ಬೆಂಗಳೂರು (www.vknews.in): ಆರ್ಎಸ್ಎಸ್ ವಿಚಾರವಾಗಿ ತಮ್ಮ ಪ್ರಶ್ನೆಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಕುರಿತು ತಾವು ಕೇಳಿದ ಪ್ರಶ್ನೆಗಳಿಗೆ ಅಶೋಕ್ ಅವರು ಹೆಚ್ಚು ಚಿಂತಿತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದು, ಕೆಪಿಎಸ್ಸಿ ನೇಮಕಾತಿ ಸೇರಿದಂತೆ ತಾವು ಪ್ರಸ್ತಾಪಿಸಿರುವ ಹಲವು ವಿಚಾರಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.
“ಅಶೋಕ್ ಅಣ್ಣಾ, ಆರ್ಎಸ್ಎಸ್ ಕುರಿತು ಮರಿ ಖರ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ನೀವು ತುಂಬಾ ಚಿಂತೆಗೀಡಾಗಿದ್ದೀರಿ. ಆದರೆ, ನೀವು ಉತ್ತರಿಸಬೇಕಾದ ನಿಜವಾದ ಪ್ರಶ್ನೆಗಳಿವೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಂದುವರಿದು, “ಮರಿ ಅಶೋಕ್ ಏಕೆ ಗಣವೇಶ ಧರಿಸಿಲ್ಲ? ಮರಿ ಅಶೋಕ್ ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ? ಮರಿ ಅಶೋಕ್ ಇನ್ನೂ ‘ಧರ್ಮರಕ್ಷಕ’ನಾಗಿ ಏಕೆ ಆಗಿಲ್ಲ? ಹಿರಿ ಅಶೋಕ್ ಅವರು ಈ ಪ್ರಶ್ನೆಗಳಿಗೆ ಯಾವಾಗ ಉತ್ತರಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಬಸವರಾಜ ಕನ್ನಾಳೆ ಅವರ ವಿಚಾರವನ್ನೂ ಪ್ರಸ್ತಾಪಿಸಿರುವ ಸಚಿವರು, “ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಯಾವಾಗ ಮಾತನಾಡುತ್ತೀರಿ? ಬಸವರಾಜ ಕನ್ನಾಳೆ ಬಗ್ಗೆ ಯಾವಾಗ ಮಾತನಾಡುತ್ತೀರಿ?” ಎಂದು ಅಶೋಕ್ ಅವರನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ, ಕೆಪಿಎಸ್ಸಿ ಸದಸ್ಯರು ಹಾಗೂ ಅಧ್ಯಕ್ಷರ ನೇಮಕಕ್ಕೆ ಬಿಜೆಪಿ ನಾಯಕರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಆರೋಪದ ಕುರಿತು ಅಶೋಕ್ ಯಾವಾಗ ಮಾತನಾಡುತ್ತಾರೆ? ಪಕ್ಷಕ್ಕೆ ಸೇರಿದವರ ಚಿತ್ರಗಳ ಬಗ್ಗೆ ಯಾವಾಗ ಮಾತನಾಡುತ್ತೀರಿ? ಎಂದೂ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಈ ಮೂಲಕ ಆರ್ಎಸ್ಎಸ್ ಕುರಿತ ಚರ್ಚೆಯ ನಡುವೆಯೇ ಕೆಪಿಎಸ್ಸಿ ನೇಮಕಾತಿ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಆರ್. ಅಶೋಕ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.