ಬೆಳಗಾವಿ (www.vknews.in): ಹಿಂಡಲಗಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಹಾಗೂ ರೌಡಿಶೀಟರ್ನೊಂದಿಗೆ ಅಕ್ರಮ ಸಂಪರ್ಕ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ (KSISF) ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಜಯಶ್ರೀ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ತುಮಕೂರಿನ ಕುಣಿಗಲ್ ಮೂಲದ ಹಾಗೂ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸಾಯಿಕುಮಾರ್ ಅಲಿಯಾಸ್ ಸುರೇಶ್ ಎಂಬಾತನೊಂದಿಗೆ ಜಯಶ್ರೀ ಅವರು ವೀಡಿಯೋ ಕಾಲ್ ಹಾಗೂ ಅಕ್ರಮ ಸಂಪರ್ಕ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಇಲಾಖಾ ವಿಚಾರಣೆಯ ಹಿನ್ನೆಲೆಯಲ್ಲಿ ಆಂತರಿಕ ಭದ್ರತಾ ವಿಭಾಗದ (ISD) ಐಜಿಪಿ ಕೆ. ತ್ಯಾಗರಾಜನ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಜೈಲಿನಲ್ಲಿದ್ದ ಕೈದಿಗೆ ಮೊಬೈಲ್ ಒದಗಿಸಿ, ಆತನೊಂದಿಗೆ ವೀಡಿಯೋ ಕಾಲ್ನಲ್ಲಿ ಅಶ್ಲೀಲವಾಗಿ ವರ್ತಿಸಿರುವ ದೃಶ್ಯಗಳು ಹಾಗೂ ಆಡಿಯೋ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರಿಂದ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದಲ್ಲದೆ, ಕೈದಿಯ ಬ್ಯಾಂಕ್ ಖಾತೆ ಹಾಗೂ ಆತನ ತಾಯಿಯ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು, ಕೈದಿಗೆ ಸೇರಿದ ಸ್ಕೂಟರ್ ಮತ್ತು ಸ್ವಿಫ್ಟ್ ಕಾರನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಚಾಟ್ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ವೀಡಿಯೋ ವೈರಲ್ ಆದ ಬಳಿಕ ಸಾಯಿಕುಮಾರ್ನನ್ನು ಎನ್ಕೌಂಟರ್ ಮಾಡಿಸುವ ಕುರಿತು ಜಯಶ್ರೀ ಅವರು ನಡೆಸಿದ್ದಾರೆನ್ನಲಾದ ಆಡಿಯೋ ಸಂಭಾಷಣೆಯೂ ಬೆಳಕಿಗೆ ಬಂದಿತ್ತು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆಯ ಮೇರೆಗೆ ಇಲಾಖೆಯಿಂದ ಆಂತರಿಕ ತನಿಖೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಕರ್ತವ್ಯ ಲೋಪ, ಅಶಿಸ್ತು ಹಾಗೂ ಅಧಿಕಾರ ದುರುಪಯೋಗ ಕಂಡುಬಂದ ಹಿನ್ನೆಲೆಯಲ್ಲಿ ಜಯಶ್ರೀ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.