ಬೆಂಗಳೂರು (www.vknews.in): ಮೊಹಮ್ಮದ್ ಶಮಿ ಮತ್ತು ಮುಖೇಶ್ ಕುಮಾರ್ ಅವರ ಅಬ್ಬರದ ಬೌಲಿಂಗ್ ನೆರವಿನಿಂದ ಈಸ್ಟ್ ಝೋನ್ ತಂಡ ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ವಿರುದ್ಧ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿ ದುಲೀಪ್ ಟ್ರೋಫಿ ಫೈನಲ್ಗೆ ಪ್ರವೇಶಿಸಿದೆ.
ಬೆಂಗಳೂರಿನಲ್ಲಿ ನಡೆದ ಸೆಮಿಫೈನಲ್ ಪಂದ್ಯದ ಮೂರನೇ ದಿನವೇ ಈಸ್ಟ್ ಝೋನ್ ಗೆಲುವಿನ ನಗೆ ಬೀರಿತು. 2012-13ರ ಆವೃತ್ತಿಯ ಚಾಂಪಿಯನ್ ಆಗಿರುವ ಈಸ್ಟ್ ಝೋನ್, ಸೆಪ್ಟೆಂಬರ್ 6ರಿಂದ ಚೆಪಾಕ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಸೌತ್ ಝೋನ್ ಅಥವಾ ನಾರ್ತ್ ಝೋನ್ ತಂಡವನ್ನು ಎದುರಿಸಲಿದೆ. ಎರಡನೇ ಇನಿಂಗ್ಸ್ನಲ್ಲಿ ಸೆಂಟ್ರಲ್ ಝೋನ್ ತಂಡವನ್ನು ಕೇವಲ 158 ರನ್ಗಳಿಗೆ ಕಟ್ಟಿಹಾಕುವಲ್ಲಿ ಶಮಿ ಮತ್ತು ಮುಖೇಶ್ ಪ್ರಮುಖ ಪಾತ್ರವಹಿಸಿದರು. ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರೆ, ಮುಖೇಶ್ ಕುಮಾರ್ 4 ವಿಕೆಟ್ ಪಡೆದು ಸೆಂಟ್ರಲ್ ಝೋನ್ ಬ್ಯಾಟಿಂಗ್ ಪಡೆಯನ್ನು ಕಂಗೆಡಿಸಿದರು.
159 ರನ್ಗಳ ಗುರಿ ಬೆನ್ನಟ್ಟಿದ ಈಸ್ಟ್ ಝೋನ್ಗೆ ಆರಂಭದಲ್ಲಿ ವೈಭವ್ ಸೂರ್ಯವಂಶಿ ಹಾಗೂ ಅಭಿಮನ್ಯು ಈಶ್ವರನ್ ಉತ್ತಮ ಆರಂಭ ನೀಡಿದರು. ಸೂರ್ಯವಂಶಿ ಮೊದಲಿಗೆ ಎಚ್ಚರಿಕೆಯ ಆಟವಾಡಿ 30 ಎಸೆತಗಳಲ್ಲಿ 15 ರನ್ ಗಳಿಸಿದರೂ, ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ಗೆ ಮುಂದಾದರು. ಯಶ್ ಠಾಕೂರ್ ಅವರ 14ನೇ ಓವರ್ನಲ್ಲಿ ಸೂರ್ಯವಂಶಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಆದರೆ ಇದೇ ಓವರ್ನಲ್ಲಿ ಅವರು ಔಟಾದರು. ರಜತ್ ಪಾಟೀದಾರ್ ಅತ್ಯುತ್ತಮ ರನ್ನಿಂಗ್ ಕ್ಯಾಚ್ ಹಿಡಿದು ಅವರ ಇನ್ನಿಂಗ್ಸ್ಗೆ ತೆರೆ ಎಳೆದರು.
ಸೂರ್ಯವಂಶಿ ವಿಕೆಟ್ ಪತನದ ಬಳಿಕ ಈಸ್ಟ್ ಝೋನ್ ತಂಡ ಸತತವಾಗಿ ವಿಕೆಟ್ ಕಳೆದುಕೊಂಡಿತು. ಹರ್ಷ್ ದುಬೆ ಅವರು ಕುಮಾರ್ ಕುಶಾಗ್ರ ಹಾಗೂ ಅನುಕೂಲ್ ರಾಯ್ ಅವರನ್ನು ಔಟ್ ಮಾಡುವ ಮೂಲಕ ಈಸ್ಟ್ ಝೋನ್ ತಂಡವನ್ನು 5 ವಿಕೆಟ್ಗೆ 124 ರನ್ಗಳ ಸ್ಥಿತಿಗೆ ತಂದರು. ಆದರೆ ನಾಯಕ ಇಶಾನ್ ಕಿಶನ್ ಜವಾಬ್ದಾರಿಯುತ ಆಟವಾಡಿ ಅಜೇಯ 39 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇನ್ನು ಟೀಂ ಇಂಡಿಯಾದಿಂದ ಹೊರಗುಳಿದಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತೊಮ್ಮೆ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಶಮಿ 3/56 ಹಾಗೂ ಮುಖೇಶ್ ಕುಮಾರ್ 4/44 ಬೌಲಿಂಗ್ ಪ್ರದರ್ಶನ ನೀಡಿ ಸೆಂಟ್ರಲ್ ಝೋನ್ಗೆ ಆಘಾತ ನೀಡಿದರು. ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ಗಳನ್ನು ಕಬಳಿಸಿದ ಮುಖೇಶ್ ಕುಮಾರ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಶಮಿ ಅವರ ಈ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನವು ಮುಂಬರುವ ಭಾರತ ತಂಡದ ಆಯ್ಕೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗಮನ ಸೆಳೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.