವರೆಗೆ ಎಣಿಕೆ ನಡೆಸಿದ್ದಾರೆ. ನಾಣ್ಯಗಳು ಮತ್ತು ನೋಟುಗಳನ್ನು ಲೆಕ್ಕ ಹಾಕಿದಾಗ ಒಟ್ಟು ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ ಎನ್ನಲಾಗಿದೆ. ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ಧೆಯ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿರುವುದು ಗುತ್ತಲು ಬಡಾವಣೆ ಸೇರಿದಂತೆ ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಘಟನೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯ ಮುಖಂಡರು ಹಾಗೂ ಸಂಬಂಧಿಕರ ನಡುವೆ ಮಾತುಕತೆ ನಡೆಸಿದ ಬಳಿಕ ಪತ್ತೆಯಾದ ಸಂಪೂರ್ಣ ಹಣವನ್ನು ಮೃತ ನೂರ್ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.